ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್ ಕನ್ನಡ’ (Bigg Boss) ಅಂಗಳದಲ್ಲಿ ಈ ವಾರ ನಡೆದ ಸರಣಿ ಜಗಳಗಳು, ಸ್ಪರ್ಧಿಗಳ ನಡುವಿನ ಕೆಸರೆರಚಾಟ ಹಾಗೂ ಅವಾಚ್ಯ ಶಬ್ದಗಳ ಬಳಕೆ ಗಂಭೀರ ವಿವಾದಕ್ಕೆ ಕಾರಣವಾಗಿದೆ. ಟಾಸ್ಕ್ ಹಾಗೂ ಕಳಪೆ ನೀಡುವ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿರುವುದು ವೀಕ್ಷಕರ ತೀವ್ರ ಆಕ್ರೋಶಕ್ಕೆ ಈಡಾಗಿದೆ. ಇದೀಗ ಶನಿವಾರದ ವೀಕೆಂಡ್ ಪಂಚಾಯ್ತಿ ಹತ್ತಿರವಾಗಿದ್ದು, ಆಟದ ನಿರೂಪಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿಯಮ ಮುರಿದ ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಲು ಸಂಪೂರ್ಣ ಸಜ್ಜಾಗಿದ್ದಾರೆ.
ಬಿಡುಗಡೆಯಾಗಿರುವ ನೂತನ ಪ್ರೋಮೋದಲ್ಲಿ ಸ್ವತಃ ಸುದೀಪ್ ಅವರೇ ಈ ವಾರದ ಪಂಚಾಯ್ತಿ ಎಷ್ಟು ಗಂಭೀರವಾಗಿರಲಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. “ಈ ವಾರ ಬರೀ ಸುಮ್ಮನೆ ಚರ್ಚೆ ಮಾಡುವುದಕ್ಕಿಂತ ಹೆಚ್ಚಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗುತ್ತದೆ” ಎಂದು ಅವರು ಖಡಕ್ ಆಗಿ ಹೇಳಿದ್ದಾರೆ. ಜೊತೆಗೆ, “ಮನೆ ಸುಂದರವಾಗಿ ಕಾಣಲಿ ಎಂದು ನಾವು ಗಿಡ ತಂದು ನೆಡುತ್ತೇವೆ. ಆದರೆ ಅದೇ ಗಿಡ ಅಡ್ಡಾದಿಡ್ಡಿಯಾಗಿ ಬೆಳೆದು ಮನೆಯ ಗೋಡೆಯನ್ನೇ ಒಡೆಯುವ ಹಂತ ತಲುಪಿದಾಗ, ಅದನ್ನು ಕತ್ತರಿಸಿ ಹಾಕುವುದು ಅನಿವಾರ್ಯವಾಗುತ್ತದೆ” ಎಂಬ ಉಪಮೆಯ ಮೂಲಕ ಮನೆಗೆ ಮಾರಕವಾಗಿರುವ ಸ್ಪರ್ಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಸ್ಪಷ್ಟ ಸುಳಿವು ನೀಡಿದ್ದಾರೆ. ಹೀಗಾಗಿ, ತಪ್ಪು ಎಸಗಿದ ಕೆಲವು ಸ್ಪರ್ಧಿಗಳಿಗೆ ಸುದೀಪ್ ರೆಡ್ ಕಾರ್ಡ್ ನೀಡಿ ನೇರವಾಗಿ ಮನೆಯಿಂದಲೇ ಹೊರಹಾಕುವ ಸಾಧ್ಯತೆ ದಟ್ಟವಾಗಿದೆ.
ಮಾಡರ್ನ್ ಮಹಾಕವಿ ಮಂಜು ಆಟ ಮತ್ತು ಅತಿರೇಕದ ಮಾತು: ಈ ವಾರ ಬಿಗ್‌ಬಾಸ್ ಮನೆಯಲ್ಲಿ ‘ಮಾಡರ್ನ್ ಮಹಾಕವಿ’ ಎಂದೇ ಗುರುತಿಸಿಕೊಂಡಿರುವ ಮಂಜು ಅವರ ಪ್ರದರ್ಶನಕ್ಕಿಂತಲೂ ಅವರ ಮಾತಿನ ವೈಖರಿಯೇ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ತಮ್ಮ ಮಾತಿನ ಚಾತುರ್ಯದಿಂದಲೇ ಎದುರಾಳಿಗಳನ್ನು ಮಣಿಸುವ ತಂತ್ರ ಹೊಂದಿರುವ ಮಂಜು, ಹಲವು ಸಂದರ್ಭಗಳಲ್ಲಿ ಅತಿಯಾಗಿ ವರ್ತಿಸಿ ಸಹ-ಸ್ಪರ್ಧಿಗಳಿಗೆ ಸಹಿಸಲಾರದಷ್ಟು ಕಿರಿಕಿರಿ ಉಂಟುಮಾಡಿದ್ದಾರೆ. ಮುಖ್ಯವಾಗಿ ಈ ವಾರ ಅವರು ಬಳಸಿದ ಕೆಟ್ಟ ಮಾತುಗಳು ಮತ್ತು ಅವಾಚ್ಯ ಶಬ್ದಗಳು ಬಿಗ್‌ಬಾಸ್ ಮನೆಯ ಸ್ವಸ್ಥ ವಾತಾವರಣವನ್ನು ತೀವ್ರವಾಗಿ ಹಾಳುಗೆಡಿಸಿವೆ. ಮಂಜು ಹಾಗೂ ಯಶಸ್, ಹಾಗೆಯೇ ಮಂಜು ಮತ್ತು ಸೌಂದರ್ಯಾ ನಡುವೆ ನಡೆದ ಜಗಳಗಳು ವಿಕೋಪಕ್ಕೆ ತಿರುಗಿ ಇಡೀ ಮನೆಯನ್ನು ರಣರಂಗವನ್ನಾಗಿ ಮಾಡಿದ್ದವು.
ಇಂದು ‘decision’ ಸಮಯ! ಬಿಗ್ ಬಾಸ್ – ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9 ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq #BBK13 #ColorsKannada #KichchaSudeepa #CKBBKPromo https://t.co/ibWSsD1ept
— Colors Kannada (@ColorsKannada) October 10, 2026
ಗಗನ್ ಹಾಗೂ ಗಾನವಿ ನಡುವಿನ ತೀವ್ರ ವಾಗ್ದಾಳಿ: ಇತ್ತ ಸ್ಪರ್ಧಿಗಳಾದ ಗಗನ್ ಮತ್ತು ಗಾನವಿ ನಡುವಿನ ಕಹಿಸಂಬಂಧ ಈ ವಾರ ಮತ್ತಷ್ಟು ತಾರಕಕ್ಕೇರಿದೆ. ಟಾಸ್ಕ್ ನಡೆದ ಸಮಯದಲ್ಲಿ ಗಾನವಿ ಅವರು ಗಗನ್ ಅವರನ್ನು ಉದ್ದೇಶಪೂರ್ವಕವಾಗಿ ‘ಕುನ್ನಿ’ ಎಂದು ಕರೆಯುವ ಮೂಲಕ ಅವರ ಕೋಪವನ್ನು ಕೆರಳಿಸಿದ್ದರು. ಇದಾದ ನಂತರ ‘ಕಳಪೆ’ ನೀಡುವ ಸಂದರ್ಭದಲ್ಲಿ ಈ ವಿಚಾರ ಬೃಹದಾಕಾರವಾಗಿ ಬೆಳೆಯಿತು. “ನೀನು, ನಾನು ಹಾಕುವ ಪ್ಯಾಂಟ್ ಬೆಲೆಯಷ್ಟೂ ಇಲ್ಲ” ಎಂಬ ಅರ್ಥದಲ್ಲಿ ಗಗನ್ ಆಡಿದ ಮಾತುಗಳು ಗಾನವಿಯವರನ್ನು ತೀವ್ರವಾಗಿ ಕೆರಳಿಸಿದವು. ಇಬ್ಬರ ನಡುವೆ ಮಾತು ಬೆಳೆದು ಅವಾಚ್ಯ ಶಬ್ದಗಳ ಸರಣಿ ಪ್ರಯೋಗ ನಡೆಯಿತಲ್ಲದೆ, ಕೊನೆಗೆ ಪರಸ್ಪರ ಗೂಸಾ ಕೊಟ್ಟುಕೊಳ್ಳುವ ಹಂತಕ್ಕೂ ಪರಿಸ್ಥಿತಿ ವಿಕೋಪಕ್ಕೆ ಹೋಯಿತು.
ಈ ಎಲ್ಲಾ ಹೈಡ್ರಾಮಾಗಳಿಗೆ ಇಂದಿನ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಯಾವ ರೀತಿಯ ನ್ಯಾಯ ಸಿಗಲಿದೆ ಮತ್ತು ಸುದೀಪ್ ಅವರ ಕಠಿಣ ನಿರ್ಧಾರ ಯಾರಿಗೆ ಕಂಟಕವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮುಗಿಲುಮುಟ್ಟಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಆತ್ಮಗೌರವದ ಕಿಚ್ಚು: ‘ರಾಕ್ಷಸರು-ಗಂಧರ್ವರು’ ಟಾಸ್ಕ್ ಜಗಳಕ್ಕೆ ಶೋ ಬಿಡಲು ಗಗನ್ ಚಿನ್ನಪ್ಪ ನಿರ್ಧಾರ!
