TOP NEWS

Mysuru Dasara: ಮೈಸೂರು ದಸರಾಗೆ ಭಾರಿ ಭದ್ರತೆ: 6,000ಕ್ಕೂ ಹೆಚ್ಚು ಪೊಲೀಸರು, 35,000ಕ್ಕೂ ಅಧಿಕ ಸಿಸಿಟಿವಿ ಕಣ್ಗಾವಲು!

No Watching Jamboo Savari from Dilapidated Buildings or Trees Mysuru Dasara Police Issue Strict Ban

ಮೈಸೂರು: ನಾಡಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿಶ್ವವಿಖ್ಯಾತ ಸಾಂಸ್ಕೃತಿಕ ವೈಭವವನ್ನು ಕಣ್ಣುತುಂಬಿಕೊಳ್ಳಲು ಸಾರ್ವಜನಿಕರು ಹಾಗೂ ಪ್ರವಾಸಿಗರು ಕಾತುರದಿಂದ ಕಾಯುತ್ತಿದ್ದಾರೆ. ಈ ಬಾರಿಯ ದಸರಾ ಆಚರಣೆಯನ್ನು ಅತ್ಯಂತ ಸುರಕ್ಷಿತವಾಗಿ ಮತ್ತು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಹಾಗೂ ನಗರ ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದೆ. ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

6,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ

ದಸರಾ ವೀಕ್ಷಣೆಗೆ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಕಮಿಷನರ್ ಸೀಮಾ ಲಾಟ್ಕರ್ ಅವರು ನೀಡಿರುವ ಮಾಹಿತಿಯಂತೆ, ಒಟ್ಟು 6,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಇದರಲ್ಲಿ 5,161 ಸಿವಿಲ್ ಮತ್ತು ಸಂಚಾರ ವಿಭಾಗದ ಪೊಲೀಸರು, 33 ಕೆಎಸ್‌ಆರ್‌ಪಿ (KSRP) ತುಕಡಿಗಳು, 25 ಡಿಎಆರ್ (DAR) ತುಕಡಿಗಳು ಹಾಗೂ 1,500 ಗೃಹರಕ್ಷಕ ಸಿಬ್ಬಂದಿ (ಹೋಮ್ ಗಾರ್ಡ್ಸ್) ಕರ್ತವ್ಯ ನಿರ್ವಹಿಸಲಿದ್ದಾರೆ.

ಬೃಹತ್ ಸಿಸಿಟಿವಿ ಕಣ್ಗಾವಲು ಮತ್ತು ಸಹಾಯ ಕೇಂದ್ರಗಳು

ಸಾರ್ವಜನಿಕರ ಭದ್ರತೆಯ ದೃಷ್ಟಿಯಿಂದ ನಗರದಾದ್ಯಂತ ಹಾಗೂ ಪ್ರಮುಖ ಸ್ಥಳಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. 11 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಒಟ್ಟು 35,794 ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪ್ರತಿ ಚಟುವಟಿಕೆಯ ಮೇಲೆ ನಿರಂತರ ನಿಗಾ ಇಡಲಾಗುವುದು. ಪ್ರವಾಸಿಗರು ಮತ್ತು ಸ್ಥಳೀಯರ ನೆರವಿಗಾಗಿ 18 ಪೊಲೀಸ್ ನೆರವು ಕೇಂದ್ರಗಳನ್ನು (ಸಹಾಯ ಕೇಂದ್ರ) ತೆರೆಯಲಾಗಿದೆ. ಯಾವುದೇ ತುರ್ತು ಸಂದರ್ಭ ಎದುರಾದಲ್ಲಿ ಸಾರ್ವಜನಿಕರು ತಕ್ಷಣವೇ ‘112’ ತುರ್ತು ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ಅಲ್ಲದೆ, ಸಾರಿಗೆ ದಟ್ಟಣೆ ನಿಯಂತ್ರಿಸಲು ಅರಮನೆ ಸುತ್ತಮುತ್ತ ಹಾಗೂ ಮುಖ್ಯ ರಸ್ತೆಗಳಲ್ಲಿ ಏಕಮುಖ (One-Way) ಸಂಚಾರ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಅಪಾಯಕಾರಿ ಕಟ್ಟಡ ಹಾಗೂ ಮರಗಳ ಏರಿ ಜಂಬೂಸವಾರಿ ವೀಕ್ಷಣೆಗೆ ನಿಷೇಧ!

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯನ್ನು ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಜನಸ್ತೋಮ ನೆರೆಯುತ್ತದೆ. ಆದರೆ, ಈ ಬಾರಿ ಸುರಕ್ಷತಾ ದೃಷ್ಟಿಯಿಂದ ಶಿಥಿಲಗೊಂಡಿರುವ ಹಳೆಯ ಕಟ್ಟಡಗಳು ಹಾಗೂ ಮರಗಳ ಮೇಲೆ ಕುಳಿತು ಜಂಬೂಸವಾರಿ ನೋಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈಗಾಗಲೇ ನಗರದಲ್ಲಿ 92 ಅಪಾಯಕಾರಿ ಅಥವಾ ಹಳೆಯ ಕಟ್ಟಡಗಳನ್ನು ಗುರುತಿಸಿ ಎಚ್ಚರಿಕೆ ನೀಡಲಾಗಿದೆ.

ಸುಳ್ಳು ಸುದ್ದಿ ಹರಡುವವರ ವಿರುದ್ಧ ಖಡಕ್ ಎಚ್ಚರಿಕೆ

ಹಬ್ಬದ ವಾತಾವರಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹಬ್ಬಿಸಿ ಗೊಂದಲ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ: ‘ಹಾಯ್-ಹಲೋ’ ಹೇಳಿಕೆ ಉಲ್ಲೇಖಿಸಿ ಭಾರಿ ಟಾಂಗ್

Leave a Reply

Your email address will not be published. Required fields are marked *