ಗುಜರಾತ್: ಪತಿಯ ಮೊದಲ ಮದುವೆಯ ವಿಚಾರ ತಿಳಿಯದೆ ಎರಡನೇ ಮದುವೆಯಾದ ಮಹಿಳೆಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶ ಪಡೆಯುವ ಅರ್ಹತೆಯಿದೆ ಎಂದು ಅಲಹಾಬಾದ್ ಹೈಕೋರ್ಟ್ (High Court) ಮಹತ್ವದ ತೀರ್ಪು ನೀಡಿದೆ.
ಮೊದಲ ಮದುವೆಯನ್ನು ಮರೆಮಾಚಿ ವಂಚನೆಯಿಂದ ಮದುವೆಯಾಗಿದ್ದರೂ, ಕಾನೂನಿನ ಕಣ್ಣಿನಲ್ಲಿ ಆ ಮದುವೆ ರದ್ದಾಗಿದ್ದರೂ ಸಹ ಪತಿಯು ಜೀವನಾಂಶ ನೀಡುವಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಾನೇ ಮಾಡಿದ ತಪ್ಪಿನ ಲಾಭವನ್ನು ಪಡೆದುಕೊಂಡು ಮಹಿಳೆಗೆ ಜೀವನಾಂಶ ನಿರಾಕರಿಸಲು ಪತಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್
ಈ ಪ್ರಕರಣದಲ್ಲಿ ಪತಿ ಮನೋಜ್ ಕುಮಾರ್ ನೀಡಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಗರಿಮಾ ಪ್ರಸಾದ್ ಅವರಿದ್ದ ಪೀಠ, ಮಥುರಾ ಕುಟುಂಬ ನ್ಯಾಯಾಲಯ ನೀಡಿದ್ದ ಜೀವನಾಂಶದ ಆದೇಶವನ್ನು ಎತ್ತಿಹಿಡಿದಿದೆ. ಅಷ್ಟೇ ಅಲ್ಲದೆ ಜೀವನಾಂಶದ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಪತ್ನಿ ಮೊನಿಕಾ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ. ಮೊದಲ ಮದುವೆ ವಿಚ್ಛೇದನವಾಗುವ ಮುನ್ನವೇ 2016ರಲ್ಲಿ ಈ ಮದುವೆ ನಡೆದಿದ್ದರಿಂದ ಇದು ಸಿಂಧುವಲ್ಲ ಮತ್ತು ಜೀವನಾಂಶ ನೀಡಲು ಬರುವುದಿಲ್ಲ ಎಂದು ಪತಿ ವಾದಿಸಿದ್ದ. ಆದರೆ ಪತಿ ಸರ್ಕಾರಿ ಉದ್ಯೋಗಿಯಾಗಿದ್ದು ತಿಂಗಳಿಗೆ 50,000 ರೂಪಾಯಿ ವೇತನ ಪಡೆಯುತ್ತಿರುವುದರಿಂದ, ಪ್ರಸ್ತುತ ನೀಡುತ್ತಿರುವ 6,000 ರೂಪಾಯಿ ಜೀವನಾಂಶ ಅತ್ಯಂತ ಕಡಿಮೆಯಾಗಿದೆ ಎಂದು ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಹೇಳಿದ್ದೇನು?
ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿರುವುದು ಮತ್ತು ಪತಿಯು ತನಗೆ ಈಗಾಗಲೇ ಮದುವೆಯಾಗಿರುವ ಸತ್ಯವನ್ನು ಮರೆಮಾಚಿ ವಂಚಿಸಿರುವುದು ಕುಟುಂಬ ನ್ಯಾಯಾಲಯದ ತನಿಖೆಯಲ್ಲಿ ಸಾಬೀತಾಗಿತ್ತು. ಪತಿಯು ಗನ್ ಪಾಯಿಂಟ್‌ನಲ್ಲಿ ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂದು ಮಾಡಿದ ಆರೋಪವನ್ನೂ ನ್ಯಾಯಾಲಯ ತಳ್ಳಿಹಾಕಿದೆ. ವಂಚನೆಗೆ ಒಳಗಾದ ಮಹಿಳೆ ಅನಾಥವಾಗುವುದನ್ನು ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ತಡೆಯಲು ಸೆಕ್ಷನ್ 125ಕ್ಕೆ ವ್ಯಾಪಕ ಹಾಗೂ ಜನಪರ ಅರ್ಥ ವಿವರಣೆ ನೀಡುವುದು ಅಗತ್ಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದ್ದರಿಂದ ಕಾನೂನುಬದ್ಧವಾಗಿ ಮದುವೆ ರದ್ದಾಗಿದ್ದರೂ, ಸತ್ಯ ಮರೆಮಾಚಿ ಮದುವೆಯಾದ ಪತಿಯಿಂದ ಮಹಿಳೆಗೆ ಜೀವನಾಂಶ ಸಿಗುವುದು ಆಕೆಯ ಹಕ್ಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ವೈದ್ಯರ ಮೇಲೆ ಶಿವಸೇನಾ ಕಾರ್ಪೋರೇಟರ್ ಹಲ್ಲೆ ಪ್ರಕರಣ, ಜಾಮೀನು ನಿರಾಕರಣೆ
