ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ಜಮೀನಿನ ವಿವಾದ ಹಾಗೂ ಪಡಿತರ ತಂದ ವಿಚಾರವಾಗಿ ನಡೆದ ಗಲಾಟೆ (Crime) ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಜಮೀನು ಹಂಚಿಕೆ ಹಾಗೂ ನ್ಯಾಯಬೆಲೆ ಅಂಗಡಿಯಿಂದ ಪಡಿತರ ತರುವ ವಿಚಾರವಾಗಿ ಸೆಪ್ಟೆಂಬರ್ 24 ರಂದು ರಘು (44) ಮತ್ತು ಆತನ ಅಣ್ಣ ದೇವರಾಜ್ (46) ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು.
ಇಷ್ಟಕ್ಕೂ ಆಗಿದ್ದೇನು?
ಮಾತು ಬೆಳೆದು ಜಗಳ ವಿಕೋಪಕ್ಕೆ ತಲುಪಿದಾಗ, ಆಕ್ರೋಶಗೊಂಡ ಅಣ್ಣ ದೇವರಾಜ್ ತಮ್ಮ ರಘುಗೆ ಚಾಕುವಿನಿಂದ ಇರಿದಿದ್ದನು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಘು ಅವರನ್ನು ತಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಘು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹೆಂಡತಿಯ ಹಲ್ಲೆಯಿಂದ ಮನನೊಂದು ಪತಿ ನೇಣಿಗೆ ಶರಣು: ಕೊಲೆ ಆರೋಪ ಹೊರಿಸಿದ ಪತಿಯ ಕುಟುಂಬ!
ಬೆಂಗಳೂರಿನ ಲಗ್ಗೆರೆಯಲ್ಲಿ ಪತ್ನಿಯೊಂದಿಗಿನ ಜಗಳ ಹಾಗೂ ಆಕೆಯ ಹಲ್ಲೆಯಿಂದ ನೊಂದ ಪತಿಯೊಬ್ಬ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಂಭವಿಸಿದೆ. ಹಾಸನ ಮೂಲದ ನವೀನ್ (46) ಮೃತಪಟ್ಟ ದುರ್ದೈವಿಯಾಗಿದ್ದು, ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಆದರೆ, ಮೃತನ ದೇಹದ ಮೇಲೆ ಗಾಯದ ಗುರುತುಗಳಿರುವುದನ್ನು ಕಂಡ ಅವರ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಕೃತ್ಯವೆಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದು, ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೂಲತಃ ಹಾಸನದವರಾದ ನವೀನ್ ಹಾಗೂ ಕವಿತಾ ದಂಪತಿಯ ವಿವಾಹವಾಗಿ ಸುಮಾರು 15 ವರ್ಷಗಳು ಕಳೆದಿವೆ. ಬದುಕಿನ ನಿರ್ವಹಣೆಗಾಗಿ ಕಳೆದ 7-8 ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಈ ದಂಪತಿ ಲಗ್ಗೆರೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರಂಭದಲ್ಲಿ ಇವರ ಸಂಸಾರ ಸುಸೂತ್ರವಾಗಿಯೇ ಸಾಗುತ್ತಿತ್ತು. ಆದರೆ, ಮಗುವಿನ ಜನನದ ನಂತರ ದಂಪತಿಯ ನಡುವೆ ಸಣ್ಣಪುಟ್ಟ ವಿಚಾರಗಳಿಗೂ ಕಲಹ ಆರಂಭವಾಗುತ್ತಿತ್ತು. ನವೀನ್ ದಿನನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಹಾಗೂ ತಮ್ಮ ಮೇಲೆ ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿ ನಿಂದಿಸುತ್ತಿದ್ದ ಎಂದು ಪತ್ನಿ ಕವಿತಾ ಹೇಳಿದ್ದಾರೆ.
ಈ ನಡುವೆ ಸೆಪ್ಟೆಂಬರ್ 26ರ ರಾತ್ರಿ ಎಂದಿನಂತೆ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ನವೀನ್, ಮತ್ತೆ ಪತ್ನಿಯೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ನವೀನ್ ಪತ್ನಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಕವಿತಾ ಸಹ ಪತಿಯ ವಿರುದ್ಧ ತಿರುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಈ ಸಂಘರ್ಷದಲ್ಲಿ ನವೀನ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ಬಳಿಕ ಕೋಪದಲ್ಲಿ ಕವಿತಾ ಮನೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಹೊರಟುಹೋಗಿದ್ದಾರೆ.
ಪತ್ನಿ ತನ್ನ ಮೇಲೆ ಹಲ್ಲೆ ನಡೆಸಿದ್ದರಿಂದ ತೀವ್ರ ಮನನೊಂದ ನವೀನ್, ತಕ್ಷಣವೇ ಹಾಸನದಲ್ಲಿದ್ದ ತಮ್ಮ ತಾಯಿಗೆ ಕರೆ ಮಾಡಿ ಹೆಂಡತಿ ಹೊಡೆದಿರುವ ವಿಷಯವನ್ನು ತಿಳಿಸಿ ಕಣ್ಣೀರಿಟ್ಟಿದ್ದಾರೆ. ಆ ಬಳಿಕ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಕೊಠಡಿಯೊಳಗೆ ತೆರಳಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ಮನೆಗೆ ಮರಳಿದ ಪತ್ನಿ, ನವೀನ್ ನೇಣು ಬಿಗಿದುಕೊಂಡಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ತಕ್ಷಣವೇ ನೆರೆಹೊರೆಯವರ ಸಹಾಯದಿಂದ ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಪ್ರದೋಷ್ ಮಾಫಿ ಸಾಕ್ಷಿ ತಡೆಯಲು ನಟ ದರ್ಶನ್ ಕಾನೂನು ಸಮರ!
