TOP NEWS

ABVP: ಎಬಿವಿಪಿ-ಸಮ್ಮಿಲನ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆ: ಬಹುಮಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿ ಹೀಗಿದೆ

ABVP State Level Story and Poetry Competition Winners List Announced

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಹಿತ್ಯಿಕ ಹಾಗೂ ಸೃಜನಶೀಲ ಪ್ರತಿಭೆಯನ್ನು ಹೊರಹಾಕುವ ಉದ್ದೇಶದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕರ್ನಾಟಕ ಹಾಗೂ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ‘ಸಮ್ಮಿಲನ’ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕಥೆ ಮತ್ತು ಕವನ ಸ್ಪರ್ಧೆಯ ಅಂತಿಮ ವಿಜೇತರ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಲಾಗಿದೆ. ರಾಜ್ಯದ ನಾನಾ ಮೂಲೆಗಳಿಂದ ನೂರಾರು ಯುವ ಪ್ರತಿಭಾವಂತ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ, ತಮ್ಮ ವಿಭಿನ್ನ ಬರಹಗಳ ಮೂಲಕ ಗಮನ ಸೆಳೆದ ವಿದ್ಯಾರ್ಥಿಗಳು ವಿವಿಧ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.

ಯುವ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸ್ಪರ್ಧೆಯು ಕಥಾ ವಿಭಾಗ ಹಾಗೂ ಕವನ ವಿಭಾಗ ಎಂಬ ಎರಡು ಪ್ರಮುಖ ಹಂತಗಳಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ನುರಿತ ಸಾಹಿತ್ಯ ದಿಗ್ಗಜರು ಸ್ಪರ್ಧೆಗೆ ಬಂದಿದ್ದ ಹತ್ತಾರು ಕೃತಿಗಳನ್ನು ಪರಿಶೀಲಿಸಿ, ಅತ್ಯುತ್ತಮ ಬರವಣಿಗೆಯನ್ನು ಗುರುತಿಸಿ ವಿಜೇತರನ್ನು ಆಯ್ಕೆ ಮಾಡಿದ್ದಾರೆ.

ಕಥಾ ವಿಭಾಗದ ವಿಜೇತರು:

ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗಿರುವ ಕಥಾ ವಿಭಾಗದಲ್ಲಿ ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶಿಲ್ಪಾ ಟಿ.ಆರ್. ಅವರು ತಮ್ಮ ಪ್ರಬುದ್ಧ ಬರವಣಿಗೆಯ ಮೂಲಕ ಪ್ರಥಮ ಬಹುಮಾನವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇನ್ನು ದ್ವಿತೀಯ ಬಹುಮಾನಕ್ಕಾಗಿ ಇಬ್ಬರು ಸ್ಪರ್ಧಿಗಳು ಸಮಬಲ ಸಾಧಿಸಿದ್ದು, ಮೈಸೂರಿನ ಮಲ್ಲಮ್ಮ ಮರಿ ಮಲ್ಲಪ್ಪ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿ ವಸಂತ ಹಾಗೂ ದಾವಣಗೆರೆ ಜಿಲ್ಲೆಯ ಗೊಲ್ಲರ ಹಟ್ಟಿಯ ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ಕೆ.ಎಸ್. ಮಂಜುನಾಥ್ ಜಂಟಿಯಾಗಿ ದ್ವಿತೀಯ ಸ್ಥಾನ ಪಡೆದು ಹೆಮ್ಮಸಿದ್ದಾರೆ. ಹಾಗೆಯೇ, ಮಂಗಳೂರಿನ ಖ್ಯಾತ ಸೆಂಟ್ ಅಗ್ನೈಸ್ ಕಾಲೇಜಿನ ವಿದ್ಯಾರ್ಥಿನಿ ದೀಪ್ತಿ ಅವರು ತಮ್ಮ ಆಕರ್ಷಕ ಕಥೆಯ ಮೂಲಕ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ಕವನ ವಿಭಾಗದ ವಿಜೇತರು:

ಭಾವಪೂರ್ಣ ಸಾಲುಗಳಿಂದ ಕೂಡಿದ ಕವನ ವಿಭಾಗದಲ್ಲೂ ತೀವ್ರ ಪೈಪೋಟಿ ಕಂಡುಬಂದಿದ್ದು, ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ದ್ವಿತೀಯ ಎಂ.ಎ. ವಿದ್ಯಾರ್ಥಿನಿ ಕವಿತಾ ಎ.ವಿ. ಅವರು ಅತ್ಯುತ್ತಮ ಕವನದ ಮೂಲಕ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕವನ ವಿಭಾಗದ ಎರಡನೆಯ ಬಹುಮಾನಕ್ಕೂ ಇಬ್ಬರು ಪ್ರತಿಭಾವಂತರು ಭಾಜನರಾಗಿದ್ದಾರೆ. ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ಯಾಮಪ್ಪ ಅರೇರ ಹಾಗೂ ಬೆಂಗಳೂರಿನ ಜಯನಗರದ ಎನ್‌ಎಚ್‌ಕೆಆರ್‌ವಿ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಚೌಹಾಣ್ ಅವರು ಜಂಟಿಯಾಗಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಜೊತೆಗೆ, ಪುತ್ತೂರಿನ ವಿವೇಕಾನಂದ ಕಾಲೇಜಿನ ಅವನಿ ಕೆ. ಅವರು ಅತ್ಯುತ್ತಮ ಕವನ ರಚಿಸಿ ಮೂರನೆಯ ಬಹುಮಾನವನ್ನು ಪಡೆದು ರಾಜ್ಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ರಾಜ್ಯದ ವಿವಿಧ ಸಾಹಿತಿಗಳು, ಸಂಘಟಕರು ಹಾಗೂ ಎಬಿವಿಪಿ ಮತ್ತು ಸಮ್ಮಿಲನ ಬಳಗದ ಪದಾಧಿಕಾರಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಯುವ ಪೀಳಿಗೆಯು ಸಾಹಿತ್ಯ ಕ್ಷೇತ್ರದಲ್ಲೂ ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ದಸರಾ ಕಾವ್ಯ ಮುಗಿಸಿ ಕಾಡಿನ ಹಾದಿ ಹಿಡಿದ ಗಜಪಡೆ: ದುಬಾರೆ ಶಿಬಿರದತ್ತ ಪ್ರಶಾಂತ

Leave a Reply

Your email address will not be published. Required fields are marked *