ಹುಬ್ಬಳ್ಳಿ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ತಮಗೆ ವೈಚಾರಿಕವಾಗಿ ಹಲವು ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಅಂತಹ ಅನುಭವಿ ನಾಯಕರಿಗೆ ಪೆನ್ಡ್ರೈವ್ ಪ್ರದರ್ಶಿಸಿ ಬ್ಲ್ಯಾಕ್ಮೇಲ್ ಮಾಡುವ ಮತ್ತು ಬೆದರಿಸುವ ರಾಜಕೀಯ ಸಂಸ್ಕೃತಿ ನಡೆದಿರುವುದು ನಿಜಕ್ಕೂ ಅತ್ಯಂತ ಆಘಾತಕಾರಿ ಹಾಗೂ ಖಂಡನೀಯ ಸಂಗತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷದ ವಲಯದಲ್ಲಿ ನಡೆಯುತ್ತಿರುವ ಇಂತಹ ಕೀಳುಮಟ್ಟದ ಬೆಳವಣಿಗೆಗಳ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಹೈಕಮಾಂಡ್ ತಕ್ಷಣವೇ ರಾಜ್ಯದ ಜನತೆಯ ಮುಂದೆ ಬಹಿರಂಗಪಡಿಸಬೇಕು ಎಂದು ಅವರು ಬಲವಾಗಿ ಒತ್ತಾಯಿಸಿದ್ದಾರೆ.
ಇದು ಆತಂಕಕಾರಿ ಬೆಳವಣಿಗೆ ಎಂದ ಜೋಶಿ
ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಕಾಂಗ್ರೆಸ್ ಪಕ್ಷದ ಆಂತರಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೇವಲ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಪಡೆದುಕೊಳ್ಳಲು ಅಲ್ಲಿನ ನಾಯಕರು ಯಾವ ಮಟ್ಟಕ್ಕಾದರೂ ಇಳಿಯಬಹುದು ಎಂಬ ಭಾವನೆ ಮೂಡುತ್ತದೆ ಎಂದರು. ರಾಜಕೀಯ ವ್ಯವಸ್ಥೆಯಲ್ಲಿ ಮೌಲ್ಯಗಳು ಸಂಪೂರ್ಣವಾಗಿ ಕುಸಿದುಬೀಳುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಸಿದ್ದರಾಮಯ್ಯ ಅವರಂತಹ ಪ್ರಭಾವಿ ಹಾಗೂ ಹಿರಿಯ ನಾಯಕರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಪರಿಸ್ಥಿತಿ ತಲುಪಿದೆ ಎಂದರೆ, ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಮೌನ ಮುರಿದು ಸ್ಪಷ್ಟನೆ ನೀಡಬೇಕು ಎಂದು ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.
ಎಸ್ಐಆರ್ ವಿರೋಧಿ ಹೋರಾಟದ ಹಿಂದೆ ಅಂತರರಾಷ್ಟ್ರೀಯ ಸಂಘಟನೆಗಳ ಕೈವಾಡ: ಕೇಂದ್ರ ಸಚಿವರಿಂದ ಸ್ಫೋಟಕ ಹೇಳಿಕೆ!
ಇದೇ ವೇಳೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿಚಾರದ ಕುರಿತು ಮಾತನಾಡಿರುವ ಪ್ರಲ್ಹಾದ್ ಜೋಶಿ, ಎಸ್ಐಆರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಾಗೂ ಹೋರಾಟಗಳ ಹಿಂದೆ ಅಂತರರಾಷ್ಟ್ರೀಯ ಮಟ್ಟದ ಸಂಘಟನೆಗಳ ದೊಡ್ಡ ಮಟ್ಟದ ಕೈವಾಡವಿರುವ ಬಗ್ಗೆ ಗಂಭೀರ ಅನುಮಾನಗಳಿವೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ಫ್ರಾನ್ಸ್ ಹಾಗೂ ಯುರೋಪ್ ದೇಶಗಳಲ್ಲಿಯೂ ಸಹ ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ವ್ಯವಸ್ಥಿತ ಹೋರಾಟಗಳನ್ನು ನಡೆಸಲಾಗುತ್ತಿದೆ. ಈ ಕುರಿತು ಪ್ರಮುಖ ಅಮೆರಿಕನ್ ಸುದ್ದಿ ವಾಹಿನಿಯೊಂದು ಅಂತರರಾಷ್ಟ್ರೀಯ ಸಂಘಟನೆಗಳ ದುಷ್ಟ ಪಾತ್ರದ ಬಗ್ಗೆ ಸ್ಪಷ್ಟ ವರದಿ ಪ್ರಸಾರ ಮಾಡಿದೆ ಎಂದು ಅವರು ತಿಳಿಸಿದರು.
ಕೇವಲ ರಾಜಕೀಯ ಅಧಿಕಾರದಲ್ಲಿ ಮುಂದುವರಿಯಬೇಕು ಅಥವಾ ಗದ್ದುಗೆ ಹಿಡಿಯಬೇಕು ಎನ್ನುವ ಸ್ವಾರ್ಥಕ್ಕಾಗಿ ದೇಶದ ಆಂತರಿಕ ಭದ್ರತೆ ಮತ್ತು ಹಿತಾಸಕ್ತಿಯನ್ನು ರಾಜಿಯಾಗಳು ಮಾಡಿಕೊಳ್ಳಲಾಗುತ್ತಿದೆ. ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ಮತ್ತು ದೇಶದಲ್ಲಿ ಅರಾಜಕತೆಯ ವಾತಾವರಣವನ್ನು ನಿರ್ಮಿಸುವ ದೊಡ್ಡ ಮಟ್ಟದ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಕೇಂದ್ರ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆಯುವ ಇಂತಹ ಸಂಚುಗಳ ಬಗ್ಗೆ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದರು.
ಇದನ್ನೂ ಓದಿ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾನದಲ್ಲಿ ಶಾಸಕ ಮುನಿರತ್ನ ಮೇಲೆ ಹಲ್ಲೆಗೆ ಯತ್ನ
