TOP NEWS

Mojtaba Khamenei: ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಆರೋಗ್ಯದ ಬಗ್ಗೆ ಸ್ಪಷ್ಟನೆ: ದೇಶದ ಅಧ್ಯಕ್ಷರೊಂದಿಗೆ 7 ಗಂಟೆಗಳ ಕಾಲ ಮಹತ್ವದ ಸಭೆ!

Clearing the Air on Health Iran Supreme Leader Mojtaba Khamenei Holds 7 Hour High Level Meeting

ಟೆಹರಾನ್: ಅಮೆರಿಕ ಮತ್ತು ಇಸ್ರೇಲ್ ಜತೆಗಿನ ಭೀಕರ ಯುದ್ಧ ಹಾಗೂ ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ (Mojtaba Khamenei) ಅವರ ಆರೋಗ್ಯದ ಕುರಿತು ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿದ್ದ ಹಲವು ಅನುಮಾನಗಳು ಮತ್ತು ಊಹಾಪೋಹಗಳಿಗೆ ಅಧಿಕೃತವಾಗಿ ತೆರೆಬಿದ್ದಿದೆ. ಇರಾನ್‌ನ ಹಿರಿಯ ರಾಜತಾಂತ್ರಿಕ ಹಾಗೂ ಸರ್ವೋಚ್ಚ ನಾಯಕನ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಅವರು ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಮೊಜ್ತಾಬಾ ಖಮೇನಿ ಸಂಪೂರ್ಣ ಆರೋಗ್ಯವಾಗಿದ್ದು, ಸರ್ಕಾರದ ಪ್ರಮುಖ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ವಾರವಷ್ಟೇ ದೇಶದ ಅಧ್ಯಕ್ಷರು ಮೊಜ್ತಾಬಾ ಖಮೇನಿ ಅವರೊಂದಿಗೆ ಸಪಾಟಾಗಿ 7 ಗಂಟೆಗಳ ಕಾಲ ಸುದೀರ್ಘ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳೆದ ಎಂಟು ತಿಂಗಳ ಹಿಂದೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅವರ ತಂದೆ ಹಾಗೂ ಹಿಂದಿನ ಸರ್ವೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ ಅವರು ಸಾವನ್ನಪ್ಪಿದ್ದರು. ಅದೇ ದಾಳಿಯಲ್ಲಿ ಮೊಜ್ತಾಬಾ ಖಮೇನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದರು. ಅಂದಿನಿಂದ ಇದುವರೆಗೂ ಅವರು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೇರವಾಗಿ ಕಾಣಿಸಿಕೊಳ್ಳದ ಕಾರಣ ಅವರ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿತ್ತು. ತಂದೆಯ ಅಂತ್ಯಸಂಸ್ಕಾರದಲ್ಲೂ ಅವರು ಕಾಣಿಸಿಕೊಂಡಿಲ್ಲ ಎಂಬ ವರದಿಗಳಿದ್ದವು. ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ರಾಜತಾಂತ್ರಿಕರು, ಮೊಜ್ತಾಬಾ ಅವರು ಗುಪ್ತವಾಗಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

ಸುರಕ್ಷತಾ ಕಾರಣಗಳಿಂದ ನೆರಳಿನಲ್ಲೇ ಕಾರ್ಯಾಚರಣೆ ಹಾಗೂ ಭದ್ರತಾ ಕಾಳಜಿ!

ಯುದ್ಧದ ಪ್ರಕ್ಷುಬ್ಧ ವಾತಾವರಣ ಮತ್ತು ಸದಾ ಹಂತಕರ ಹಾಗೂ ವಿದೇಶಿ ದಾಳಿಯ ಭೀತಿ ಎದುರಾಗಿರುವ ಕಾರಣದಿಂದಾಗಿ ಮೊಜ್ತಾಬಾ ಖಮೇನಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತಿದ್ದಾರೆ. ಹಿಂಬಾಗಿಲ ರಾಜಕಾರಣದಲ್ಲಿ ಹಾಗೂ ತೆರೆಮರೆಯಲ್ಲೇ ಇದ್ದುಕೊಂಡು ದೇಶದ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಅವರು ಸಕ್ರಿಯರಾಗಿದ್ದಾರೆ. ಪ್ರಮುಖ ಸೈನ್ಯಾಧಿಕಾರಿಗಳು, ಸಂಸತ್ತಿನ ಸ್ಪೀಕರ್ ಹಾಗೂ ಸರ್ಕಾರದ ಉನ್ನತ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ದೇಶದ ಆರ್ಥಿಕತೆ, ಮಿಲಿಟರಿ ವ್ಯವಹಾರಗಳು ಹಾಗೂ ವಿದೇಶಿ ಸಂಬಂಧಗಳ ಬಗ್ಗೆ ಸಭೆಗಳನ್ನು ನಡೆಸಿ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಇರಾನ್ ಮೂಲಗಳು ಖಚಿತಪಡಿಸಿವೆ.

ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಕಾವು ಇರಾನ್‌ನ ಆರ್ಥಿಕತೆಯನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದ್ದು, ದೇಶವನ್ನು ಮುನ್ನಡೆಸುವ ನಾಯಕ ಯಾರು ಎಂಬ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟಂಪ್ ಸೇರಿದಂತೆ ಪಾಶ್ಚಿಮಾತ್ಯ ನಾಯಕರು ಹಲವು ಬಾರಿ ಪ್ರಶ್ನೆಗಳನ್ನು ಎತ್ತಿದ್ದರು. ಇರಾನ್‌ನಲ್ಲಿ ನಿರ್ಧಾರಗಳನ್ನು ಕೈಗೊಳ್ಳುವವರು ಯಾರೆಂಬ ಸ್ಪಷ್ಟತೆ ಇಲ್ಲ ಎಂದು ಅಮೆರಿಕ ಆರೋಪಿಸಿತ್ತು. ಇದಕ್ಕೆ ತಿರುಗೇಟು ನೀಡಿರುವ ಇರಾನ್ ವಿದೇಶಾಂಗ ಇಲಾಖೆ, ತಮ್ಮ ದೇಶದ ಆಡಳಿತ ವ್ಯವಸ್ಥೆ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಅಮೆರಿಕದ ನಾಯಕರಿಗೆ ಚೆನ್ನಾಗಿ ತಿಳಿದಿದೆ ಎಂದು ಸ್ಪಷ್ಟಪಡಿಸಿದೆ. ಸದ್ಯ ಮೊಜ್ತಾಬಾ ಖಮೇನಿ ಅವರು ಉತ್ತಮ ಆರೋಗ್ಯದಲ್ಲಿದ್ದು, ದೇಶದ ಹಿತಾಸಕ್ತಿ ಕಾಪಾಡಲು ತೆರೆಮರೆಯಲ್ಲೇ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ದೇಶದ ಜನರಿಗೆ ದೊಡ್ಡ ಸಮಾಧಾನ ತಂದಿದೆ.

ಇದನ್ನೂ ಓದಿ: ರಿಲಯನ್ಸ್‌ಗೆ ಎಲಾನ್ ಮಸ್ಕ್ ಕಂಪನಿ ಕೌಂಟರ್: ‘ಭಾರತೀಯ ನಿಯಮಗಳ ಪಾಲನೆಗೆ ಸ್ಟಾರ್‌ಲಿಂಕ್ ಸಜ್ಜು’!

Leave a Reply

Your email address will not be published. Required fields are marked *