TOP NEWS

Narendra Modi: ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಪೋಸ್ಟ್: ಎಕ್ಸ್ ಖಾತೆಗಳಿಗೆ ದೆಹಲಿ ಪೊಲೀಸರಿಂದ ನೋಟಿಸ್

Delhi police sent notice to x accounts for using abusive word for Narendra modi

ನವದೆಹಲಿ: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಿಜೆಪಿ ವಿದ್ಯಾರ್ಥಿ ಪ್ರತಿಭಟನೆ ಮತ್ತು ‘ಸಂಸತ್ ಚಲೋ’ ರ್ಯಾಲಿಯ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಹಾಗೂ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಪೋಸ್ಟ್‌ಗಳನ್ನು ಹಾಕಿದವರ ವಿರುದ್ಧ ದೆಹಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಈ ರೀತಿಯ ಆಕ್ಷೇಪಾರ್ಹ ಹಾಗೂ ಅಸಭ್ಯ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಹಲವಾರು ‘ಎಕ್ಸ್’ (ಟ್ವಿಟರ್) ಖಾತೆಗಳು ಮತ್ತು ಕೆಲವು ಪ್ರಮುಖ ಸುದ್ದಿ ಪೋರ್ಟಲ್‌ಗಳಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಸೈಬರ್‌ ತಂಡದಿಂದ ಕೂಲಂಕಷವಾಗಿ ಪರಿಶೀಲನೆ

ಪ್ರತಿಭಟನೆಯ ಸಂದರ್ಭದಲ್ಲಿ ಮತ್ತು ಅದರ ನಂತರ ಅಂತರ್ಜಾಲದಲ್ಲಿ ಹರಿದಾಡಿದ ವೀಡಿಯೊಗಳು, ಕಾಮೆಂಟ್‌ಗಳು ಮತ್ತು ಪೋಸ್ಟ್‌ಗಳನ್ನು ದೆಹಲಿ ಪೊಲೀಸರ ಸೈಬರ್ ಹಾಗೂ ಸಾಮಾಜಿಕ ಜಾಲತಾಣ ನಿಗಾ ತಂಡವು ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಕಾನೂನು ಉಲ್ಲಂಘನೆ ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆ ತರುವಂತಹ ಪೋಸ್ಟ್‌ಗಳನ್ನು ಪತ್ತೆ ಹಚ್ಚಲಾಗುತ್ತಿದ್ದು, ಇಂತಹ ನಿಂದನಾತ್ಮಕ ವಿಷಯಗಳನ್ನು ತಕ್ಷಣವೇ ತೆಗೆದುಹಾಕುವಂತೆ ಸಂಬಂಧಪಟ್ಟ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ (ಇಂಟರ್ಮಿಡಿಯರಿ) ನಿರ್ದೇಶನ ನೀಡಲಾಗಿದೆ.

ವಿಡಿಯೋ ಹಾಗೂ ಫೋಟೋ ಡಿಲೀಟ್‌

ಇದಲ್ಲದೆ, ಪ್ರತಿಭಟನೆಯ ನೆಪದಲ್ಲಿ ಸುಳ್ಳು ಸುದ್ದಿಗಳು, ವಿಕೃತ ವೀಡಿಯೊಗಳು ಮತ್ತು ವದಂತಿಗಳನ್ನು ಹರಡಲು ಯತ್ನಿಸುತ್ತಿದ್ದ ಪಾಕಿಸ್ತಾನ ಮೂಲದ 400ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ಖಾತೆಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಮತ್ತು ಜುಲೈ 20ರ ‘ಸಂಸತ್ ಚಲೋ’ ಮಾರ್ಚ್‌ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ವಿರುದ್ಧ ಬಳಸಲಾದ ದ್ವೇಷಪೂರಿತ ಕಾಮೆಂಟ್‌ಗಳು ಹಾಗೂ ವೀಡಿಯೊಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.

ಆನ್‌ಲೈನ್‌ನಲ್ಲಿ ಕಾನೂನುಬಾಹಿರ ಹಾಗೂ ಆಕ್ಷೇಪಾರ್ಹ ಚಟುವಟಿಕೆಗಳು ಮುಂದುವರಿಯದಂತೆ ಸೈಬರ್ ಪೊಲೀಸರು ನಿರಂತರ ಕಣ್ಣಿಟ್ಟಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಪತಿಯ ಮೊದಲ ಮದುವೆಯ ವಿಚಾರ ತಿಳಿಯದೆ ಮದುವೆ ಆಗಿದ್ದರೆ ಜೀವನಾಂಶದ ಹಕ್ಕಿದೆ: ಅಲಹಾಬಾದ್ ಹೈಕೋರ್ಟ್

Leave a Reply

Your email address will not be published. Required fields are marked *