TOP NEWS

Anant Nag: ಮೋದಿ ಹೊಗಳಿದ್ದಕ್ಕೆ ಪ್ರಶಸ್ತಿ ಸಿಕ್ತಾ?: ಟ್ರೋಲ್‌ಗೆ ನಟ ಅನಂತ್ ನಾಗ್ ಖಡಕ್ ತಿರುಗೇಟು!

Anant Nag Responds to Trolls Veteran Actor Defends Dadasaheb Phalke Award and Praise for PM Modi

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅತ್ಯಂತ ಅಪರೂಪದ ಹಾಗೂ ಪ್ರತಿಭಾವಂತ ನಟರಲ್ಲಿ ಹಿರಿಯ ಕಲಾವಿದ ಅನಂತ್ ನಾಗ್ (Anant Nag) ಒಬ್ಬರು. ತಮ್ಮ ಸಹಜ ಅಭಿನಯ ಹಾಗೂ ವೈವಿಧ್ಯಮಯ ಪಾತ್ರಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿರುವ ಅವರು, ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಅದ್ಭುತ ಕಲಾವಿದನಿಗೆ ಚಿತ್ರರಂಗದ ಅತ್ಯುನ್ನತ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಒಲಿದುಬಂದಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯ. ಆದರೆ, ಈ ಪ್ರತಿಷ್ಠಿತ ಪುರಸ್ಕಾರ ಪ್ರಕಟವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅನಂತ್ ನಾಗ್ ವಿರುದ್ಧ ಕಿಡಿಕಾರಲು ಆರಂಭಿಸಿದ್ದು, ಪ್ರಶಸ್ತಿಯನ್ನು ರಾಜಕೀಯಕ್ಕೆ ಲಿಂಕ್ ಮಾಡಿ ನೆಗೆಟಿವ್ ಕಮೆಂಟ್ಸ್ ಮಾಡುತ್ತಿದ್ದಾರೆ.

ಟೀಕಾಕಾರರಿಗೆ ತಿರುಗೇಟು ನೀಡಿದ ನಟ

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಈ ವಿರೋಧಕ್ಕೆ ಮುಖ್ಯ ಕಾರಣ ಅನಂತ್ ನಾಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳು. ಅನಂತ್ ನಾಗ್ ಅವರು ಮೋದಿ ಅವರ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಹೊಗಳಿದ್ದಕ್ಕೇ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಕಳೆದ ಹಲವು ದಶಕಗಳಿಂದ ಚಿತ್ರರಂಗದಲ್ಲಿದ್ದು, ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವ ಮೇಧಾವಿ ನಟನಿಗೆ ಸಿಕ್ಕ ಈ ಗೌರವವನ್ನು ಸಹಿಸಿಕೊಳ್ಳಲಾಗದೆ, ಬೇರೆ ನಟರ ಹೆಸರುಗಳನ್ನು ಪ್ರಸ್ತಾಪಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಕನ್ನಡದ ಹಿರಿಯ ನಟನಿಗೆ ಸಿಕ್ಕ ಜಾಗತಿಕ ಮಟ್ಟದ ಗೌರವವನ್ನು ಅರಗಿಸಿಕೊಳ್ಳಲಾಗದೆ ಕೆಲವರು ಈ ರೀತಿ ವರ್ತಿಸುತ್ತಿದ್ದಾರೆ.

ಈ ಎಲ್ಲಾ ಟೀಕೆಗಳು ಮತ್ತು ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿರುವ ನಟ ಅನಂತ್ ನಾಗ್, ತಮ್ಮ ನಿಲುವಿಗೆ ಈಗಲೂ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಶೀಘ್ರದಲ್ಲೇ 80 ವರ್ಷಗಳಾಗಲಿವೆ, ಆದರೆ ಈವರೆಗೂ ಭಾರತ ದೇಶ ನರೇಂದ್ರ ಮೋದಿ ಅವರಂತಹ ಪ್ರಭಾವಿ ಹಾಗೂ ದೂರದೃಷ್ಟಿಯ ನಾಯಕನನ್ನು ಕಂಡಿಲ್ಲ ಎಂಬುದು ನನ್ನ ಖಚಿತ ಅಭಿಪ್ರಾಯ. ಭಾರತದ ಆರ್ಥಿಕತೆಯ ಏರಿಕೆ, ದೇಶಾದ್ಯಂತ ನಡೆಯುತ್ತಿರುವ ಅಭಿವೃದ್ಧಿ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಗತಿಯನ್ನು ಕಣ್ಣಾರೆ ಕಂಡ ಯಾರೇ ಆದರೂ ಮೋದಿಯವರನ್ನು ಶ್ಲಾಘಿಸುತ್ತಾರೆ. ಇದರಲ್ಲಿ ಯಾವುದೇ ಅತಿಶಯೋಕ್ತಿ ಅಥವಾ ವೈಯಕ್ತಿಕ ಲಾಭದ ಹಿತಾಸಕ್ತಿ ಇಲ್ಲ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಕೈಲಾಗದವನು ಮೈಪರಚಿಕೊಂಡ

ಇನ್ನು ತಮ್ಮ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡುತ್ತಿರುವವರ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, “ಕೈಲಾಗದವನು ಮೈ ಪರಚಿಕೊಂಡ” ಎಂಬ ಗಾದೆಯಂತೆ ಕೆಲವರ ಸ್ಥಿತಿ ಆಗಿದೆ ಎಂದು ತಿರುಗೇಟು ನೀಡಿದ್ದಾರೆ. “ನಾನು ವಯಸ್ಸಿನಲ್ಲಿ ಪ್ರಧಾನಿ ಮೋದಿ ಅವರಿಗಿಂತ ಎರಡು ವರ್ಷ ದೊಡ್ಡವನು. ಸುಖಾಸುಮ್ಮನೆ ಯಾರನ್ನೂ ಹೊಗಳಿ ನನಗಾಗಬೇಕಾದ ಲಾಭವೇನೂ ಇಲ್ಲ. ದೇಶಕ್ಕೆ ಒಳ್ಳೆಯದನ್ನು ಮಾಡುತ್ತಿರುವ ಒಬ್ಬ ನಾಯಕನನ್ನು ಬೆಂಬಲಿಸಿದರೆ ಅಥವಾ ಹೊಗಳಿದರೆ ಅದನ್ನು ಸಹಿಸದೆ ಕೆಟ್ಟದಾಗಿ ಮಾತನಾಡುವುದರಲ್ಲಿ ಏನು ಪ್ರಯೋಜನ? ನಮ್ಮ ದೇಶಕ್ಕೆ ಮೋದಿ ಅವರಂತಹ ದಕ್ಷ ನಾಯಕ ಸಿಕ್ಕಿರುವುದೇ ನಮ್ಮ ಪುಣ್ಯ. ಅವರ ಸಾಧನೆಗಳೇ ಅವರ ಶಕ್ತಿ ಏನೆಂಬುದನ್ನು ನಿರೂಪಿಸುತ್ತಿವೆ” ಎಂದು ಅನಂತ್ ನಾಗ್ ಖಡಕ್ ಆಗಿ ಉತ್ತರಿಸಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಏಕಾಏಕಿ ಮೊಳಗಿದ ಡೇಂಜರ್ ಸೈರನ್: ನಿದ್ದೆಗಣ್ಣಿನಲ್ಲೇ ಎದ್ದು ಓಡಿಬಂದ ಸ್ಪರ್ಧಿಗಳು!

Leave a Reply

Your email address will not be published. Required fields are marked *