TOP NEWS

Aamir Khan: ಸಿಂಗಾಪುರ ಚಿತ್ರೋತ್ಸವದಲ್ಲಿ ಕಣ್ಣೀರಾದ ‘ಮಿಸ್ಟರ್ ಪರ್ಫೆಕ್ಟ್‌ಷನಿಸ್ಟ್’

Emotional Aamir Khan Recalls COVID Lockdown Realization‌

ಸಿಂಗಾಪುರ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ಷನಿಸ್ಟ್ ನಟ ಆಮಿರ್ ಖಾನ್ (Aamir Khan) ಅವರು ಸಿಂಗಾಪುರದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾವನಾತ್ಮಕವಾಗಿ ಕಣ್ಣೀರು ಹಾಕಿದ ಘಟನೆ ನಡೆದಿದೆ. ಗುರುವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಅವರಿಗೆ ಪ್ರತಿಷ್ಠಿತ ‘ಸ್ಕ್ರೀನ್ ಐಕಾನ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಮ್ಮ ಮೂರು ದಶಕಗಳ ಸುದೀರ್ಘ ಸಿನಿಮಾ ಪಯಣ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ ಆಮಿರ್ ಖಾನ್, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ತಮಗೆ ಎದುರಾದ ಜೀವನದ ಕಹಿ ಸತ್ಯವನ್ನು ನೆನೆದು ಭಾವುಕರಾದರು.

ಬೇಸರ ವ್ಯಕ್ತಪಡಿಸಿದ ನಟ

ತಮ್ಮ ವೃತ್ತಿಜೀವನದ ಅತ್ಯಂತ ಕಷ್ಟದ ಹಂತದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆಮಿರ್, ತಾವು ಜೀವನವಿಡೀ ಕೆಲಸಕ್ಕೆ ದಾಸರಾಗಿದ್ದನ್ನು ಒಪ್ಪಿಕೊಂಡರು. ಸದಾ ಸಿನಿಮಾವನ್ನೇ ಉಸಿರಾಡುತ್ತಿದ್ದ ತಮ್ಮ ಹುಚ್ಚುತನದಿಂದಾಗಿ ಕುಟುಂಬದೊಂದಿಗೆ ಕಳೆದ ಅತ್ಯಮೂಲ್ಯ ಸಮಯವನ್ನು ಕಳೆದುಕೊಂಡಿದ್ದಾಗಿ ಬೇಸರ ವ್ಯಕ್ತಪಡಿಸಿದರು. ಕೋವಿಡ್ ಸಮಯದಲ್ಲಿ ಮನೆಯಲ್ಲಿ ಕುಳಿತಾಗ 30 ವರ್ಷಗಳ ಸಿನಿಪಯಣದಲ್ಲಿ ಮಕ್ಕಳು ಬೆಳೆದು ದೊಡ್ಡವರಾಗಿದ್ದೇ ತಿಳಿಯಲಿಲ್ಲ, ಪ್ರೀತಿಯ ಸಂಬಂಧಗಳಿಂದ ದೂರವಾಗಿದ್ದೆ ಎಂಬ ಸತ್ಯ ಅರಿವಾಯಿತು ಎಂದು ಹೇಳುತ್ತಲೇ ವೇದಿಕೆಯಲ್ಲೇ ಕಣ್ಣೀರಿಟ್ಟರು. ಆಮಿರ್ ಕಣ್ಣೀರು ಒರೆಸಿಕೊಳ್ಳುತ್ತಿದ್ದಾಗ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅವರ ಸಂವೇದನಾಶೀಲತೆಗೆ ಬೆಂಬಲ ಸೂಚಿಸಿದರು. 56ನೇ ವಯಸ್ಸಿನಲ್ಲೇ ಈ ಜ್ಞಾನೋದಯವಾಗಿದ್ದು ನನ್ನ ಭಾಗ್ಯ, ಅದೇ 86ನೇ ವಯಸ್ಸಿಗೆ ತಲುಪಿದ್ದರೆ ತಿದ್ದಿಕೊಳ್ಳಲು ಅವಕಾಶವಿರುತ್ತಿರಲಿಲ್ಲ ಎಂದು ಅವರು ಸಂತಸ ವ್ಯಕ್ತಪಡಿಸಿದರು.

‘3 ಈಡಿಯಟ್ಸ್ 2’ ಸ್ಕ್ರಿಪ್ಟ್ ಸಿದ್ಧ: ಅಭಿಮಾನಿಗಳಿಗೆ ಸಿಹಿಸುದ್ದಿ!

ಇದೇ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘3 ಈಡಿಯಟ್ಸ್’ ಸಿನಿಮಾದ ಸೀಕ್ವೆಲ್ ಬಗ್ಗೆಯೂ ಆಮಿರ್ ಖಾನ್ ಪ್ರಮುಖ ಸುಳಿವು ನೀಡಿದ್ದಾರೆ. 2009ರಲ್ಲಿ ತೆರೆಕಂಡು ಸಾರ್ವಕಾಲಿಕ ದಾಖಲೆ ಬರೆದಿದ್ದ ರಾಜಕುಮಾರ್ ಹಿರಾನಿ ನಿರ್ದೇಶನದ ಈ ಸೂಪರ್‌ಹಿಟ್ ಕ್ಯಾಂಪಸ್ ಕಾಮಿಡಿ ಸಿನಿಮಾದ ಎರಡನೇ ಭಾಗಕ್ಕಾಗಿ ಕಥೆ ಸಿದ್ಧವಾಗುತ್ತಿದೆ ಎಂಬುದನ್ನು ಆಮಿರ್ ಖಾನ್ ಸ್ಪಷ್ಟಪಡಿಸಿದ್ದಾರೆ.

ನಿರ್ದೇಶಕ ರಾಜಕುಮಾರ್ ಹಿರಾನಿ ಅವರು ಸದ್ಯ ‘3 ಈಡಿಯಟ್ಸ್’ ಮುಂದುವರಿದ ಭಾಗದ ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿದ್ದಾರೆ. ಸಿಂಗಾಪುರ ಪ್ರವಾಸದಿಂದ ಭಾರತಕ್ಕೆ ಮರಳಿದ ಮುಂದಿನ ಕೆಲವೇ ವಾರಗಳಲ್ಲಿ ರಾಜಕುಮಾರ್ ಹಿರಾನಿ ಅವರು ಅಂತಿಮ ಸ್ಕ್ರಿಪ್ಟ್‌ನ ನರೇಷನ್ ನೀಡಲಿದ್ದಾರೆ ಎಂದು ಆಮಿರ್ ಬಹಿರಂಗಪಡಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಈ ಬಹುನಿರೀಕ್ಷಿತ ಸೀಕ್ವೆಲ್ ಚಿತ್ರೀಕರಣ ಆರಂಭವಾಗಲಿದ್ದು, ಸಿನಿರಸಿಕರಿಗೆ ಮತ್ತೊಮ್ಮೆ ಬಾಲಿವುಡ್‌ನಿಂದ ಅದ್ಭುತ ಮನರಂಜನೆ ಸಿಗುವುದು ಖಚಿತವಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್: ಪವಿತ್ರಾ ಗೌಡ ಬ್ಯಾರಕ್ ಬದಲಾವಣೆ ಅರ್ಜಿ ನಾಳೆ ತೀರ್ಪು

Leave a Reply

Your email address will not be published. Required fields are marked *