TOP NEWS

SS Rajamouli: ನಟ ಸೂರ್ಯ ಜೊತೆ ಸಿನಿಮಾ ಯಾವಾಗ? ರಾಜಮೌಳಿ ನೀಡಿದ ಸಸ್ಪೆನ್ಸ್ ಉತ್ತರ!

It Will Be Special SS Rajamouli on Potential Project with Suriya

ಹೈದರಾಬಾದ್:‌ ಭಾರತೀಯ ಚಿತ್ರರಂಗದ ದೈತ್ಯ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಹಾಗೂ ತಮಿಳಿನ ಸ್ಟಾರ್ ನಟ ಸೂರ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ. ಖ್ಯಾತ ನಿರ್ದೇಶಕ ಶಶಾಂಕ್ ಯೇಲೇಟಿ ನಿರ್ದೇಶನದ, ಮಲಯಾಳಂ ಮೂಲದ ನಟ ಫಹಾದ್ ಫಾಸಿಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾದ ಪ್ರಿ-ರಿಲೀಸ್ ಸಮಾರಂಭಕ್ಕೆ ರಾಜಮೌಳಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇದೇ ಅದ್ಧೂರಿ ಕಾರ್ಯಕ್ರಮದಲ್ಲಿ ನಟ ಸೂರ್ಯ ಸಹ ಭಾಗಿಯಾಗಿದ್ದರು. ಈ ವಿಶೇಷ ವೇದಿಕೆಯಲ್ಲಿ ರಾಜಮೌಳಿ ಅವರು ಸೂರ್ಯ ಅವರ ಮುಂದಿನ ಸಿನಿಮಾಗಳ ಬಗ್ಗೆ ಆಡಿದ ಮಾತುಗಳು ಈಗ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಜಾಣ್ಮೆಯಿಂದ ಉತ್ತರ ನೀಡಿದ ರಾಜಮೌಳಿ

ಕಾರ್ಯಕ್ರಮದ ವೇಳೆ ಮಾಧ್ಯಮದವರು ಮತ್ತು ಅಭಿಮಾನಿಗಳು ರಾಜಮೌಳಿ ಅವರ ಬಳಿ “ನೀವು ಮತ್ತು ನಟ ಸೂರ್ಯ ಜೋಡಿಯಾಗಿ ಯಾವಾಗ ಸಿನಿಮಾ ಮಾಡುತ್ತೀರಿ?” ಎಂಬ ಬಹುನಿರೀಕ್ಷಿತ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಅತ್ಯಂತ ಚಾಣಾಕ್ಷವಾಗಿ ಉತ್ತರಿಸಿದ ರಾಜಮೌಳಿ, “ಈ ಪ್ರಶ್ನೆ ಖಂಡಿತವಾಗಿಯೂ ಎದುರಾಗುತ್ತದೆ ಎಂದು ಊಹಿಸಿಯೇ ನಾನು ಉತ್ತರ ಸಿದ್ಧಪಡಿಸಿಕೊಂಡು ಬಂದಿದ್ದೇನೆ. ನಾವು ಇಲ್ಲಿಗೆ ಬಂದಿರುವುದು ಶಶಾಂಕ್ ಅವರ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಚಿತ್ರದ ಪ್ರಚಾರಕ್ಕಾಗಿ. ನಾನು ಈಗ ಸೂರ್ಯ ಮತ್ತು ನನ್ನ ಕಾಂಬಿನೇಷನ್ ಸಿನಿಮಾ ಬಗ್ಗೆ ಮಾತನಾಡಿದರೆ, ಅದೇ ನಾಳೆಯ ಮುಖ್ಯಾಂಶ (Headline) ಆಗಿಬಿಡುತ್ತದೆ. ಅದರಿಂದ ಈ ಚಿತ್ರದ ಪ್ರಚಾರ ಹಿನ್ನೆಲೆಗೆ ತಳ್ಳಲ್ಪಡುತ್ತದೆ. ಅದು ಸರಿಯಲ್ಲ” ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ, “ನಾವು ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿದಾಗ ಅದು ಖಂಡಿತವಾಗಿಯೂ ಅತ್ಯಂತ ವಿಶೇಷವಾದ ಚಿತ್ರವಾಗಲಿದೆ” ಎಂಬ ಮಾತುಗಳನ್ನು ಸೇರಿಸಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದರು.

ಸಾಲು ಸಾಲು ಹಿಟ್‌ ಸಿನಿಮಾ ಕೊಟ್ಟ ಸೂರ್ಯ

ಇದೇ ವೇಳೆ, ನಟ ಸೂರ್ಯ ಅವರ ಇತ್ತೀಚಿನ ಸಿನಿಮಾಗಳಾದ ‘ಕರುಪ್ಪು’ ಹಾಗೂ ‘ವಿಶ್ವನಾಥ್ ಅಂಡ್ ಸನ್ಸ್’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸರಣಿ ಯಶಸ್ಸು ಸಾಧಿಸಿದ್ದಕ್ಕೆ ರಾಜಮೌಳಿ ಮುಕ್ತಕಂಠದಿಂದ ಅಭಿನಂದಿಸಿದರು. ಈ ಸಫಲತೆಯನ್ನು “ಡಬಲ್ ಧಮಾಕಾ” ಎಂದು ಬಣ್ಣಿಸಿದ ಅವರು, ಸೂರ್ಯ ಅವರ ಅಭಿನಯ ಹಾಗೂ ಸಿನಿಮಾಗಳ ಆಯ್ಕೆಯನ್ನು ಶ್ಲಾಘಿಸಿದರು.

ಅಷ್ಟೇ ಅಲ್ಲದೆ, ‘ಆವೇಶಂ’ ಚಿತ್ರದ ಮೂಲಕ ಭಾರಿ ಸದ್ದು ಮಾಡಿದ್ದ ಜಿತು ಮಾಧವನ್ ನಿರ್ದೇಶನದಲ್ಲಿ ಸೂರ್ಯ ನಟಿಸುತ್ತಿರುವ ‘ಸೀನ್’ ಸಿನಿಮಾಗೆ ರಾಜಮೌಳಿ ಶುಭ ಹಾರೈಸಿದರು. ನಾಸಿರ್ ಹಾಗೂ ನಜ್ರಿಯಾ ಅಭಿನಯಿಸುತ್ತಿರುವ ಈ ಚಿತ್ರದ ಪೋಸ್ಟರ್ ಮತ್ತು ಪ್ರಚಾರ ಸಾಮಗ್ರಿಗಳು ಅತ್ಯುತ್ತಮವಾಗಿ ಮೂಡಿಬಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಸಿಂಗಂ’ ಸರಣಿಯ ಮೂಲಕ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಾಸ್ ಹವಾ ಸೃಷ್ಟಿಸಿದ್ದ ಸೂರ್ಯ, ಈ ‘ಸೀನ್’ ಸಿನಿಮಾದಲ್ಲಿ ಅತ್ಯಂತ ಕೂಲ್ ಹಾಗೂ ಹೊಸ ಕಾಲದ ಸ್ಟೈಲಿಶ್ ಪೊಲೀಸ್ ಅಧಿಕಾರಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಜಿತು ಮಾಧವನ್ ಅವರ ವಿಶಿಷ್ಟ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಮಾಸ್ ಮಸಾಲಾ ಚಿತ್ರದ ನವೆಂಬರ್ ಬಿಡುಗಡೆಗಾಗಿ ತಾವೂ ಕಾಯುತ್ತಿರುವುದಾಗಿ ರಾಜಮೌಳಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಶ್ರೀಲೀಲಾ ಹೊಸ ಇತಿಹಾಸ: ದಳಪತಿ ವಿಜಯ್, ಸಲ್ಮಾನ್ ಖಾನ್ ದಾಖಲೆ ಉಡೀಸ್!

Leave a Reply

Your email address will not be published. Required fields are marked *