ಹಾವೇರಿ: ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣಾ ಪ್ರಕ್ರಿಯೆಯ ವೇಳೆ ಜಿಲ್ಲೆಯಲ್ಲಿ ತೀವ್ರ ಆಘಾತಕಾರಿ ಹಾಗೂ ವಿಚಿತ್ರ ಘಟನೆಯೊಂದು ಬೆಳಕಿಗೆ (Big News) ಬಂದಿದೆ. ಶುಕ್ರವಾರ ನಡೆದ ಮತದಾನದ ಪ್ರಕ್ರಿಯೆಯಲ್ಲಿ ಮಹಿಳೆಯೊಬ್ಬರು ನಕಲಿ ಗುರುತಿನ ಚೀಟಿ ಬಳಸಿ ಅಕ್ರಮವಾಗಿ ಮತ ಚಲಾಯಿಸಿರುವುದು ಪತ್ತೆಯಾಗಿದ್ದು, ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಮಾಹಿತಿಗಳ ಪ್ರಕಾರ, ಹಾವೇರಿ ತಹಶೀಲ್ದಾರ್ ಕಚೇರಿಯ ಆವರಣದಲ್ಲಿದ್ದ ಮತಗಟ್ಟೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾದ ಸಂಜೀವ ಕುಮಾರ್ ನೀರಲಗಿ ಅವರ ಧರ್ಮಪತ್ನಿ ಆಶಾ ಪಾಟೀಲ ಅವರು ತಮ್ಮ ಹಕ್ಕು ಚಲಾಯಿಸಬೇಕಾಗಿತ್ತು. ಆದರೆ, ಆಶಾ ಪಾಟೀಲ ಅವರು ಬರುವ ಮುನ್ನವೇ ಅವರ ಹೆಸರಿನಲ್ಲಿ ಮತ್ತೊಬ್ಬ ಅಪರಿಚಿತ ಮಹಿಳೆ ಆಗಮಿಸಿ ಮತದಾನ ಮಾಡಿ ತೆರಳಿರುವುದು ಪತ್ತೆಯಾಗಿದೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಚುನಾವಣಾ ಅಕ್ರಮದ ಬಗ್ಗೆ ತೀವ್ರ ಚರ್ಚೆಗಳು ಆರಂಭವಾಗಿವೆ.
ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಬಂದಿದ್ದ ಮಹಿಳೆ:
ಈ ಇಡೀ ಘಟನೆಯಲ್ಲಿ ಮತ್ತೊಂದು ಸ್ವಾರಸ್ಯಕರ ಹಾಗೂ ಗಂಭೀರವಾದ ಸಂಗತಿಯೆಂದರೆ, ನಕಲಿ ಮತದಾನ ಮಾಡಿದ ಮಹಿಳೆಯು ಜಿಲ್ಲಾ ಉಸ್ತುವಾರಿ ಸಚಿವರಾದ ರುದ್ರಪ್ಪ ಲಮಾಣಿ ಅವರ ಜೊತೆಯಲ್ಲಿಯೇ ಮತಗಟ್ಟೆಗೆ ಆಗಮಿಸಿದ್ದರು ಎನ್ನಲಾಗಿದೆ. ಸಚಿವರ ಜೊತೆ ಬಂದಿದ್ದ ಆ ಮಹಿಳೆ ಮತಗಟ್ಟೆ ಅಧಿಕಾರಿಗಳಿಗೆ ನಕಲಿ ಗುರುತಿನ ಚೀಟಿ ತೋರಿಸಿ, ಆಶಾ ಪಾಟೀಲ ಅವರ ಹೆಸರಿನಲ್ಲಿ ಯಶಸ್ವಿಯಾಗಿ ಮತ ಚಲಾಯಿಸಿ ಹೊರಟುಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಅಕ್ರಮ ಮತದಾನದ ಕುರಿತು ಮಾಧ್ಯಮಗಳೊಂದಿಗೆ ಮಾತುಕತೆ ನಡೆಸಿ ನೈಜತೆಯನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ಕುಮಾರ ನೀರಲಗಿ, “ನನ್ನ ಪತ್ನಿಯ ಹೆಸರಿನಲ್ಲಿ ಯಾರೋ ನಕಲಿ ಮತದಾನ ಮಾಡಿರುವುದು ಶುಕ್ರವಾರ ರಾತ್ರಿ ನನ್ನ ಗಮನಕ್ಕೆ ಬಂದಿದೆ. ಈ ಅಕ್ರಮ ಹಾಗೂ ಭದ್ರತಾ ಲೋಪದ ಕುರಿತು ಜಿಲ್ಲಾಧಿಕಾರಿಗಳಿಗೆ (DC) ಅಧಿಕೃತವಾಗಿ ದೂರು ನೀಡಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ:
ಮತ್ತೊಂದೆಡೆ, ಈ ಘಟನೆಯನ್ನು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ನಾಯಕರು ಕಟುವಾಗಿ ವೀರೋಧ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಪಕ್ಷವು ಸರ್ಕಾರಿ ಅಧಿಕಾರಿಗಳನ್ನು ಮತ್ತು ಯಂತ್ರಾಂಗವನ್ನು ದುರ್ಬಳಕೆ ಮಾಡಿಕೊಂಡು ನಕಲಿ ಮತದಾನ ಮಾಡಿಸುತ್ತಿದೆ ಎಂದು ಸರಣಿ ಆರೋಪಗಳನ್ನು ಮಾಡಿದ್ದಾರೆ. ಈ ನಕಲಿ ಮತದಾನದ ಘಟನೆಯ ಬಗ್ಗೆ ತಕ್ಷಣವೇ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಇದನ್ನೂ ಓದಿ: ಆರ್‌ಎಸ್‌ಎಸ್ ಪಥಸಂಚಲನ ಅನುಮತಿ ವಿಚಾರದಲ್ಲಿ ಗೃಹ ಇಲಾಖೆ-ಪೊಲೀಸ್ ನಡುವೆ ಗೊಂದಲ: ರಾಜ್ಯಾದ್ಯಂತ ಸಾಗಲಿದೆ ಮೆರವಣಿಗೆ!
