ಇಸ್ಲಾಮಾಬಾದ್: ತಾಂತ್ರಿಕ ದೋಷದ ಕಾರಣದಿಂದಾಗಿ ಪಾಕಿಸ್ತಾನ ಸೇನೆಗೆ ಸೇರಿದ ತರಬೇತಿ ವಿಮಾನವೊಂದು ಪತನಗೊಂಡು, ಅದರಲ್ಲಿದ್ದ ಇಬ್ಬರು ಯೋಧರು ದಾರುಣವಾಗಿ ಸಜೀವ (Pakistan) ದಹನಗೊಂಡಿರುವ ಘಟನೆ ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾ ಸಮೀಪ ಅಕ್ಟೋಬರ್ 12 ರಂದು (ಸೋಮವಾರ) ಸಂಭವಿಸಿದೆ. ವಿಮಾನದಲ್ಲಿದ್ದ ಹಿರಿಯ ಪೈಲಟ್ ಹಾಗೂ ತರಬೇತಿ ಪಡೆಯುತ್ತಿದ್ದ ಮತ್ತೊಬ್ಬ ಅಧಿಕಾರಿ ಈ ಭೀಕರ ಅಪಘಾತದಲ್ಲಿ ಅಸುನೀಗಿದ್ದಾರೆ ಎಂದು ಪಾಕಿಸ್ತಾನ ಸೇನೆಯ ಅಧಿಕೃತ ಮಾಧ್ಯಮ ವಿಭಾಗ ಖಚಿತಪಡಿಸಿದೆ.
ತಾಂತ್ರಿಕ ದೋಷದಿಂದ ನಡೆದ ಅಪಘಾತ
ಪಾಕಿಸ್ತಾನ್ ಆರ್ಮಿ ಏವಿಯೇಷನ್ಗೆ ಸೇರಿದ ‘ಮುಶ್ಶಾಕ್’ (Mushshak) ಮಾದರಿಯ ತರಬೇತಿ ವಿಮಾನವು ಮಧ್ಯಾಹ್ನದ ವೇಳೆಗೆ ತರಬೇತಿ ಹಾರಾಟ ನಡೆಸುತ್ತಿದ್ದಾಗ ಕ್ವೆಟ್ಟಾದ ನವಾನ್ ಕಿಲ್ಲಿ ಎಂಬ ಪ್ರದೇಶದ ಬಳಿ ದಿಢೀರ್ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ಪರಿಣಾಮವಾಗಿ ನಿಯಂತ್ರಣ ತಪ್ಪಿದ ವಿಮಾನವು ನೆಲಕ್ಕೆ ಅಪ್ಪಳಿಸಿ ಈ ಭೀಕರ ದುರಂತ ಸಂಭವಿಸಿದೆ. ಈ ದುರದೃಷ್ಟಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಇನ್ಸ್ಟ್ರಕ್ಟರ್ ಮೇಜರ್ ಹುಸ್ನೇನ್ ಶಹಜಾದ್ ಹುಮಾಯೂನ್ ಹಾಗೂ ತರಬೇತಿ ಪಡೆಯುತ್ತಿದ್ದ ಕ್ಯಾಪ್ಟನ್ ಅಬ್ದುಲ್ ಸಮದ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಸೇನೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಭೀಕರ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ದೇಶದ ಉನ್ನತ ನಾಯಕರು ತೀವ್ರ ಕಂಬನಿ ಮಿಡಿದಿದ್ದಾರೆ. ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಪ್ರಧಾನಮಂತ್ರಿ ಶಹಬಾಜ್ ಶರೀಫ್ ಅವರು ಮೃತಪಟ್ಟ ಸೇನಾ ಪೈಲಟ್ಗಳ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿದ್ದು, ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಕೋರಿದ್ದಾರೆ.
ಈ ಹಿಂದೆಯೂ ನಡೆದಿತ್ತು ದುರಂತ
ಪಾಕಿಸ್ತಾನ ಸೇನೆಯಲ್ಲಿ ಇಂತಹ ವಿಮಾನ ಹಾಗೂ ಹೆಲಿಕಾಪ್ಟರ್ ಅಪಘಾತಗಳು ಸಂಭವಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಜೂನ್ ತಿಂಗಳಿನಲ್ಲಿಯೂ ಸಹ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಮುಜಫರಾಬಾದ್ ಸಮೀಪ ಪಾಕಿಸ್ತಾನ ಸೇನೆಗೆ ಸೇರಿದ ‘Mi-17’ ಮಾದರಿಯ ಬೃಹತ್ ಹೆಲಿಕಾಪ್ಟರ್ ವೊಂದು ಪತನಗೊಂಡಿತ್ತು. ಆ ಭೀಕರ ದುರಂತದಲ್ಲಿ ಹೆಲಿಕಾಪ್ಟರ್ನಲ್ಲಿದ್ದ ಎಲ್ಲಾ ಸೇನಾ ಸಿಬ್ಬಂದಿ ಹಾಗೂ ಪೈಲಟ್ಗಳು ಮೃತಪಟ್ಟಿದ್ದರು. ಇದೀಗ ಕೆಲವೇ ತಿಂಗಳ ಅಂತರದಲ್ಲಿ ಮತ್ತೊಂದು ಸೇನಾ ವಿಮಾನ ತಾಂತ್ರಿಕ ದೋಷದಿಂದಾಗಿ ಪತನಗೊಂಡಿರುವುದು ಪಾಕಿಸ್ತಾನ ಸೇನಾ ಪೈಲಟ್ಗಳ ಭದ್ರತೆ ಹಾಗೂ ಮಿಲಿಟರಿ ವಿಮಾನಗಳ ನಿರ್ವಹಣೆಯ ಕುರಿತು ಮತ್ತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಿಷೇಧ: ‘ಇದು ಪ್ರಜೆಗಳ ಧ್ವನಿ ಹತ್ತಿಕ್ಕುವ ಯತ್ನ’ ಎಂದು ದೀಪ್ಕೆ ಆಕ್ರೋಶ!
