ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಐಟಿ ನಗರಿ ಪುಣೆಯಲ್ಲಿ ವರದಕ್ಷಿಣೆ ಅಮಾನವೀಯ ಕಿರುಕುಳಕ್ಕೆ ಮತ್ತೊಬ್ಬ ಮಹಿಳಾ ಸಾಫ್ಟ್ವೇರ್ ಇಂಜಿನಿಯರ್ (Crime) ಬಲಿಯಾಗಿದ್ದಾರೆ. ಗಂಡ ಮತ್ತು ಆತನ ಕುಟುಂಬದವರಿಂದ ಸತತವಾಗಿ ಮಾನಸಿಕ ಹಾಗೂ ಶಾರೀರಿಕ ದೌರ್ಜನ್ಯಕ್ಕೆ ಒಳಗಾಗಿದ್ದ 33 ವರ್ಷದ ತೃಷ್ಣಾ ರಾಹುಲ್ ಸಕ್ಪಾಲ್ ಎಂಬ ಐಟಿ ಉದ್ಯೋಗಿ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿಗೆ ವರದಕ್ಷಿಣೆ ಮತ್ತು ಆಸ್ತಿಗಾಗಿ ಪತಿ ಹಾಗೂ ಆತನ ಕುಟುಂಬದವರು ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಮೃತರ ತಂದೆ ಬಾಲಕೃಷ್ಣ ನಿಕಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ತಂದೆಯ ಫ್ಲ್ಯಾಟ್ ಮತ್ತು ಸಂಬಳಕ್ಕಾಗಿ ಪೀಡಿಸುತ್ತಿದ್ದ ಅತ್ತೆ-ಪತಿ
ಪೋಲಿಸ್ ದೂರಿನ ಪ್ರಕಾರ, ತೃಷ್ಣಾ ಅವರಿಗೆ 2018 ರಲ್ಲಿ ರಾಹುಲ್ ಸಕ್ಪಾಲ್ ಎಂಬುವವರ ಜೊತೆ ಮದುವೆಯಾಗಿತ್ತು. ಮದುವೆಯಾದ ಆರಂಭದಿಂದಲೇ ತೃಷ್ಣಾ ಅವರ ಸಂಪೂರ್ಣ ಸಂಬಳವನ್ನು ತಮ್ಮ ವಶಕ್ಕೆ ನೀಡಬೇಕು, ತಂದೆಯ ಮನೆಯ ಹೆಸರಿನಲ್ಲಿರುವ ಫ್ಲ್ಯಾಟ್ ಅನ್ನು ಅತ್ತೆಯ ಹೆಸರಿಗೆ ವರ್ಗಾಯಿಸಿಕೊಡಬೇಕು ಹಾಗೂ ಮಾವನಿಗೆ 1 ಕೋಟಿ ರೂಪಾಯಿ ಮೌಲ್ಯದ ಹೊಸ ಫ್ಲ್ಯಾಟ್ ಖರೀದಿಸಿಕೊಡಬೇಕೆಂದು ಪತಿ ಮತ್ತು ಆತನ ಮನೆಯವರು ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದರು. ದೈಹಿಕ ಮತ್ತು ಮಾನಸಿಕ ಹಿಂಸೆ ತಾಳಲಾರದೆ ತೃಷ್ಣಾ 2021 ರಲ್ಲೇ ಗಂಡನ ಮನೆ ತೊರೆದು ತಂದೆಯ ಮನೆಗೆ ಮರಳಿದ್ದರು. ಈ ನಡುವೆ ಆಕೆಯ ಪತಿ ಮತ್ತೊಂದು ಮದುವೆಯಾಗಲು ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ.
ಡೆತ್ನೋಟ್ ಬರೆದಿಟ್ಟು ಸೆಪ್ಟೆಂಬರ್ 29 ರಂದು ಆತ್ಮಹತ್ಯೆ
ನಿರಂತರ ಹಿಂಸೆಯಿಂದ ಕಂಗಾಲಾಗಿದ್ದ ತೃಷ್ಣಾ ಅವರು ಸೆಪ್ಟೆಂಬರ್ 29 ರಂದು ತಮ್ಮ ನಿವಾಸದಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ಪೊಲೀಸರು ಘಟನಾ ಸ್ಥಳದಿಂದ ಡೆತ್ನೋಟ್ ವಶಪಡಿಸಿಕೊಂಡಿದ್ದು, ಅದರಲ್ಲಿ ತಮ್ಮ ಸಾವಿಗೆ ಪತಿ ರಾಹುಲ್, ಅತ್ತೆ ವೈಶಾಲಿ, ಮಾವ ಸಂಜಯ್, ನಾದಿನಿ ಶೈಲಿ ಮತ್ತು ಪತಿಯಜ್ಜಿ ಶಕುಂತಲಾ ಸಾಲುಂಕೆ ಅವರೇ ನೇರ ಹೊಣೆ ಎಂದು ಉಲ್ಲೇಖಿಸಿದ್ದಾರೆ. ಮೃತರ ತಂದೆ ನೀಡಿದ ದೂರಿನ ಆಧಾರದ ಮೇಲೆ ಐವರ ವಿರುದ್ಧ ಪೊಲೀಸರು ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಿಸಿಕೊಂಡಿದ್ದಾರೆ.
ಕಳೆದ ತಿಂಗಳಷ್ಟೇ ವರದಕ್ಷಿಣೆಗೆ ಬಲಿಯಾಗಿದ್ದ 23 ವರ್ಷದ ನವವಧು!
ಪುಣೆಯಲ್ಲಿ ಐಟಿ ಉದ್ಯೋಗಿ ಯುವತಿಯರು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳಷ್ಟೇ 23 ವರ್ಷದ ವೈಷ್ಣವಿ ಪ್ರವೀಣ್ ಜರಂಡೆ ಎಂಬ ಸಾಫ್ಟ್ವೇರ್ ಇಂಜಿನಿಯರ್ ಮದುವೆಯಾದ ಕೇವಲ ನಾಲ್ಕೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾಗಿದ್ದರು. 45 ಲಕ್ಷ ರೂಪಾಯಿ ವೆಚ್ಚದ ಮದುವೆ ಹಾಗೂ 10 ತೊಲ ಚಿನ್ನ ನೀಡಿದ್ದರೂ ಸಹ, ಕಾರು ಖರೀದಿಸಲು ಹೆಚ್ಚುವರಿ 5 ಲಕ್ಷ ರೂಪಾಯಿ ತರಬೇಕೆಂದು ಪತಿ ಓಂಕಾರ್ ಸಂಜಯ್ ಘಿಸಾರೆ ಹಾಗೂ ಆತನ ಕುಟುಂಬಸ್ಥರು ಕಿರುಕುಳ ನೀಡಿದ್ದರು. ಸೆಪ್ಟೆಂಬರ್ 24ರಂದು ತಾಯಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದ ವೈಷ್ಣವಿ, ಅದೇ ರಾತ್ರಿ ಶವವಾಗಿ ಪತ್ತೆಯಾಗಿದ್ದರು. ಪುಣೆಯಲ್ಲಿ ಸಾಲು ಸಾಲು ಸಾಫ್ಟ್ವೇರ್ ಇಂಜಿನಿಯರ್ಗಳು ವರದಕ್ಷಿಣೆ ಪಿಡುಗಿಗೆ ಬಲಿಯಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಯುವತಿ ದೂರು ದಾಖಲು: ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಹಿಳಾ ಪೊಲೀಸ್ ವಶಕ್ಕೆ!
