ಬೆಂಗಳೂರು: ಕರ್ನಾಟಕದಾದ್ಯಂತ ದಶಕಗಳ ಕಾಲ ತೀವ್ರ ಸಂಚಲನ ಮೂಡಿಸಿರುವ ಹಾಗೂ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಸಂವೇದನಾಶೀಲ ಎನಿಸಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ (Soujanya Case) ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಪಡೆದುಕೊಂಡಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ಮರುತನಿಖೆಗೆ ಹಸಿರು ನಿಶಾನೆ ತೋರಿದ್ದು, ವಿಶೇಷ ತನಿಖಾ ತಂಡ (SIT) ಮೂರು ತಿಂಗಳ ಒಳಗೆ ತನಿಖೆಯನ್ನು ಪೂರ್ಣಗೊಳಿಸುವಂತೆ ಗಡುವು ವಿಧಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಹಿರಿಯ ನ್ಯಾಯವಾದಿ ಅಮೃತೇಶ್ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಹಳೆಯ ಸಂಗತಿಗಳನ್ನು ಬಿಚ್ಚಿಡುವುದರ ಜೊತೆಗೆ ಕೆಲ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ದೇವಸ್ಥಾನ ಹಾಗೂ ಮಠಗಳನ್ನು ಗುರಿಯಾಗಿಸುವ ಷಡ್ಯಂತ್ರ: ವಕೀಲ ಅಮೃತೇಶ್ ಕಿಡಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಕೀಲ ಅಮೃತೇಶ್, ಸೌಜನ್ಯ ಪ್ರಕರಣವು ಕೇವಲ ಒಂದು ಕೊಲೆಗೆ ಸೀಮಿತವಾಗಿಲ್ಲದೆ, ಇದರ ಹಿಂದೆ ವ್ಯವಸ್ಥಿತವಾದ ದುರುದ್ದೇಶವಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಸುಮಾರು 14 ವರ್ಷಗಳ ಹಿಂದೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿ, ಬಳಿಕ ಅದು ಅತ್ಯಾಚಾರ ಹಾಗೂ ಕೊಲೆ ಪ್ರಕರಣವಾಗಿ ಬದಲಾಯಿತು. ಈ ಪ್ರಕರಣವನ್ನು ಸಿಐಡಿ ಹಾಗೂ ನಂತರ ಎಸ್ಐಟಿಗೆ ವಹಿಸಲಾಗಿತ್ತು. ಆದರೆ, ರಾಜ್ಯದ ಪ್ರಸಿದ್ಧ ದೇವಾಲಯಗಳು ಹಾಗೂ ಮಠ-ಮಾನ್ಯಗಳನ್ನು ಟಾರ್ಗೆಟ್ ಮಾಡುವ ಮತ್ತು ಅಪಪ್ರಚಾರ ಮಾಡುವ ನಿರ್ದಿಷ್ಟ ಗುಂಪೊಂದು ಇದರ ಹಿಂದೆ ಸಕ್ರಿಯವಾಗಿದೆ ಎಂದು ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಹಳೆಯ ವಿಡಿಯೋ ಬಿಡುಗಡೆ ಹಾಗೂ ಸ್ಥಳ ಮಹಜರು ಕುರಿತು ಪ್ರಶ್ನೆ
ಪ್ರಕರಣದ ತನಿಖೆಯ ಆರಂಭಿಕ ದಿನಗಳ ಕುರಿತು ಪ್ರಮುಖ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದ ವಕೀಲರು, ಘಟನೆ ನಡೆದ 25 ದಿನಗಳ ಬಳಿಕ ಸೌಜನ್ಯ ತಾಯಿ, ತಂದೆ ಹಾಗೂ ಮಾವ ವಿಠ್ಠಲ್ ಗೌಡ ಅವರು ನಡೆಸಿದ್ದ ಹಳೆಯ ಪತ್ರಿಕೋಷ್ಟಕದ ವಿಡಿಯೋ ತುಣುಕನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು. 2012ರಲ್ಲಿ ನಡೆದ ಈ ಘಟನೆಯ ಆರಂಭಿಕ ದಿನಗಳಲ್ಲಿ ಸ್ವತಃ ಅವರ ಕುಟುಂಬದವರೇ ಪೊಲೀಸರ ತನಿಖೆಗೆ ಹಾಗೂ ಕ್ರಮಗಳಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದರು ಎಂಬುದನ್ನು ಆ ವಿಡಿಯೋದಲ್ಲಿ ಕಾಣಬಹುದು ಎಂದರು.
ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ ಬಳಿಕ ಪೊಲೀಸರು ಯಾವುದೇ ಬಲವಂತ ಮಾಡದೆ, ಸಹಜ ರೀತಿಯಲ್ಲೇ ಸ್ಥಳ ಮಹಜರಿಗೆ ಕರೆದೊಯ್ದಿದ್ದರು. ಆದರೆ ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ವಿಠ್ಠಲ್ ಗೌಡರ ಹೇಳಿಕೆಗಳು ಹಾಗೂ ಆ ವಿಡಿಯೋದಲ್ಲಿ ದಾಖಲಾಗಿರುವ ಸಂಭಾಷಣೆಗಳನ್ನು ಎಲ್ಲರೂ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅಮೃತೇಶ್ ಒತ್ತಿಹೇಳಿದರು. ಇದೇ ವೇಳೆ, ನಿಮ್ಹಾನ್ಸ್ ಹಾಗೂ ಫಾರೆನ್ಸಿಕ್ ವರದಿಗಳಲ್ಲಿ ಉಲ್ಲೇಖವಾಗಿರುವ ‘ಗಾಯ ಸಂಖ್ಯೆ 11’ (Injury No. 11) ಬಗ್ಗೆ ಪ್ರಸ್ತಾಪಿಸಿದ ಅವರು, ಸಂತೋಷ್ ರಾವ್ ಮರ್ಮಾಂಗದಲ್ಲಿ ಗಾಯವಾಗಿರುವುದಾಗಿ ವೈದ್ಯಕೀಯ ವರದಿಯಲ್ಲಿದ್ದರೂ, ತನಿಖಾಧಿಕಾರಿಗಳು ಮತ್ತು ಸಂಬಂಧಪಟ್ಟವರು ಈ ನಿರ್ಣಾಯಕ ಅಂಶವನ್ನು ಯಾಕೆ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಕಟುವಾಗಿ ಪ್ರಶ್ನಿಸಿದರು.
ಸೌಜನ್ಯ ಪೋಷಕರ ವಿರುದ್ಧ ಗಂಭೀರ ಆರೋಪ ಹಾಗೂ ಮಹೇಶ್ ತಿಮರೋಡಿ ಪ್ರಸ್ತಾಪ
ಸುದ್ದಿಗೋಷ್ಠಿಯ ಮುಂದುವರಿದ ಭಾಗದಲ್ಲಿ ಸೌಜನ್ಯ ತಂದೆ-ತಾಯಿ ಹಾಗೂ ಇತರ ಪ್ರಮುಖರ ಪಾತ್ರದ ಬಗ್ಗೆ ಹಿರಿಯ ವಕೀಲರು ಗಂಭೀರ ಆರೋಪಗಳನ್ನು ಮಾಡಿದರು. ಈ ಪ್ರಕರಣವನ್ನು ಇಟ್ಟುಕೊಂಡು ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ಆರ್ಥಿಕ ಲಾಭ ಪಡೆದುಕೊಂಡಿವೆ ಎಂದು ಆರೋಪಿಸಿದ ಅವರು, “ಘಟನೆ ನಡೆದ ತಕ್ಷಣ ನ್ಯಾಯಕ್ಕಾಗಿ ಧ್ವನಿ ಎತ್ತಿದ ಕುಟುಂಬದವರು, ಮೊದಲ ಪತ್ರಿಕೋಷ್ಟಕದ ಬಳಿಕ ಸತತ ಒಂದು ವರ್ಷಗಳ ಕಾಲ ಸಂಪೂರ್ಣ ಮೌನ ವಹಿಸಿದ್ದರು. ಈ ಒಂದು ವರ್ಷದ ಅವಧಿಯಲ್ಲಿ ತೆರೆಮರೆಯಲ್ಲಿ ಏನೇನು ನಡೆಯಿತು ಎಂಬುದು ಹೊರಬರಬೇಕು” ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡುತ್ತಾ, ಈ ಸುದೀರ್ಘ ಹೋರಾಟ ಹಾಗೂ ವಿವಾದದ ನಡುವೆಯೇ ‘ಮಹಾಪುರುಷ’ ಎಂದು ಬಿಂಬಿಸಿಕೊಳ್ಳುವ ಮಹೇಶ್ ತಿಮರೋಡಿ ಅವರ ಎಂಟ್ರಿ ಆಗುತ್ತದೆ. ಈ ಪ್ರಕರಣವನ್ನು ಅಂಡರ್ನಲ್ಲಿ ಇಟ್ಟುಕೊಂಡು ಯಾರ್ಯಾರು ಎಷ್ಟೆಷ್ಟು ಲಾಭ ಮಾಡಿಕೊಂಡಿದ್ದಾರೆ ಮತ್ತು ಇದರ ಹಿಂದೆ ಯಾರ ಹಿತಾಸಕ್ತಿ ಅಡಗಿದೆ ಎಂಬ ಸತ್ಯಗಳು ಮರುತನಿಖೆಯ ಮೂಲಕ ಹೊರಬರಬೇಕಿದೆ ಎಂದು ಹಿರಿಯ ವಕೀಲ ಅಮೃತೇಶ್ ಒತ್ತಾಯಿಸಿರುವುದು ರಾಜ್ಯ ರಾಜಕಾರಣ ಹಾಗೂ ಕಾನೂನು ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಇದನ್ನೂ ಓದಿ: ನಿವೃತ್ತಿಗೆ 6 ತಿಂಗಳು ಬಾಕಿ ಇರುವಾಗಲೇ ವಿಆರ್ಎಸ್ಗೆ ಅರ್ಜಿ: ಹಿರಿಯ ಐಪಿಎಸ್ ಅಧಿಕಾರಿ ಎಸ್. ರವಿ ನಿರ್ಧಾರದಿಂದ ಸಂಚಲನ!
