TOP NEWS

Cauvery: ಕಾವೇರಿ ಸಂಧಾನಕ್ಕೆ ಮುಂದಾದ ಸಿಎಂ ಜೋಸೆಫ್ ವಿಜಯ್; ತಮಿಳುನಾಡಿನಲ್ಲಿ ಎದ್ದ ರಾಜಕೀಯ ಬಿರುಗಾಳಿ!

CM Joseph Vijay Push for Cauvery Talks Sparks Political Storm in Tamil Nadu

ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ದಶಕಗಳ ಬಳಿಕ ಮಹತ್ವದ (Cauvery) ರಾಜತಾಂತ್ರಿಕ ಬೆಳವಣಿಗೆಯೊಂದು ಆರಂಭವಾಗಿದ್ದು, ಇದು ತಮಿಳುನಾಡು ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಆಗಸ್ಟ್ 3 ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಕಾವೇರಿ ವಿಚಾರವಾಗಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕಳೆದ 16 ವರ್ಷಗಳಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಆದರೆ, ಈ ಮಾತುಕತೆಯ ನಿರ್ಧಾರಕ್ಕೆ ತಮಿಳುನಾಡಿನ ವಿರೋಧ ಪಕ್ಷಗಳು ಹಾಗೂ ರೈತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೆಡ್ ಸಿಗ್ನಲ್ ತೋರಿಸಿವೆ.

ಹೊಸ ಅಧ್ಯಾಯ ಬರೆಯಲಿದೆ ಭೇಟಿ

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಎಂಬಲ್ಲಿ ಜಲಾಶಯ ನಿರ್ಮಿಸುವ ಕರ್ನಾಟಕದ ಪ್ರಸ್ತಾಪದ ಕುರಿತು ಚರ್ಚಿಸಲು ಮುಖ್ಯಮಂತ್ರಿ ವಿಜಯ್ ಅವರು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದು ತಮಿಳುನಾಡು ಕೃಷಿ ಸಚಿವ ಆರ್. ವಿನೋದ್ ತಿಳಿಸಿದ್ದಾರೆ. ಇದು ಉಭಯ ರಾಜ್ಯಗಳ ಬಾಂಧವ್ಯದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, 2018 ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕಾವೇರಿ ವಿಚಾರವಾಗಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆಗೆ ಕುಳಿತಿರಲಿಲ್ಲ. ಕಡೆಯದಾಗಿ 2012 ರಲ್ಲಿ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಅಂದಿನ ತಮಿಳುನಾಡು ಸಿಎಂ ಜೆ. ಜಯಲಲಿತಾ ಮತ್ತು ಕರ್ನಾಟಕದ ಸಿಎಂ ಜಗದೀಶ್ ಶೆಟ್ಟರ್ ಭೇಟಿಯಾಗಿ ಚರ್ಚಿಸಿದ್ದರು. ಈಗಿನ ಸಿಎಂ ಜೋಸೆಫ್ ವಿಜಯ್ ಅವರ ಈ ನಡೆ ಹಳೆಯ ಸಂಪ್ರದಾಯವನ್ನು ಮುರಿದಿದ್ದು, ಈ ಹಿಂದೆ ಇದ್ದ ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟ್ ಆದೇಶವೇ ಅಂತಿಮ, ಮಾತುಕತೆಯ ಅಗತ್ಯವಿಲ್ಲ ಎಂಬ ನಿಲುವು ತಳೆದಿದ್ದರು.

ಆತಂಖ ವ್ಯಕ್ತಪಡಿಸಿದ ರೈತರು

ಕರ್ನಾಟಕದ ಜೊತೆಗಿನ ಈ ಮಾತುಕತೆಯು ತಮಿಳುನಾಡಿನ ಕಾವೇರಿ ಡೆಲ್ಟಾ ಭಾಗದ ರೈತರಲ್ಲಿ ಭಾರಿ ಆತಂಕ ಮೂಡಿಸಿದೆ. ಮೇಕೆದಾಟು ಜಲಾಶಯ ನಿರ್ಮಾಣವಾದರೆ ತಮ್ಮ ಭಾಗದ ಕೃಷಿ ಸಂಪೂರ್ಣ ನಾಶವಾಗಬಹುದು ಎಂದು ಆತಂಕ ವ್ಯಕ್ತಪಡಿಸಿರುವ ರೈತ ಸಂಘಟನೆಗಳು, ತಕ್ಷಣವೇ ಆಗಸ್ಟ್ 3 ರ ಸಭೆಯನ್ನು ರದ್ದುಗೊಳಿಸಬೇಕು ಮತ್ತು ಕಾನೂನು ಹೋರಾಟದ ಮೂಲಕವೇ ರಾಜ್ಯದ ಹಕ್ಕನ್ನು ರಕ್ಷಿಸಬೇಕು ಎಂದು ಸಿಎಂ ವಿಜಯ್ ಅವರನ್ನು ಒತ್ತಾಯಿಸಿವೆ. ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ಕಾನೂನುಬಾಹಿರವಾಗಿ ಮುಂದುವರಿಸುತ್ತಿದ್ದು, ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿರುವ ಇಂತಹ ಸಭೆಗಳನ್ನು ಮುಖ್ಯಮಂತ್ರಿಗಳು ತಿರಸ್ಕರಿಸಬೇಕು ಎಂದು ತಮಿಳುನಾಡು ಕಾವೇರಿ ರೈತರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಆರ್. ಪಾಂಡಿಯನ್ ಆಗ್ರಹಿಸಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ಅಥವಾ ಹೊಸ ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡುವ ಏಕೈಕ ಅಧಿಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮಾತ್ರ ಇರಲಿದ್ದು, ಅದರ ಒಪ್ಪಿಗೆಯಿಲ್ಲದೆ ಯಾವುದೇ ಸಭೆ ನಡೆಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೇ ವೇಳೆ ತಮಿಳುನಾಡು ರಾಜಕೀಯ ಪಕ್ಷವಾದ ಪಿಎಂಕೆ (PMK) ಅಧ್ಯಕ್ಷ ಅನ್ಬುಮಣಿ ರಾಮದಾಸ್ ಕೂಡ ಈ ನಿರ್ಧಾರದ ವಿರುದ್ಧ ಹರಿಹಾಯ್ದಿದ್ದಾರೆ. ಮೇಕೆದಾಟು ವಿಷಯದಲ್ಲಿ ಕರ್ನಾಟಕದೊಂದಿಗೆ ತಮಿಳುನಾಡು ಸರ್ಕಾರ ಮಾತುಕತೆಗೆ ಒಪ್ಪಿಕೊಂಡಿರುವುದು ಶಾಕಿಂಗ್ ಮತ್ತು ಖಂಡನೀಯ ಎಂದಿದ್ದಾರೆ. ಈ ಸಭೆಯನ್ನು ಕೇಂದ್ರ ಸರ್ಕಾರ ಆಯೋಜಿಸುತ್ತಿದೆಯೇ ಅಥವಾ ಕರ್ನಾಟಕ ಸರ್ಕಾರವೇ? ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವುದು ತಮಿಳುನಾಡು ಮತ್ತು ಕರ್ನಾಟಕ ನಡುವಿನ ಸಾಮಾನ್ಯ ಸಮಸ್ಯೆಯಲ್ಲ, ಅದು ಕೇವಲ ಕರ್ನಾಟಕದ ಹಠವಷ್ಟೇ. ಆದ್ದರಿಂದ ಈ ಬಗ್ಗೆ ಯಾವುದೇ ಸಂಧಾನದ ಮಾತುಕತೆ ನಡೆಸುವ ಅಗತ್ಯವೇ ಇಲ್ಲ ಎಂದು ಅವರು ಪ್ರಬಲವಾಗಿ ವಾದಿಸಿದ್ದಾರೆ.

ಇದನ್ನೂ ಓದಿ: ಅವಿಭಕ್ತ ಕುಟುಂಬಗಳ ಕಣ್ಮರೆಗೆ ಸುಪ್ರೀಂ ಕಳವಳ: ಮಕ್ಕಳ ಕೈಗೆ ಗ್ಯಾಜೆಟ್ ಇಡುವ ಪೋಷಕರಿಗೆ ಕೋರ್ಟ್ ಗಂಭೀರ ಎಚ್ಚರಿಕೆ

Leave a Reply

Your email address will not be published. Required fields are marked *