ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ಸ್ಯಾಂಡಲ್‌ವುಡ್‌ನ (Sandalwood) ಪ್ರಸಿದ್ಧ ನಿರ್ಮಾಪಕ ಜಯಣ್ಣ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಜೋಡಿ ಎಂದೇ ಗುರುತಿಸಿಕೊಂಡಿದೆ. ಜಯಣ್ಣ-ಭೋಗೇಂದ್ರ ಬ್ಯಾನರ್ ಅಡಿಯಲ್ಲಿ ಮೂಡಿಬಂದ ಯಶ್ ನಟನೆಯ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಿರ್ಮಾಪಕ ಜಯಣ್ಣ, ಯಶ್ ಅವರ ಆರಂಭಿಕ ದಿನಗಳ ಯಶಸ್ವಿ ಚಿತ್ರ ‘ಜಾನು’ ಸೆಟ್ಟೇರಿದ ಹಿಂದಿನ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಜಾನು ಸಿನಿಮಾ ಸೆಟ್ಟೇರಿದ ಕತೆ ಇದು
ನಿರ್ದೇಶಕ ಪ್ರೀತಂ ಗುಬ್ಬಿ ಅವರು ಸಿದ್ಧಪಡಿಸಿಕೊಂಡಿದ್ದ ಒಂದು ವಿಭಿನ್ನ ಪ್ರೇಮಕಥೆಯ ಮೂಲಕ ‘ಜಾನು’ ಸಿನಿಮಾದ ಜರ್ನಿ ಶುರುವಾಗಿತ್ತು. ವಿಶೇಷವೆಂದರೆ, ಆರಂಭದಲ್ಲಿ ಈ ಕಥೆಯನ್ನು ಮತ್ತೊಬ್ಬ ನಾಯಕ ನಟನನ್ನು ಮನಸ್ಸಿನಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ ಆ ನಟನ ಜೊತೆಗಿನ ಪ್ರಾಜೆಕ್ಟ್ ಅರ್ಧಕ್ಕೆ ನಿಂತುಹೋಗಿತ್ತು.
Interesting revelation from Producer Jayanna.#Yash wasn’t the first choice for #Jaanu. pic.twitter.com/IS2wTIR6Yn
— Karnataka Box Office | ಕರ್ನಾಟಕ ಬಾಕ್ಸ್ ಆಫೀಸ್ (@Kannada_BO) July 28, 2026
ಅದೇ ಸಮಯದಲ್ಲಿ ಯಶ್ ಅಭಿನಯದ ‘ಮೊದಲಸಲ’ ಚಿತ್ರ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿತ್ತು. ಈ ಚಿತ್ರದಲ್ಲಿ ಯಶ್ ಅವರ ನಟನಾ ಶೈಲಿ ನಿರ್ಮಾಪಕ ಜಯಣ್ಣ ಅವರಿಗೆ ಬಹಳ ಇಷ್ಟವಾಗಿತ್ತು. ಇದರ ಬೆನ್ನಲ್ಲೇ ಯಶ್ ನಟನೆಯ ‘ಕಿರಾತಕ’ ಸಿನಿಮಾ ಕೂಡ ಪ್ರೇಕ್ಷಕರ ಮನ ಗೆದ್ದು ಬೀಗಿತ್ತು. ಈ ಬ್ಯಾಕ್-ಟು-ಬ್ಯಾಕ್ ಯಶಸ್ಸಿನಿಂದ ಪ್ರಭಾವಿತರಾದ ಜಯಣ್ಣ, ಈ ಹೊಸ ಚಿತ್ರವನ್ನು ಯಶ್ ಅವರೊಂದಿಗೇ ಮಾಡಲು ನಿರ್ಧರಿಸಿ, ನಿರ್ದೇಶಕ ಪ್ರೀತಂ ಗುಬ್ಬಿ ಅವರಿಗೂ ಇದೇ ಸಲಹೆ ನೀಡಿದರು.
ಬಳಿಕ ಜಯಣ್ಣ ಅವರು ಯಶ್‌ಗೆ ಕರೆ ಮಾಡಿ ಮಾತನಾಡಿದಾಗ, ಮೊದಲ ಭೇಟಿಯಲ್ಲೇ ಸಿನಿಮಾ ಒಪ್ಪಂದ ಬಹುತೇಕ ಅಂತಿಮವಾಗಿತ್ತು. ಆದರೆ ಜಯಣ್ಣ ಅವರ ಕಡೆಯಿಂದ ಮುಂಗಡ ಹಣ (ಅಡ್ವಾನ್ಸ್) ಪಡೆದುಕೊಳ್ಳುವ ಮುನ್ನ ಯಶ್ 5 ದಿನಗಳ ಕಾಲಾವಕಾಶ ಕೋರಿದ್ದರು. ಅದಕ್ಕೆ ಕಾರಣ, ತಾವು ಈಗಾಗಲೇ ಮತ್ತೊಬ್ಬ ನಿರ್ಮಾಪಕರಿಂದ ಅಡ್ವಾನ್ಸ್ ಪಡೆದಿದ್ದು, ಅವರಿಂದ ಅನುಮತಿ ಪಡೆದ ಬಳಿಕವಷ್ಟೇ ಹೊಸ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಯಶ್ ಸ್ಪಷ್ಟಪಡಿಸಿದ್ದರು. ನಟ ಯಶ್ ಅಂದು ಕೂಡ ತಮ್ಮ ವೃತ್ತಿಪರ ನೈತಿಕತೆ ಮತ್ತು ಕೊಟ್ಟ ಮಾತಿಗೆ ಬದ್ಧರಾಗಿದ್ದನ್ನು ಜಯಣ್ಣ ಈ ಸಂದರ್ಭದಲ್ಲಿ ಹೆಮ್ಮೆಯಿಂದ ನೆನಪಿಸಿಕೊಂಡಿದ್ದಾರೆ.
ಮಾತಿಗೆ ತಪ್ಪದ ಯಶ್
ಹಳೆಯ ಒಪ್ಪಂದ ಕ್ಲಿಯರ್ ಆದ ಬಳಿಕ, ಯಶ್ ಅವರು ಜಯಣ್ಣ ಅವರ ಕಚೇರಿಗೆ ಬಂದು ಕಥೆಯನ್ನು ಪೂರ್ತಿಯಾಗಿ ಕೇಳಿ ಮುಂಗಡ ಹಣ ಪಡೆದರು. ಹೀಗೆ ‘ಜಾನು’ ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿತು. ಇದರೊಂದಿಗೆ ಯಶ್ ಅವರ ಸಿನಿಮಾ ಪ್ರೀತಿಯನ್ನು ಕೊಂಡಾಡಿರುವ ಜಯಣ್ಣ, ಯಶ್‌ಗೆ ವೃತ್ತಿಜೀವನದ ಆರಂಭದಿಂದಲೂ ಚಿತ್ರಕಥೆ ಹಾಗೂ ಮೇಕಿಂಗ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಅದ್ಭುತ ಹವ್ಯಾಸವಿತ್ತು. ಆರಂಭದ ದಿನಗಳಲ್ಲಿ ಚಿತ್ರತಂಡದವರು ಅವರ ಸಲಹೆಗಳನ್ನು ಹೆಚ್ಚಾಗಿ ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ, ಆದರೆ ಅವರ ಸಿನಿಮಾಗಳು ಗೆಲ್ಲುತ್ತಿದ್ದಂತೆ ಮುಂದಿನ ದಿನಗಳಲ್ಲಿ ಎಲ್ಲರೂ ಅವರ ಮಾತಿಗೆ ಬೆಲೆ ಕೊಡಲು ಶುರು ಮಾಡಿದರು ಎಂದು ಜಯಣ್ಣ ಮುಕ್ತವಾಗಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಣ ಪದ್ಧತಿಯನ್ನು ಹೂತು ಹಾಕಿ”: ಎಐ ಅಬ್ಬರದ ನಡುವೆ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಪೋಸ್ಟ್!
