ನವದೆಹಲಿ: ಭಾರತದ ಸಾಂಪ್ರದಾಯಿಕ ಅವಿಭಕ್ತ ಕುಟುಂಬ ವ್ಯವಸ್ಥೆಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಕಳವಳ ವ್ಯಕ್ತಪಡಿಸಿದೆ. ಜಂಟಿ ಕುಟುಂಬಗಳ ಕಣ್ಮರೆ ಮತ್ತು ಮಕ್ಕಳ ಪಾಲನೆಗಾಗಿ ಪೋಷಕರು ಗ್ಯಾಜೆಟ್‌ಗಳ ಮೇಲೆ ಅತಿಯಾಗಿ ಅವಲಂಬಿತವಾಗುತ್ತಿರುವುದು ಭವಿಷ್ಯದಲ್ಲಿ ತೀವ್ರ ಸಾಮಾಜಿಕ ಪರಿಣಾಮಗಳನ್ನು ಬೀರಬಹುದು ಎಂದು ಗಂಭೀರ ಎಚ್ಚರಿಕೆ ನೀಡಿದೆ. ಹನಿಮೂನ್ ವೇಳೆಯಲ್ಲಿ ಪತಿಯ ಕೊಲೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಸೋನಂ ರಘುವಂಶಿ ಎಂಬಾಕೆಯ ಹೈಪ್ರೊಫೈಲ್ ‘ರಾಜಾ ರಘುವಂಶಿ ಹತ್ಯೆ ಪ್ರಕರಣ’ದ ಮೇಲ್ಮನವಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಾಲಯವು ಈ ಕಟು ಸತ್ಯವನ್ನು ಸಾರಿದೆ.
ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಲೆ ಅವರನ್ನೊಳಗೊಂಡ ಪೀಠವು ಈ ಪ್ರಕರಣವು ಬದಲಾಗುತ್ತಿರುವ ಇಂದಿನ ಸಮಾಜದ ಕನ್ನಡಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿತು. ಹಿಂದಿನ ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳು ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ ಹಾಗೂ ಅಣ್ಣ-ತಮ್ಮಂದಿರ ಮಧ್ಯೆ ಬೆಳೆಯುತ್ತಿದ್ದರು. ಇದರಿಂದಾಗಿ ಅವರಿಗೆ ಕೌಟುಂಬಿಕ ಬಾಂಧವ್ಯ, ಪ್ರೀತಿ ಮತ್ತು ಜವಾಬ್ದಾರಿಗಳ ಅರಿವು ಸಹಜವಾಗಿಯೇ ಮೂಡುತ್ತಿತ್ತು. ಆದರೆ ಇಂದಿನ ಆಧುನಿಕ ವಿಭಕ್ತ ಕುಟುಂಬಗಳಲ್ಲಿ ಉದ್ಯೋಗಸ್ಥ ಪೋಷಕರು ಮಕ್ಕಳಿಗೆ ಗುಣಮಟ್ಟದ ಸಮಯವನ್ನು ನೀಡಲು ತಡಕಾಡುತ್ತಿದ್ದಾರೆ. ಮಕ್ಕಳನ್ನು ಸುಮ್ಮನಿರಿಸಲು ಮೊಬೈಲ್ ಫೋನ್ ಮತ್ತು ಇತರ ಡಿಜಿಟಲ್ ಸಾಧನಗಳನ್ನು ಅವರ ಕೈಗಿಡುತ್ತಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಹೋಟೆಲ್‌ವೊಂದರಲ್ಲಿ ಪೋಷಕರು ಮಗುವಿಗೆ ಮೊಬೈಲ್ ನೀಡಿ ಊಟ ಮಾಡಿಸುತ್ತಿದ್ದ ದೃಶ್ಯವನ್ನು ಸ್ಮರಿಸಿದ ನ್ಯಾಯಮೂರ್ತಿ ಸುಂದರೇಶ್ ಅವರು, ಪೋಷಕರ ಸ್ಥಾನವನ್ನು ಗ್ಯಾಜೆಟ್‌ಗಳು ತುಂಬುತ್ತಿರುವುದು ದೊಡ್ಡ ದುರಂತಕ್ಕೆ ನಾಂದಿ ಹಾಡಲಿದೆ ಎಂದು ಎಚ್ಚರಿಸಿದರು. ಅವಿಭಕ್ತ ಕುಟುಂಬ ಎನ್ನುವುದು ಒಂದು ದೊಡ್ಡ ಆಸ್ತಿಯಾಗಿದ್ದು, ಜನರು ಇದರ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ನಿಜವಾದ ಸಂತೋಷ ಸಿಗುವುದು ಭೌತಿಕ ವಸ್ತುಗಳಿಂದಲ್ಲ, ಬದಲಿಗೆ ಮಾನವೀಯ ಸಂಬಂಧಗಳಿಂದ. ನಾವು ಕ್ರಮೇಣ ಯಂತ್ರಗಳಂತೆ ಬದಲಾಗುತ್ತಿದ್ದೇವೆ ಎಂದು ಅವರು ವಿಷಾದಿಸಿದರು. ಈ ಹಿಂದೆಯೂ ಅಂದರೆ 2025ರ ಮಾರ್ಚ್‌ನಲ್ಲಿ ವೃದ್ಧ ಪೋಷಕರು ಮತ್ತು ಮಗನ ನಡುವಿನ ಆಸ್ತಿ ವಿವಾದದ ವಿಚಾರಣೆ ವೇಳೆ ಕೋರ್ಟ್ ಇಂತಹುದೇ ಕಳವಳ ವ್ಯಕ್ತಪಡಿಸಿತ್ತು. ಇಡೀ ಜಗತ್ತನ್ನೇ ಒಂದು ಕುಟುಂಬ ಎಂದು ಭಾವಿಸುವ ‘ವಸುಧೈವ ಕುಟುಂಬಕಂ’ ಸಂಸ್ಕೃತಿಯ ಭಾರತದಲ್ಲಿ, ಇಂದು ಸ್ವಂತ ಕುಟುಂಬದಲ್ಲೇ ಒಗ್ಗಟ್ಟು ಉಳಿಸಿಕೊಳ್ಳಲು ಹೋರಾಡಬೇಕಾದ ಸ್ಥಿತಿ ಬಂದೊದಗಿದೆ ಎಂದು ಕೋರ್ಟ್ ಅಸಮಾಧಾನ ಹೊರಹಾಕಿತ್ತು.
ದೇಶದಲ್ಲಿ ಕಾಣೆಯಾಗುತ್ತಿದೆ ಅವಿಭಕ್ತ ಕುಟುಂಬಗಳು
ದೇಶದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವುದಕ್ಕೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ಹಾಗೂ 2011ರ ಜನಗಣತಿ ಅಂಕಿ-ಅಂಶಗಳೂ ಸಾಕ್ಷಿ ನುಡಿಯುತ್ತಿವೆ. ಉದ್ಯೋಗಕ್ಕಾಗಿ ವಲಸೆ, ನಗರೀಕರಣ, ದುಬಾರಿ ಮನೆ ವೆಚ್ಚಗಳು ಹಾಗೂ ಯುವ ಪೀಳಿಗೆಯ ಆರ್ಥಿಕ ಸ್ವಾವಲಂಬನೆಯಿಂದಾಗಿ ಬಹುತೇಕರು ಪೋಷಕರಿಂದ ದೂರವಾಗಿ ಸಣ್ಣ ಕುಟುಂಬಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕುಟುಂಬದ ಸ್ವರೂಪ ಯಾವುದೇ ಇರಲಿ, ಆದರೆ ಆಧುನಿಕ ಜೀವನಶೈಲಿಯ ಧಾವಂತದಲ್ಲಿ ಪರಸ್ಪರ ಸಂಬಂಧಗಳು ಮತ್ತು ಮಕ್ಕಳಿಗೆ ನೀಡಬೇಕಾದ ಸಮಯ ಮಾತ್ರ ಬಲಿಯಾಗಬಾರದು. ಗಟ್ಟಿಯಾದ ಕೌಟುಂಬಿಕ ಬಾಂಧವ್ಯಗಳು ಬೆಳೆಯುವುದು ಮೊಬೈಲ್ ಸ್ಕ್ರೀನ್‌ಗಳಿಂದಲ್ಲ, ಬದಲಿಗೆ ಮುಖಾಮುಖಿ ಪ್ರೀತಿಯ ಮಾತುಗಳಿಂದ ಮಾತ್ರ ಎಂಬ ಸ್ಪಷ್ಟ ಸಂದೇಶವನ್ನು ಸುಪ್ರೀಂ ಕೋರ್ಟ್ ಈ ಮೂಲಕ ರವಾನಿಸಿದೆ.
ಇದನ್ನೂ ಓದಿ: ಪೇಪರ್ ಲೀಕ್ ಮಾಡಿದ್ರೆ 10 ವರ್ಷ ಜೈಲು, ₹10 ಕೋಟಿ ದಂಡ!: ಮೋದಿ ಸರ್ಕಾರದ ಹೊಸ ಕಾನೂನಿಗೆ ಫಾಸ್ಟ್ ಟ್ರ್ಯಾಕ್ ಬಲ
