ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರದ ಹಂಚಿಕೆ ಮತ್ತು ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಯೊಂದು ಸಂಭವಿಸಿದೆ. ರಾಜ್ಯ ಸರ್ಕಾರದ ವಿವಿಧ ನಿಗಮ ಮತ್ತು ಮಂಡಳಿಗಳಲ್ಲಿ ಈಗಾಗಲೇ ಎರಡೂವರೆ ವರ್ಷಗಳ ಆಡಳಿತ ಅವಧಿಯನ್ನು ಪೂರ್ಣಗೊಳಿಸಿರುವ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಕ್ಷಣವೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಖಡಕ್ ಸೂಚನೆ ನೀಡಿದ್ದಾರೆ. ಸರ್ಕಾರದ ಉಳಿದ ಅವಧಿಗೆ ಸಚಿವ ಸ್ಥಾನದಿಂದ ವಂಚಿತರಾದ ಹಿರಿಯ ಶಾಸಕರು ಹಾಗೂ ಪಕ್ಷದ ನಿಷ್ಠಾವಂತ ನಾಯಕರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಿಎಸ್ ಶಾಲಿನಿ ರಜನೀಶ್ ಅವರಿಗೆ ಮುಖ್ಯಮಂತ್ರಿಗಳ ಸೂಚನೆ:
ನಿಗಮ-ಮಂಡಳಿಗಳ ಪುನಾರಚನೆ ಪ್ರಕ್ರಿಯೆಗೆ ಚಾಲನೆ ನೀಡಿರುವ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (CS) ಶಾಲಿನಿ ರಜನೀಶ್ ಅವರಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಮೂಲಕ ಪ್ರಸ್ತುತ ಹುದ್ದೆಯಲ್ಲಿರುವ ಅಧ್ಯಕ್ಷರಿಂದ ಅಧಿಕೃತ ರಾಜೀನಾಮೆ ಪತ್ರಗಳನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದ್ದು, ಶೀಘ್ರದಲ್ಲೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆಡಳಿತ ಪಕ್ಷದ ಮೂಲಗಳು ತಿಳಿಸಿವೆ.
ಹೈಕಮಾಂಡ್ ಮೆಟ್ಟಿಲೇರಿದ್ದ ಶಾಸಕರ ಮನವಿಗೆ ಸ್ಪಂದನೆ:
ಸಚಿವ ಸಂಪುಟ ಸೇರ್ಪಡೆಯಾಗದ ಹಾಗೂ ಯಾವುದೇ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಸಿಗದ ಎಂಟಕ್ಕೂ ಹೆಚ್ಚು ಹಿರಿಯ ಶಾಸಕರು ಇತ್ತೀಚೆಗೆ ನವದೆಹಲಿಗೆ ತೆರಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದರು. ಹಿರಿಯರಿಗೆ ಹಾಗೂ ಹೊಸಬರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಹಾಲಿ ಅಧ್ಯಕ್ಷರನ್ನು ಬದಲಾಯಿಸಬೇಕು ಎಂದು ಮನವಿ ಸಲ್ಲಿಸಿದ್ದರು. ಜೊತೆಗೆ, ಇತ್ತೀಚೆಗೆ ನಡೆದ ಶಾಸಕಾಂಗ ಪಕ್ಷದ (CLP) ಸಭೆಯಲ್ಲೂ ಹಲವು ಶಾಸಕರು ನಿಗಮ-ಮಂಡಳಿಗಳ ಪುನಾರಚನೆಗೆ ಗಂಭೀರ ಆಗ್ರಹ ಮಂಡಿಸಿದ್ದರು. ಈ ವೇಳೆ ದೆಹಲಿ ಭೇಟಿಯ ನಂತರ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಡಿಕೆಶಿ, ಇದೀಗ ಆ ಭರವಸೆಯನ್ನು ಈಡೇರಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
35ಕ್ಕೂ ಹೆಚ್ಚು ಶಾಸಕರಿಂದ ಪದತ್ಯಾಗ ಸಾಧ್ಯತೆ:
ಸದ್ಯದ ಮಾಹಿತಿಯಂತೆ ಶಾಸಕರು ಸೇರಿದಂತೆ ಅಂದಾಜು 35ಕ್ಕೂ ಹೆಚ್ಚು ಮಂದಿ ವಿವಿಧ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಲ್ಲಿ ಎರಡೂವರೆ ವರ್ಷಗಳ ಕಾಲಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಈ ಎಲ್ಲ ನಾಯಕರು ಹುದ್ದೆ ತೊರೆಯುವುದು ಈಗ ಅನಿವಾರ್ಯವಾಗಿದ್ದು, ಶೀಘ್ರದಲ್ಲೇ ಸರ್ಕಾರದ ಹಂತದಲ್ಲಿ ಸರಣಿ ರಾಜೀನಾಮೆಗಳು ಸಲ್ಲಿಕೆಯಾಗಲಿವೆ. ಈ ತೆರವಾಗುವ ಸ್ಥಾನಗಳಿಗೆ ಸಚಿವ ಸ್ಥಾನ ವಂಚಿತ ಶಾಸಕರು ಹಾಗೂ ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರನ್ನು ನೇಮಕ ಮಾಡಲು ಕಾಂಗ್ರೆಸ್ ನಾಯಕತ್ವ ಯೋಜಿಸಿದೆ.
ಇದನ್ನೂ ಓದಿ: ರೈತರ ಮಕ್ಕಳ ಜಮೀನು ಎಲ್ಲಿದೆ ಗೊತ್ತಿದೆ, ಯೋಜನೆಗೆ ಕೊಟ್ಟಿದ್ದಾರಾ?’: ಎಚ್ಡಿಕೆಗೆ ಡಿ.ಕೆ. ಶಿವಕುಮಾರ್ ಕೌಂಟರ್!
