ಮೈಸೂರು: ದಸರಾ ಹಬ್ಬದ (Mysuru Dasara) ಪ್ರಮುಖ ಆಕರ್ಷಣೆಯಾದ ಮೈಸೂರು ನಗರದ ವಿದ್ಯುತ್ ದೀಪಾಲಂಕಾರವನ್ನು ಪ್ರವಾಸಿಗರು ಅತ್ಯಂತ ಹತ್ತಿರದಿಂದ ಹಾಗೂ ಮುಕ್ತವಾಗಿ ಕಣ್ಣುತುಂಬಿಕೊಳ್ಳಲು ಕೆಎಸ್‌ಟಿಡಿಸಿಯ ‘ಅಂಬಾರಿ’ ಓಪನ್-ಟಾಪ್ ಡಬಲ್ ಡೆಕ್ಕರ್ ಬಸ್ ಅತ್ಯುತ್ತಮ ವೇದಿಕೆಯಾಗಿದೆ.
ಅಂಬಾರಿ ಬಸ್ಸುಗಳ ಸಂಚಾರ ಹಾಗೂ ದರ ವಿವರ:
- ಹಗಲಿನ ಸವಾರಿ: ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ಪ್ರತಿ ಗಂಟೆಗೊಮ್ಮೆ ಅಂಬಾರಿ ಬಸ್ ಸಂಚರಿಸಲಿದ್ದು, ಪ್ರತಿ ವ್ಯಕ್ತಿಗೆ 250 ರೂಪಾಯಿ ದರ ನಿಗದಿಪಡಿಸಲಾಗಿದೆ.
- ರಾತ್ರಿ ದೀಪಾಲಂಕಾರ ಸವಾರಿ: ನಗರದ ದೀಪಾಲಂಕಾರ ವೀಕ್ಷಿಸಲು ಸಂಜೆ 6:30, ರಾತ್ರಿ 8:00 ಹಾಗೂ ರಾತ್ರಿ 9:30 ಕ್ಕೆ ವಿಶೇಷ ಪ್ರಯಾಣಗಳು ಇರಲಿವೆ. ರಾತ್ರಿ ವೇಳೆಯ ಸವಾರಿಗೆ ಕೆಳಗಿನ ಡೆಕ್ (Lower Deck) ಆಸನಕ್ಕೆ 250 ರೂಪಾಯಿ ಹಾಗೂ ಮೇಲಿನ ಓಪನ್ ಡೆಕ್ (Upper Deck) ಆಸನಕ್ಕೆ 500 ರೂಪಾಯಿ ದರವನ್ನು ನಿಗದಿಮಾಡಲಾಗಿದೆ.
ಈ ಅಂಬಾರಿ ಬಸ್‌ಗಳು ಮೈಸೂರಿನ ವೈಭವೋಪೇತ ಅರಮನೆಯ ಸುತ್ತಮುತ್ತಲಿನ ಪ್ರದೇಶಗಳು, ಸಯ್ಯಾಜಿರಾವ್ ರಸ್ತೆ ಹಾಗೂ ನಗರದ ಪ್ರಮುಖ ವೃತ್ತಗಳು ಸೇರಿದಂತೆ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿರುವ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿವೆ.
7 ದಸರಾ ವಿಶೇಷ ಪ್ರವಾಸ ಪ್ಯಾಕೇಜ್‌ಗಳು
ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರು ಕೇವಲ ಮೈಸೂರು ನಗರದ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ, ರಾಜ್ಯದ ಇತರ ಪ್ರಸಿದ್ಧ ಪ್ರವಾಸಿ ತಾಣಗಳನ್ನೂ ವೀಕ್ಷಿಸಲು ಅನುಕೂಲವಾಗುವಂತೆ ಕೆಎಸ್‌ಟಿಡಿಸಿ ಒಟ್ಟು 7 ವಿಶಿಷ್ಟ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ.
ಒಂದು ಮತ್ತು ಎರಡು ದಿನಗಳ ಈ ಪ್ಯಾಕೇಜ್‌ಗಳಲ್ಲಿ ಮೈಸೂರು ಸ್ಥಳೀಯ ಪ್ರವಾಸ, ಊಟಿ (ಎರಡು ದಿನಗಳು), ಐತಿಹಾಸಿಕ ತಾಣಗಳಾದ ಬೇಲೂರು-ಹಳೇಬೀಡು-ಶ್ರವಣಬೆಳಗೊಳ, ಕೊಡಗಿನ ಪ್ರಕೃತಿ ರಮಣೀಯ ತಾಣಗಳು, ಶಿವನಸಮುದ್ರ ಜಲಪಾತ ಹಾಗೂ ಧಾರ್ಮಿಕ ಕ್ಷೇತ್ರವಾದ ನಂಜನಗೂಡು ಸೇರಿದಂತೆ ಹಲವು ಪ್ರಮುಖ ಸ್ಥಳಗಳು ಒಳಗೊಂಡಿವೆ.
ಸಚಿವರ ಆಶಯ ಹಾಗೂ ಬುಕ್ಕಿಂಗ್ ವಿವರಗಳು
ಈ ಕುರಿತು ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, “ದಸರಾಗೆ ಆಗಮಿಸುವ ಸಾರ್ವಜನಿಕರು ಕೇವಲ ಒಂದು ದಿನದ ಕಾರ್ಯಕ್ರಮ ನೋಡಿ ನಿರ್ಗಮಿಸಬಾರದು. ಮೈಸೂರಿನ ಸಾಂಸ್ಕೃತಿಕ ವೈಭವದ ಜೊತೆಗೆ ಸುತ್ತಮುತ್ತಲಿನ ನೈಸರ್ಗಿಕ ಹಾಗೂ ಐತಿಹಾಸಿಕ ತಾಣಗಳ ಸೌಂದರ್ಯವನ್ನು ಅನುಭವಿಸಬೇಕು. ಅವರಿಗೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸುಗಮ ಪ್ರಯಾಣದ ಸೇವೆ ನೀಡುವುದೇ ನಮ್ಮ ಪ್ರಮುಖ ಉದ್ದೇಶ” ಎಂದು ಹೇಳಿದರು.
ಪ್ರವಾಸ ಪ್ಯಾಕೇಜ್‌ಗಳು ಹಾಗೂ ಅಂಬಾರಿ ಬಸ್ ಬುಕ್ಕಿಂಗ್‌ಗಾಗಿ ಪ್ರವಾಸಿಗರು KSTDC ಸಹಾಯವಾಣಿ ಸಂಖ್ಯೆಗಳಾದ 080-43344334 / 35 / 36 / 42, 0821-2423652 ಅಥವಾ 8970656400 ಅನ್ನು ಸಂಪರ್ಕಿಸಬಹುದು. ಹೆಚ್ಚಿನ ವಿವರಗಳಿಗೆ www.kstdc.co ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ info@kstdc.co ಗೆ ಇ-ಮೇಲ್ ಮೂಲಕ ಸಂಪರ್ಕಿಸಬಹುದು.
ಇದನ್ನೂ ಓದಿ: ಮೈಸೂರು ದಸರಾಗೆ ಭಾರಿ ಭದ್ರತೆ: 6,000ಕ್ಕೂ ಹೆಚ್ಚು ಪೊಲೀಸರು, 35,000ಕ್ಕೂ ಅಧಿಕ ಸಿಸಿಟಿವಿ ಕಣ್ಗಾವಲು!
