ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಶೌಚಾಲಯಗಳ ಕೊರತೆಯಿಂದಾಗಿ ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಆಕಸ್ಮಿಕವಾಗಿ ದೇಹದ ಖಾಸಗಿ ಅಂಗಗಳು ಮಹಿಳೆಯ ಕಣ್ಣಿಗೆ ಬಿದ್ದರೆ, ಅದನ್ನು ‘ಲೈಂಗಿಕ ಕಿರುಕುಳ’ ಎಂದು ವರ್ಗೀಕರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ (High Court) ಮಹತ್ವದ ತೀರ್ಪು ನೀಡಿದೆ. ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ಚಿಕ್ಕಮಗಳೂರು ಮೂಲದ ಯುವಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಅರ್ಜಿದಾರನ ಮೇಲಿದ್ದ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.
ಹೈಕೋರ್ಟ್ ಹೇಳಿದ್ದೇನು?
ಈ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಕಾನೂನಿನ ಪ್ರಮುಖ ಅಂಶಗಳನ್ನು ಸ್ಪಷ್ಟಪಡಿಸಿದೆ. ಯಾವುದೇ ಘಟನೆಯನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಲು ಆರೋಪಿಯಲ್ಲಿ ನಿರ್ದಿಷ್ಟವಾಗಿ ಲೈಂಗಿಕ ದುರುದ್ದೇಶ ಅಥವಾ ಕೆಟ್ಟ ಆಶಯ ಇರುವುದು ಕಡ್ಡಾಯ. ಮಹಿಳೆಯನ್ನು ಗುರಿಯಾಗಿಸಿಕೊಂಡು ಬೇಕೆಂದೇ ಪ್ರದರ್ಶಿಸದೆ, ಸನ್ನಿವೇಶದ ಒತ್ತಡದಿಂದ ನಡೆದ ಆಕಸ್ಮಿಕ ಘಟನೆಯನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ದೂರುದಾರ ಮಹಿಳೆಯನ್ನು ಚುಡಾಯಿಸಿದ, ಹಿಂಬಾಲಿಸಿದ ಅಥವಾ ಲೈಂಗಿಕ ಮುಜುಗರ ಉಂಟುಮಾಡುವ ಯಾವುದೇ ಸನ್ನೆಗಳನ್ನು ಮಾಡಿದ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖವಿಲ್ಲ. ಹಠಾತ್ತಾಗಿ ಮಹಿಳೆ ಎದುರಾದಾಗ ಅರ್ಜಿದಾರ ಯುವಕನೇ ಆಘಾತಕ್ಕೊಳಗಾಗಿದ್ದು ಕಂಡುಬಂದಿದೆ. ಯಾವುದೇ ದುರುದ್ದೇಶವಿಲ್ಲದೆ ಕೇವಲ ಸಾಮಾಜಿಕ ಮುಜುಗರ ಉಂಟುಮಾಡುವ ಇಂತಹ ಸಂದರ್ಭಗಳನ್ನು ಕ್ರಿಮಿನಲ್ ಅಪರಾಧದ ವ್ಯಾಪ್ತಿಗೆ ತರುವುದು ಸರಿಯಲ್ಲ. ಇಂತಹ ಪ್ರಕರಣಗಳಲ್ಲಿ ಯುವಕನನ್ನು ಕ್ರಿಮಿನಲ್ ವಿಚಾರಣೆಗೆ ಒಳಪಡಿಸಿದರೆ, ಅದು ನ್ಯಾಯ ಒದಗಿಸುವ ಬದಲಿಗೆ ಕಾನೂನಿನ ಪ್ರಕ್ರಿಯೆಯನ್ನೇ ಆತನಿಗೆ ನೀಡುವ ಶಿಕ್ಷೆಯನ್ನಾಗಿ ಮಾಡಿದಂತಾಗುತ್ತದೆ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.
ಏನಿದು ಪ್ರಕರಣ?
ಪ್ರಕರಣದ ಹಿನ್ನೆಲೆಯನ್ನು ಗಮನಿಸುವುದಾದರೆ, ೨೦೨೬ರ ಜನವರಿ ೨೪ರಂದು ಹೆಬ್ಬಾಳದ ರಿಂಗ್ ರಸ್ತೆಯಲ್ಲಿ ಯುವತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಬಸ್‌ನಿಂದ ಇಳಿದಿದ್ದ ಅರ್ಜಿದಾರ ಯುವಕನಿಗೆ ತೀವ್ರವಾಗಿ ಮೂತ್ರ ವಿಸರ್ಜನೆ ಮಾಡುವ ತುರ್ತು ಎದುರಾಗಿತ್ತು. ಸುತ್ತಮುತ್ತ ಯಾವುದೇ ಸಾರ್ವಜನಿಕ ಶೌಚಾಲಯಗಳು ಇಲ್ಲದಿದ್ದರಿಂದ ಅನಿವಾರ್ಯವಾಗಿ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಈ ವೇಳೆ ಯುವತಿ ಆ ಮಾರ್ಗವಾಗಿ ಬಂದಿದ್ದು, ಯುವಕ ದಿಢೀರನೆ ಹಿಂತಿರುಗಿದಾಗ ಆಕಸ್ಮಿಕವಾಗಿ ಆತನ ಖಾಸಗಿ ಅಂಗಗಳು ಆಕೆಗೆ ಕಾಣಿಸಿದ್ದವು.
ಇದನ್ನು ಲೈಂಗಿಕ ಕಿರುಕುಳ ಎಂದು ಭಾವಿಸಿದ ಯುವತಿ ತಕ್ಷಣವೇ ಕೂಗಾಡಿದ್ದರಿಂದ, ಸ್ಥಳದಲ್ಲಿದ್ದ ಸಾರ್ವಜನಿಕರು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಕೊಡಿಗೇಹಳ್ಳಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ ೭೫(೨) ರಡಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಹಂತದಲ್ಲಿ ಯುವಕ ತನ್ನ ಮೇಲಿನ ಆರೋಪಗಳನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಹೈಕೋರ್ಟ್ ಯುವಕನ ಪರವಾಗಿ ತೀರ್ಪು ನೀಡಿ ಪ್ರಕರಣವನ್ನು ರದ್ದುಗೊಳಿಸಿದೆ.
ಇದನ್ನೂ ಓದಿ: ರಾಮನಗರದಲ್ಲಿ 3ನೇ ದಿನಕ್ಕೆ ಕಾಲಿಟ್ಟ ವಿಕಲಚೇತನರ ಅನಿರ್ದಿಷ್ಟಾವಧಿ ಧರಣಿ: ಪ್ರತಿಭಟನಾ ಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ!
