ಚೆನ್ನೈ: ತಂಜಾವೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾದ ಹಿನ್ನೆಲೆಯಲ್ಲಿ, ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udayanidhi Stalin) ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಂಗಳವಾರ (ಆಗಸ್ಟ್ 4) ಉದಯನಿಧಿ ಸಲ್ಲಿಸಿದ ತುರ್ತು ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಲು ಉನ್ನತ ನ್ಯಾಯಾಲಯ ಸಮ್ಮತಿಸಿದೆ.
ಯಾವುದೇ ಕ್ರಮ ತೆಗೆದುಕೊಳ್ಳದಂತೆ ಕೋರ್ಟ್ ಆದೇಶ
ತಂಜಾವೂರು ಪೊಲೀಸರು ವಿಪಕ್ಷ ನಾಯಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದರಿಂದ ಈ ಅರ್ಜಿಯನ್ನು ತಕ್ಷಣವೇ ವಿಚಾರಣೆ ನಡೆಸಬೇಕೆಂದು ಹಿರಿಯ ವಕೀಲ ಹಸನ್ ಮೊಹಮ್ಮದ್ ಜಿನ್ನಾ ಅವರು ಕೋರಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಜಿ.ಕೆ. ಇಳಂಧಿರೈಯನ್ ಅವರು, ಮಧ್ಯಾಹ್ನದ ವೇಳೆಗೆ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಅರ್ಜಿಯ ಸಂಪೂರ್ಣ ವಿಚಾರಣೆ ನಡೆಯುವವರೆಗೆ ಉದಯನಿಧಿ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಮತ್ತು ಬಂಧಿಸದಂತೆ ಸರ್ಕಾರಿ ವಕೀಲರಿಗೆ ಮೌಖಿಕ ಸೂಚನೆ ನೀಡಿದ್ದಾರೆ.
ಈ ಪ್ರಕರಣದ ಸಂಪೂರ್ಣ ವಿವರ,
ಎಫ್‌ಐಆರ್ ದಾಖಲಾಗಿದೆಯೇ, ಯಾವ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ ಹಾಗೂ ದೂರುದಾರರ ಆರೋಪವೇನು ಎಂಬುದನ್ನು ಪರಿಶೀಲಿಸಿದ ನಂತರವಷ್ಟೇ ಜಾಮೀನು ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ ಕಾವೇರಿ ವಿಚಾರದಲ್ಲಿ ತಮಿಳಗ ವೆಟ್ರಿ ಕಳಗಂ ನೇತೃತ್ವದ ಸರ್ಕಾರದ ವೈಫಲ್ಯವನ್ನು ಖಂಡಿಸಿ ಸೋಮವಾರ ತಂಜಾವೂರಿನಲ್ಲಿ ಉದಯನಿಧಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನಾ ಸಭೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಟೀಕಿಸುವ ವೇಳೆ, ಸಭೆಯಲ್ಲಿದ್ದ ಸಾರ್ವಜನಿಕರು ಚಲನಚಿತ್ರ ನಟಿಯ ಹೆಸರು ಕೂಗಿದಾಗ ಉದಯನಿಧಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಅವರ ವಿರುದ್ಧ ಪೊಲೀಸ್ ದೂರು ಮಾತ್ರವಲ್ಲದೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿದೆ. ಬುಧವಾರ (ಆಗಸ್ಟ್ 5) ತಮಿಳುನಾಡು ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಇದಕ್ಕೂ ಮುನ್ನವೇ ತಮಗಾಗಬಹುದಾದ ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಉದಯನಿಧಿ ಸ್ಟಾಲಿನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನನ್ನ ಬಂಧಿಸಿದ್ದು ಒಂದು ಜೋಕ್
ಚೆನ್ನೈ: ತಮಿಳುನಾಡಿನ ರಾಜಕೀಯ ರಂಗದಲ್ಲಿ ಮಂಗಳವಾರ ಮುಂಜಾನೆ ದಿಢೀರ್ ಹೈಡ್ರಾಮಾ ನಡೆದಿದ್ದು, ಚಲನಚಿತ್ರ ನಟಿ ತ್ರಿಷಾ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಅವರ ಮನೆಯಲ್ಲೇ ಬಂಧಿಸಿದ್ದಾರೆ. ಪೊಲೀಸ್ ವಾಹನ ಹತ್ತುವಾಗ ಅತ್ಯಂತ ಹಗುರವಾಗಿ ನಗುತ್ತಲೇ ಪ್ರತಿಕ್ರಿಯಿಸಿದ ಉದಯನಿಧಿ, “ನನ್ನನ್ನು ಅರೆಸ್ಟ್ ಮಾಡಿರೋದು ಒಂದು ದೊಡ್ಡ ಜೋಕ್” ಎಂದು ಚೇಷ್ಟೆ ಮಾಡಿದ್ದಲ್ಲದೆ, ಈ ಪ್ರಕರಣವನ್ನು ನ್ಯಾಯಾಲಯದಲ್ಲಿಯೇ ಕಾನೂನಾತ್ಮಕವಾಗಿ ಎದುರಿಸುವುದಾಗಿ ಸವಾಲು ಹಾಕಿದ್ದಾರೆ.
ಘಟನೆಯ ಸಂಪೂರ್ಣ ವಿವರ ತಂಜಾವೂರಿನಲ್ಲಿ ಕಾವೇರಿ ನೀರಾವರಿ ಸಮಸ್ಯೆಗೆ ಸಂಬಂಧಿಸಿದಂತೆ ನಡೆದ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಉದಯನಿಧಿ ಭಾಗವಹಿಸಿದ್ದರು. ಈ ವೇಳೆ ಅವರು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಸರ್ಕಾರದ ವೈಫಲ್ಯಗಳನ್ನು ಕಟುವಾಗಿ ಟೀಕಿಸುತ್ತಿದ್ದಾಗ, ಸಭಿಕರ ಸಾಲಿನಿಂದ ಕೆಲವರು ನಟಿ ತ್ರಿಷಾ ಅವರ ಹೆಸರನ್ನು ಕೂಗಿದ್ದರು. ಅದಕ್ಕೆ ಪ್ರತಿಯಾಗಿ ಉದಯನಿಧಿ ನೀಡಿದ ಕೆಲ ದ್ವಂದ್ವಾರ್ಥದ ಮಾತುಗಳು ನಟಿಯನ್ನು ನಿಂದಿಸುವಂತಿದ್ದವು ಎಂಬ ಆರೋಪ ಕೇಳಿಬಂದಿದೆ. ಈ ಭಾಷಣದ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.
ರಾಜಕೀಯ ಕೆಸರೆರಚಾಟ ಮತ್ತು ಆಕ್ರೋಶ ಉದಯನಿಧಿ ಅವರ ಈ ನಿಲುವಿಗೆ ಆಡಳಿತಾರೂಢ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಹಾಗೂ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯೊಬ್ಬರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿರುವ ಟಿವಿಕೆ ನಾಯಕರು, ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. “ಇದು ಯಾವುದೇ ರಾಜಕೀಯ ದ್ವೇಷದ ಬಂಧನವಲ್ಲ, ಬದಲಿಗೆ ಮಹಿಳೆಗೆ ಮಾಡಿದ ಅಪಮಾನಕ್ಕೆ ಸಿಕ್ಕ ಶಿಕ್ಷೆ” ಎಂದು ಟಿವಿಕೆ ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ಉದಯನಿಧಿ ಬೆಂಬಲಕ್ಕೆ ನಿಂತಿರುವ ಡಿಎಂಕೆ ನಾಯಕರು, “ಅವರು ಯಾವುದೇ ನಟಿಯ ಹೆಸರನ್ನು ಉಲ್ಲೇಖಿಸಿಲ್ಲ, ಕೇವಲ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಿದ್ದಾರೆ. ಸರ್ಕಾರವು ಸಣ್ಣ ವಿಷಯವನ್ನು ದೊಡ್ಡದು ಮಾಡಿ ರಾಜಕೀಯ ಹೂ ಸಂಚು ನಡೆಸುತ್ತಿದೆ” ಎಂದು ಖಂಡಿಸಿದ್ದಾರೆ. ವಿಪಕ್ಷ ನಾಯಕನ ಬಂಧನದ ಬೆನ್ನಲ್ಲೇ ತಮಿಳುನಾಡಿನಾದ್ಯಂತ ಡಿಎಂಕೆ ಕಾರ್ಯಕರ್ತರು ರಸ್ತೆಗಿಳಿದಿದ್ದು, ಹಲವೆಡೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಯುಪಿಯಲ್ಲಿ ಕಂವಾರ ಯಾತ್ರಿಕರಿಗೆ ಹೆಲಿಕಾಪ್ಟರ್ ಪುಷ್ಪವೃಷ್ಟಿ; 7 ಜಿಲ್ಲೆಗಳಲ್ಲಿ 10 ಗಂಟೆಗಳ ಕಾಲ ಅಬ್ಬರಿಸಲಿದೆ ಹೂವಿನ ಮಳೆ!
