TOP NEWS

GBA: ಪೌರಕಾರ್ಮಿಕರಿಗೆ ಜಿಬಿಎ ಸಿಹಿಸುದ್ದಿ: ಮೂರು ವರ್ಷಗಳ ಬಳಿಕ ಸಿಗಲಿದೆ ಬೋನಸ್ ಭಾಗ್ಯ!

Good news for Bengaluru Pourakarmikas as GBA Greenlights Bonus After Three Years

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಬೋನಸ್ ಸಿಗದೆ ಕಾಯುತ್ತಿದ್ದ ರಾಜಧಾನಿಯ ಪೌರಕಾರ್ಮಿಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೊನೆಗೂ ಸಿಹಿಸುದ್ದಿ ನೀಡಿದೆ. ಜಿಬಿಎ ವ್ಯಾಪ್ತಿಯ ಒಟ್ಟು ಐದು ನಗರಪಾಲಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 14 ಸಾವಿರ ಕಾರ್ಮಿಕರಿಗೆ ಈ ಬಾರಿ ಬೋನಸ್ ವಿತರಿಸಲು ಪ್ರಾಧಿಕಾರ ಗ್ರೀನ್ ಸಿಗ್ನಲ್ ನೀಡಿದೆ.

ಈ ಯೋಜನೆಯಡಿ ಸುಮಾರು 12,600 ಕಾಯಂ ನೌಕರರು ಹಾಗೂ 1,500 ಗುತ್ತಿಗೆ ಆಧಾರಿತ ಪೌರಕಾರ್ಮಿಕರು ಸೌಲಭ್ಯ ಪಡೆಯಲಿದ್ದಾರೆ. ಪ್ರತಿಯೊಬ್ಬ ಕಾರ್ಮಿಕನಿಗೂ ತಲಾ 22 ಸಾವಿರ ರೂಪಾಯಿ ಬೋನಸ್ ನೀಡುವ ಪ್ರಸ್ತಾವನೆ ಸಿದ್ಧವಾಗಿದ್ದು, ಇದಕ್ಕಾಗಿ ಪ್ರಾಧಿಕಾರವು ಸುಮಾರು 30 ಕೋಟಿ ರೂಪಾಯಿ ವೆಚ್ಚ ಮಾಡಲು ಮುಂದಾಗಿದೆ.

ಆಯುಕ್ತರ ಸಭೆಯಲ್ಲಿ ಒಪ್ಪಿಗೆ ಕಳೆದ ಮೂರು ವರ್ಷಗಳಿಂದ ತಮಗೆ ಯಾವುದೇ ಬೋನಸ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪೌರಕಾರ್ಮಿಕರು ಕಳೆದ ಎರಡು ತಿಂಗಳಿಂದ ಜಿಬಿಎ ಮುಖ್ಯ ಆಯುಕ್ತರಿಗೆ ಸತತವಾಗಿ ಮನವಿ ಸಲ್ಲಿಸುತ್ತಿದ್ದರು. ಕಾರ್ಮಿಕರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಬಿಎ ಮುಖ್ಯ ಆಯುಕ್ತರು, ಐದು ನಗರಪಾಲಿಕೆಗಳ ಆಯುಕ್ತರೊಂದಿಗೆ ಮಹತ್ವದ ಸಭೆ ನಡೆಸಿ ಬೋನಸ್ ನೀಡಲು ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ತಿಂಗಳಾಂತ್ಯಕ್ಕೆ ಸಿಎಂ ಕೈಯಿಂದ ವಿತರಣೆ? ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪೌರಕಾರ್ಮಿಕರ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ಈ ಬೋನಸ್ ಹಣವನ್ನು ಹಸ್ತಾಂತರಿಸಲು ಜಿಬಿಎ ನಿರ್ಧರಿಸಿದೆ. ಇದೇ ಆಗಸ್ಟ್ ಕೊನೆಯ ವಾರದಲ್ಲಿ ಜಿಬಿಎ ಕೇಂದ್ರ ಕಚೇರಿಯ ಡಾ. ರಾಜ್‌ಕುಮಾರ್ ಗಾಜಿನಮನೆಯಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದ್ದು, ಖುದ್ದು ಮುಖ್ಯಮಂತ್ರಿಗಳೇ ಆಗಮಿಸಿ ಬೋನಸ್ ವಿತರಿಸುವ ಸಾಧ್ಯತೆ ಇದೆ.

ನಗರದ ಸ್ವಚ್ಛತೆಗಾಗಿ ದಿನದ 24 ಗಂಟೆಯೂ ಶ್ರಮಿಸುವ ಪೌರಕಾರ್ಮಿಕರ ಹಿತದೃಷ್ಟಿಯಿಂದ ಪ್ರಾಧಿಕಾರ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಮೂರು ವರ್ಷಗಳ ನಿರಾಸೆಯ ನಂತರ ಸಿಕ್ಕ ಈ ಸಿಹಿಸುದ್ದಿ ಕಾರ್ಮಿಕರ ಮುಖದಲ್ಲಿ ನೆಮ್ಮದಿಯ ನಗು ತಂದಿದೆ.

ಇದನ್ನೂ ಓದಿ: ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ: ರೆಡ್ ಜೋನ್ ನಿಂದ ನಮಗೆ ಮುಕ್ತಿ ಬೇಕು, ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಬಿಡದಿ ರೈತರ ಮನವಿ

Leave a Reply

Your email address will not be published. Required fields are marked *