TOP NEWS

Aishwarya Rai: ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಐಶ್ವರ್ಯಾ ರೈ ರಾಯಲ್ ಜಾದೂ: ಕಪ್ಪು ವೆಲ್ವೆಟ್ ಗೌನ್‌ನಲ್ಲಿ ಮಿಂಚಿದ ಬಾಲಿವುಡ್ ಕ್ವೀನ್!

Aishwarya Rai Bachchan Takes Over Paris Fashion Week 2026 Runway in Dramatic Black Couture and Tiara

ಮುಂಬೈ: ಪ್ಯಾರಿಸ್‌ನ ಪ್ರತಿಷ್ಠಿತ ‘ಲೊರಿಯಲ್ ಪ್ಯಾರಿಸ್’ ಫ್ಯಾಷನ್ ಶೋ ರ‍್ಯಾಂಪ್ ಮೇಲೆ ಬಾಲಿವುಡ್ ಸುಂದರಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ಬಚ್ಚನ್ ತಮ್ಮ ರಾಯಲ್ ಹಾಗೂ ಮನಮೋಹಕ ಲುಕ್‌ನಿಂದ ವೀಕ್ಷಕರ ಕಣ್ಣು ಕೋರೈಸಿದ್ದಾರೆ. ಐಫೆಲ್ ಟವರ್ ಹಾಗೂ ಎಕೋಲ್ ಮಿಲಿಟೇರ್ ಹಿನ್ನೆಲೆಯಲ್ಲಿ ಪ್ಲೇಸ್ ಜಾಫ್ರೆನಲ್ಲಿ ನಡೆದ ಈ ಸಾಂಸ್ಕೃತಿಕ ಫ್ಯಾಷನ್ ಸಂಭ್ರಮದಲ್ಲಿ ಐಶ್ವರ್ಯಾ ರೈ ಕಾಲಿಡುತ್ತಿದ್ದಂತೆ ಇಡೀ ರ‍್ಯಾಂಪ್ ಪ್ರೇಕ್ಷಕರ ಕರತಾಡನದಿಂದ ಮೊಳಗಿತು. ಶಿರಸಿನಿಂದ ಪಾದದವರೆಗೆ ಸಂಪೂರ್ಣ ಕಪ್ಪು ವರ್ಣದ (All-Black) ವಸ್ತ್ರವನ್ನು ಧರಿಸಿ ರ‍್ಯಾಂಪ್ ವಾಕ್ ಮಾಡಿದ ಐಶ್ವರ್ಯಾ ಅವರ ಸೌಂದರ್ಯ ಮತ್ತು ಗಾಂಭೀರ್ಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

ಕೌಚರ್‌ ಗೌನ್‌ ಧರಿಸಿ ಮಿಂಚಿದ ವಿಶ್ವ ಸುಂದರಿ

ಲೊರಿಯಲ್ ಪ್ಯಾರಿಸ್ ‘ಲೀ ಡೆಫಿಲೆ 2026’ ಪ್ರದರ್ಶನಕ್ಕಾಗಿ ಐಶ್ವರ್ಯಾ ಅವರು ಪ್ರಸಿದ್ಧ ಡಿಸೈನರ್ ಯಾರಾ ಶೂಮೇಕರ್ ಅವರ ‘ಫಾಲ್/ವಿಂಟರ್ 2026-27’ ಕಲೆಕ್ಷನ್‌ನ ಅತ್ಯಾಕರ್ಷಕ ಕಸ್ಟಮ್ ಕೌಚರ್ ಗೌನ್ ಧರಿಸಿದ್ದರು. ಸೆಲೆಬ್ರಿಟಿ ಸ್ಟೈಲಿಸ್ಟ್ ಮೋಹಿತ್ ರೈ ಅವರ ವಿನ್ಯಾಸದ ಈ ಉಡುಪು, ಅತ್ಯಂತ ಸೂಕ್ಷ್ಮವಾಗಿ ಕೆತ್ತಲಾದ ಕಪ್ಪು ವೆಲ್ವೆಟ್ ಗೌನ್ ಹೊಂದಿದ್ದು, ಅವರ ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡಿತ್ತು. ಉಡುಪಿನ ಆಕರ್ಷಕ ವಿನ್ಯಾಸ ಹಾಗೂ ‘3D ಫ್ರಿಂಜ್’ ಎಂಬ್ರಾಯ್ಡರಿ ಕೆಲಸಗಳು ಗೌನ್‌ನ ಮೆರುಗನ್ನು ಹೆಚ್ಚಿಸಿದ್ದವು. ಉಡುಪಿನ ವಿನ್ಯಾಸವೇ ಎದ್ದು ಕಾಣುತ್ತಿದ್ದರಿಂದ ಅವರು ಕುತ್ತಿಗೆಗೆ ಯಾವುದೇ ಭಾರೀ ಆಭರಣಗಳನ್ನು ಧರಿಸದೆ ಸರಳತೆಯಲ್ಲೇ ಗಾಂಭೀರ್ಯ ಮೆರೆದಿದ್ದರು.

ಈ ಶೋನಲ್ಲಿ ಎಲ್ಲರ ಗಮನ ಸೆಳೆದ ಮತ್ತೊಂದು ಪ್ರಮುಖ ಅಂಶವೆಂದರೆ ಅವರ ಬೆನ್ನಿನಿಂದ ನೆಲ ಮುಟ್ಟುವಂತೆ ಹರಿದುಬಂದ ಕಪ್ಪು ವೆಲ್ವೆಟ್‌ನ ಸುಂದರ ಕೆೇಪ್ (Cape). ಈ ಕೇಪ್‌ನ ಅಂಚುಗಳಲ್ಲಿ ರತ್ನಗಳು ಮತ್ತು ಮುತ್ತುಗಳ ಜೋಡಣೆ ಇದ್ದು, ನಕ್ಷತ್ರಪುಂಜದ ಮಾದರಿಯ ಕ್ರಿಸ್ಟಲ್ ಎಫೆಕ್ಟ್ ನೀಡಲಾಗಿತ್ತು. ರ‍್ಯಾಂಪ್ ಮೇಲೆ ಹೆಜ್ಜೆ ಹಾಕುವಾಗ ಬೆಳಕಿನ ಪ್ರತಿಫಲನಕ್ಕೆ ಈ ಕ್ರಿಸ್ಟಲ್‌ಗಳು ನಕ್ಷತ್ರಗಳಂತೆ ಮಿನುಗುತ್ತಿದ್ದವು. ತಲೆಯ ಮೇಲಿದ್ದ ಡೈಮಂಡ್ ಕಿರೀಟ, ಕೈಗಳಲ್ಲಿದ್ದ ವಜ್ರದ ಉಂಗುರಗಳು ಮತ್ತು ಕಪ್ಪು ಹೀಲ್ಸ್ ಅವರ ಈ ಸಂಪೂರ್ಣ ರಾಯಲ್ ಲುಕ್‌ಗೆ ಕೊನೆಯ ಸ್ಪರ್ಶ ನೀಡಿದ್ದವು.

ಅಭಿಮಾನಿಗಳ ಮನಗೆದ್ದ ನಟಿಯ ಲುಕ್

ಕಪ್ಪು ಉಡುಪಿಗೆ ಅತ್ಯಂತ ಭಿನ್ನವಾಗಿ ಎದ್ದು ಕಾಣುತ್ತಿದ್ದುದ್ದು ಐಶ್ವರ್ಯಾ ಅವರ ಹೊಸ ಬರ್ಗಂಡಿ-ರೆಡ್ ಹೇರ್‌ಸ್ಟೈಲ್. ಕೆಂಪು ಮತ್ತು ಕಂದು ಬಣ್ಣಗಳ ಸಮ್ಮಿಶ್ರಣದ ಈ ಡಾರ್ಕ್ ಬರ್ಗಂಡಿ ಶೇಡ್‌ನ ಕೂದಲನ್ನು ಸೈಡ್-ಪಾರ್ಟ್ ಮಾಡಿ, ಸುರುಳಿ ಅಲೆಗಳಂತೆ ಬಿಡಲಾಗಿತ್ತು. ಕಪ್ಪು ಗೌನ್‌ಗೆ ಈ ರೆಡ್ ಹೇರ್ ಕಲರ್ ಅತ್ಯುತ್ತಮ ಕಾಂಟ್ರಾಸ್ಟ್ ನೀಡಿ ಅವರ ಸೌಂದರ್ಯವನ್ನು ರೆಕ್ಕೆ ಕಟ್ಟಿ ಹಾರುವಂತೆ ಮಾಡಿತ್ತು. ಇದರ ಜೊತೆಗೆ ವಿಂಗ್ಡ್ ಐಲೈನರ್, ಕಣ್ಣುಸೆಳೆಯುವ ರೆಡ್ ಲಿಪ್‌ಸ್ಟಿಕ್, ಸಾಫ್ಟ್ ಕಾಂಟೂರಿಂಗ್ ಒಳಗೊಂಡ ಬೋಲ್ಡ್ ಮೇಕಪ್ ಅವರ ಹೊಸ ಅವತಾರವನ್ನು ಪೂರ್ಣಗೊಳಿಸಿತ್ತು.

“ಎಕ್ಸ್‌ಪ್ರೆಸ್ ಯುವರ್ ವರ್ತ್” (ನಿಮ್ಮ ಮೌಲ್ಯವನ್ನು ವ್ಯಕ್ತಪಡಿಸಿ) ಎಂಬ ಸಂದೇಶದೊಂದಿಗೆ ನಡೆದ ಲೊರಿಯಲ್ ಪ್ಯಾರಿಸ್‌ನ ಈ ಬೃಹತ್ ಫ್ಯಾಷನ್ ಶೋನಲ್ಲಿ ಜಾಗತಿಕ ಮಟ್ಟದ ಪ್ರಸಿದ್ಧ ತಾರೆಯರಾದ ಸಿಮೋನ್ ಆಶ್ಲಿ, ಕೆಂಡಾಲ್ ಜೆನ್ನರ್, ಇವಾ ಲಾಂಗೋರಿಯಾ, ವಿಯೋಲಾ ಡೇವಿಸ್ ಹಾಗೂ ಸೆಲಿನ್ ಡಿಯೋನ್ ಅವರಂತಹ ಪ್ರಸಿದ್ಧರ ಜೊತೆಗೆ ಐಶ್ವರ್ಯಾ ರೈ ಬಚ್ಚನ್ ಭಾರತವನ್ನು ಹೆಮ್ಮೆಯಿಂದ ಪ್ರತಿನಿಧಿಸಿ ಫ್ಯಾಷನ್ ಜಗತ್ತಿನಲ್ಲಿ ಮತ್ತೊಮ್ಮೆ ಹೊಸ ಸಂಚಲನ ಮೂಡಿಸಿದರು.

ಇದನ್ನೂ ಓದಿ:  ನಟ ಸೂರ್ಯ ಜೊತೆ ಸಿನಿಮಾ ಯಾವಾಗ? ರಾಜಮೌಳಿ ನೀಡಿದ ಸಸ್ಪೆನ್ಸ್ ಉತ್ತರ!

Leave a Reply

Your email address will not be published. Required fields are marked *