ನವದೆಹಲಿ: ನಗರದಲ್ಲಿ ನೊಣ ಕೊಲ್ಲಲು ಸುತ್ತಿಗೆ ಬಳಸುವ ಅಗತ್ಯವಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ (Supreme Court), ಶನಿವಾರ ಕಾಕ್ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ವಿಧಿಸಲಾಗಿರುವ ಅತಿಯಾದ ನಿರ್ಬಂಧಗಳ ಕುರಿತು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದೆ. ಸಾರ್ವಜನಿಕರ ದಿನನಿತ್ಯದ ಸಂಚಾರಕ್ಕೆ ಭಾರಿ ಅಡಚಣೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ನಗರದ ವಿವಿಧ ಭಾಗಗಳಿಂದ ಪ್ರತಿದಿನ ಲಕ್ಷಾಂತರ ಜನರು ಉದ್ಯೋಗ ಮತ್ತು ಇತರೆ ಕೆಲಸಗಳಿಗಾಗಿ ಪ್ರಯಾಣಿಸುವುದರಿಂದ ಪ್ರತಿಯೊಂದನ್ನೂ ಸಂಪೂರ್ಣವಾಗಿ ಬಂದ್ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರಕ್ಕೆ ಸ್ಪಷ್ಟವಾಗಿ ಎಚ್ಚರಿಸಿದೆ.
ಸಾರ್ವಜನಿಕರು ಎಲ್ಲೂ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ
ಜನಸಾಮಾನ್ಯರ ಹಾಗೂ ವಯೋವೃದ್ಧರ ಪ್ರಯಾಣದ ಹಕ್ಕನ್ನು ಎತ್ತಿಹಿಡಿದ ನ್ಯಾಯಾಲಯ, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದ ತಕ್ಷಣವೇ ಮುಚ್ಚಲಾಗಿರುವ ಮೆಟ್ರೋ ನಿಲ್ದಾಣಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿತು. ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ದೆಹಲಿಯ ಮೆಟ್ರೋ ನಿಲ್ದಾಣಗಳ ಬಂದ್ ಹಾಗೂ ರೈಲು ಸೇವೆಗಳ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶವನ್ನು ನೀಡಿದೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹಾಗೂ ಸಂಸದ ಕಪಿಲ್ ಸಿಬಲ್, ದೆಹಲಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಪರಿಣಾಮವಾಗಿ ಸಾರ್ವಜನಿಕರು ಎಲ್ಲೂ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಶಾಂತಿಯುತ ಪ್ರತಿಭಟನೆಯಾಗಿದ್ದು, ಇಷ್ಟೊಂದು ಕಠಿಣ ಕ್ರಮಗಳ ಅಗತ್ಯವಿರಲಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಈ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪ್ರಮುಖವಾಗಿ ಮೆಟ್ರೋ ನಿಲ್ದಾಣಗಳ ಪ್ರವೇಶದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು. ನಾವು ಯಾವುದೇ ನಿರ್ದಿಷ್ಟ ಪ್ರತಿಭಟನಾಕಾರರ ಬಗ್ಗೆ ಮಾತನಾಡುತ್ತಿಲ್ಲ, ಬದಲಿಗೆ ಗುರ್ಗಾಂವ್, ಗ್ರೇಟರ್ ನೋಯ್ಡಾ, ಪೂರ್ವ ದೆಹಲಿ ಮತ್ತು ದಕ್ಷಿಣ ದೆಹಲಿಯಿಂದ ತಮ್ಮ ಜೀವನೋಪಾಯಕ್ಕಾಗಿ ಪ್ರತಿದಿನ ದೆಹಲಿಗೆ ಬರುವ ಲಕ್ಷಾಂತರ ಸಾಮಾನ್ಯ ಪ್ರಯಾಣಿಕರ ಹಿತದೃಷ್ಟಿಯಿಂದ ಮಾತನಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಕಾನೂನು ಜಾರಿ ಸಂಸ್ಥೆಗಳಿಗೆ ಸಂಪೂರ್ಣ ಹಕ್ಕಿದೆ ಎಂಬುದನ್ನು ಒಪ್ಪಿಕೊಂಡ ಉನ್ನತ ನ್ಯಾಯಾಲಯ, ಅದೇ ಸಮಯದಲ್ಲಿ ಸಾರ್ವಜನಿಕರ ಅನುಕೂಲಕ್ಕೂ ಆದ್ಯತೆ ನೀಡಬೇಕಿದೆ ಎಂದು ಗೆರೆ ಎಳೆಯಿತು. ಅನಿರ್ದಿಷ್ಟ ಸಂಚಾರವನ್ನು ತಡೆಯಲು ಕ್ರಮ ಕೈಗೊಳ್ಳುವುದರಲ್ಲಿ ತಪ್ಪಿಲ್ಲ, ಆದರೆ ಇಡೀ ಸಾರಿಗೆ ವ್ಯವಸ್ಥೆಯನ್ನೇ ಸ್ತಬ್ಧಗೊಳಿಸಿ ಜನರನ್ನು ಸಾರಿಗೆ ಸೌಲಭ್ಯವಿಲ್ಲದೆ ಕಷ್ಟಕ್ಕೆ ತಳ್ಳುವುದು ಸರಿಯಾದ ಕ್ರಮವಲ್ಲ. ದೇಶದ ಪ್ರತಿಯೊಬ್ಬ ನಾಗರಿಕನೂ ಸ್ವಂತ ಕಾರು ಅಥವಾ ಖಾಸಗಿ ವಾಹನಗಳನ್ನು ಹೊಂದಿರಲು ಸಾಧ್ಯವಿಲ್ಲ. ಶೇಕಡಾ 80 ಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸಾರಿಗೆಯನ್ನೇ ನೆಚ್ಚಿಕೊಂಡಿದ್ದಾರೆ ಎಂದು ಪೀಠ ಹೇಳಿದೆ.
ನ್ಯಾಯಾಲಯದ ಈ ಸರಣಿ ಪ್ರಶ್ನೆಗಳಿಗೆ ಉತ್ತರಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಳೆದ ಜುಲೈ ತಿಂಗಳಿನಲ್ಲಿ ಸಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಭಾರಿ ಹಿಂಸಾಚಾರ ನಡೆದಿತ್ತು ಎಂಬುದನ್ನು ಉಲ್ಲೇಖಿಸಿದರು. ಆದಾಗ್ಯೂ, ರೈಲ್ವೆ ಮತ್ತು ಮೆಟ್ರೋ ಸೇವೆಗಳ ಬಂದ್ ಕುರಿತಂತೆ ಸರ್ಕಾರದ ಜೊತೆ ತಕ್ಷಣವೇ ಸಮಾಲೋಚನೆ ನಡೆಸಿ, ಪರಿಸ್ಥಿತಿಗೆ ತಕ್ಕಂತೆ ಸಮತೋಲಿತ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಸುಪ್ರೀಂಕೋರ್ಟ್ ಹೇಳಿದ್ದೇನು?
ಇಷ್ಟೇ ಅಲ್ಲದೆ, ನಗರದಲ್ಲಿ ಮುಚ್ಚಲಾಗಿರುವ ಪ್ರಮುಖ ರಸ್ತೆಗಳ ಬಂದ್ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಮೌಖಿಕವಾಗಿ ಸೂಚಿಸಿದೆ. ಯಾವ ಪ್ರದೇಶಗಳಲ್ಲಿ ನಿರ್ಬಂಧಗಳು ಅತ್ಯಗತ್ಯ ಮತ್ತು ಎಲ್ಲೆಲ್ಲಿ ಸಾರ್ವಜನಿಕ ಸಂಚಾರಕ್ಕೆ ಅವಕಾಶ ನೀಡಬಹುದು ಎಂಬುದರ ಕುರಿತು ತಕ್ಷಣವೇ ಪರಿಶೀಲನೆ ನಡೆಸಬೇಕು. ಮೆಟ್ರೋ ರೈಲುಗಳ ಚಲನವಲನದ ಆವರ್ತನವನ್ನು (ಫ್ರೀಕ್ವೆನ್ಸಿ) ಕಡಿತಗೊಳಿಸಬಹುದೇ ವಿನಃ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಅಕ್ಟೋಬರ್ 10 ರಂದು ಯೋಜಿಸಲಾದ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಿಗೆ ಜನಸಂದಣಿ ಹರಿದುಬರುವುದನ್ನು ತಡೆಯಲು ರಾಜಧಾನಿಯ ಸುಮಾರು 57 ಮೆಟ್ರೋ ನಿಲ್ದಾಣಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಅಧಿಕೃತ ಪ್ರಕಟಣೆಯ ಪ್ರಕಾರ, ಅಕ್ಟೋಬರ್ 9 ರ ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ಈ ಪ್ರಮುಖ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿತ್ತು. ಇದರೊಂದಿಗೆ ದೆಹಲಿ, ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಆಗಮಿಸಬೇಕಿದ್ದ ಹಲವು ಪ್ರಮುಖ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಪ್ರಸ್ತುತ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ಕೇಂದ್ರ ಸರ್ಕಾರವು ತನ್ನ ನಿರ್ಬಂಧಗಳನ್ನು ಸಡಿಲಗೊಳಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಭಾರತೀಯ ಮೂಲದ ನಾವಿ ಪಿಳ್ಳೈಗೆ ಒಲಿದ ನೊಬೆಲ್ ಪ್ರಶಸ್ತಿ
