TOP NEWS

Bollywood: ಯಾವುದೇ ಸದ್ದಿಲ್ಲದೇ ಬಂದು ಕಮಾಲ್ ಮಾಡಿದ ಹನುಮಾನ್ ಅಂಶ: ₹2 ಕೋಟಿ ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲಿ ಶೇ. 800 ಲಾಭ!

Bollywood Low Budget Massive Success How Neem Karoli Baba Biopic Magic Doubled Its Box Office Collection

ಮುಂಬೈ: ಯಾವುದೇ ಅದ್ದೂರಿ ಪ್ರಚಾರವಿಲ್ಲದೆ, ಅತ್ಯಂತ ಸರಳವಾಗಿ ಚಿತ್ರಮಂದಿರಗಳಿಗೆ ಕಾಲಿಟ್ಟ ‘ಹನುಮಾನ್ ಅಂಶ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಚ್ಚರಿಯ ಪವಾಡವನ್ನೇ (Bollywood) ಸೃಷ್ಟಿಸಿದೆ. ಆಗಸ್ಟ್ 7, 2026ರಂದು ಬಿಡುಗಡೆಯಾದ ಈ ಚಿತ್ರ ಆರಂಭಿಕ ಎರಡು ವಾರಗಳಲ್ಲಿ ತೀರಾ ಮಂದಗತಿಯ ಕಲೆಕ್ಷನ್ ಮಾಡಿತ್ತು. ಆದರೆ, ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿ, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಭೂತಪೂರ್ವ ಜಿಗಿತ ಕಾಣುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ಬಾಕ್ಸ್ ಆಫೀಸ್‌ನಲ್ಲಿ ಕಂಡ ಅಚ್ಚರಿಯ ಚೇತರಿಕೆ

ಸಿನಿಮಾ ವಿಶ್ಲೇಷಕ ಸಂಸ್ಥೆ ‘ಸ್ಯಾಕ್ನಿಲ್ಕ್’ ನೀಡಿರುವ ಮಾಹಿತಿಯ ಪ್ರಕಾರ, ‘ಹನುಮಾನ್ ಅಂಶ’ ಬಿಡುಗಡೆಯಾದ ಮೊದಲ ದಿನ ಗಳಿಸಿದ್ದು ಕೇವಲ ₹10 ಲಕ್ಷ ಮಾತ್ರ. ಮೊದಲ ಎರಡು ವಾರಗಳ ಅವಧಿಯಲ್ಲೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿ, ಒಟ್ಟಾರೆಯಾಗಿ ₹1.48 ಕೋಟಿ ಕಲೆಕ್ಷನ್ ಮಾಡಲಷ್ಟೇ ಶಕ್ತವಾಗಿತ್ತು.

ಆದರೆ 17ನೇ ದಿನದಿಂದ ಚಿತ್ರದ ಅದೃಷ್ಟ ಸಂಪೂರ್ಣವಾಗಿ ಬದಲಾಯಿತು. ಅಂದು ಒಂದೇ ದಿನದಲ್ಲಿ ₹2.20 ಕೋಟಿ ಗಳಿಸುವ ಮೂಲಕ ಶುಭಾರಂಭ ಮಾಡಿತು. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ನೀಡಿದ ಧನಾತ್ಮಕ ವಿಮರ್ಶೆಗಳು ಹಾಗೂ ಕಿವಿಯಿಂದ ಕಿವಿಗೆ ಹರಿದಾಡಿದ ಮೆಚ್ಚುಗೆಯ ಮಾತುಗಳು (Word of Mouth) ಥಿಯೇಟರ್‌ಗಳತ್ತ ಜನರನ್ನು ಸೆಳೆಯಲು ಪ್ರಾರಂಭಿಸಿದವು. ಪರಿಣಾಮವಾಗಿ, ಮೂರನೇ ವಾರವೊಂದರಲ್ಲೇ ಚಿತ್ರವು ಭಾರಿ ಪ್ರಮಾಣದ ಕಲೆಕ್ಷನ್ ಮಾಡಿದ್ದು, ಬರೋಬ್ಬರಿ ₹10.40 ಕೋಟಿ ಬಾಚಿಕೊಂಡಿತು.

ಶೇ. 800ಕ್ಕೂ ಹೆಚ್ಚು ಲಾಭ ಗಳಿಸಿದ ಕನಿಷ್ಠ ಬಜೆಟ್ ಸಿನಿಮಾ!

ಈ ಸಿನಿಮಾದ ಕಲೆಕ್ಷನ್ ಜಿಗಿತಕ್ಕೆ ಶುಕ್ರವಾರ ಸಾಕ್ಷಿಯಾಯಿತು. ಗುರುವಾರದ ₹2.10 ಕೋಟಿ ಗಳಿಕೆಗೆ ಹೋಲಿಸಿದರೆ ಶುಕ್ರವಾರ ಶೇ. 197.6 ರಷ್ಟು ಬೃಹತ್ ಏರಿಕೆ ಕಂಡು, ಒಂದೇ ದಿನದಲ್ಲಿ ₹6.25 ಕೋಟಿ ಸಂಗ್ರಹಿಸಿತು. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ ₹18.13 ಕೋಟಿಗೆ ತಲುಪಿದೆ.

ಮಾಹಿತಿಗಳ ಪ್ರಕಾರ, ಈ ಇಡೀ ಸಿನಿಮಾವನ್ನು ಕೇವಲ ₹2 ಕೋಟಿ ಸಣ್ಣ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಪ್ರಸ್ತುತ ₹18 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಈ ಚಿತ್ರ, ತನ್ನ ನಿರ್ಮಾಣ ವೆಚ್ಚಕ್ಕಿಂತ ಶೇ. 800ಕ್ಕೂ ಹೆಚ್ಚಿನ ಲಾಭವನ್ನು ತಂದುಕೊಟ್ಟಿದೆ. ಮೊದಲ ದಿನದ ₹10 ಲಕ್ಷ ಗಳಿಕೆಯಿಂದ 22ನೇ ದಿನದ ₹6.25 ಕೋಟಿ ಗಳಿಕೆಯನ್ನು ಹೋಲಿಸಿದರೆ, ಕಲೆಕ್ಷನ್‌ನಲ್ಲಿ ಬರೋಬ್ಬರಿ ಶೇಕಡಾ 6,150 ರಷ್ಟು ಜಿಗಿತ ಕಂಡಂತಾಗಿದೆ!

ಏನಿದು ‘ಹನುಮಾನ್ ಅಂಶ’ ಕಥಾಹಂದರ?

ವಿಶಾಲ್ ಚತುರ್ವೇದಿ ಅವರ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹನುಮಾನ್ ಅಂಶ’ ಚಿತ್ರವು, ವಿಶ್ವವಿಖ್ಯಾತ ಆಧ್ಯಾತ್ಮಿಕ ಸಂತರಾದ ‘ನೀಮ್ ಕರೋಲಿ ಬಾಬಾ’ (ಮಹಾರಾಜ್-ಜಿ) ಅವರ ಜೀವನವನ್ನು ಆಧರಿಸಿದೆ.

ಅಗಲಿದ ತನ್ನ ತಾಯಿಯನ್ನು ಮತ್ತೆ ಭೇಟಿಯಾಗುವ ಹಂಬಲದಿಂದ ದೇವರನ್ನು ಹುಡುಕ ಹೊರಡುವ ಒಬ್ಬ ದುಃಖಿತ ಬಾಲಕ, ಕಾಲಕ್ರಮೇಣ ದೈವಿಕತೆಯನ್ನು ಕಂಡುಕೊಂಡು ಪ್ರೀತಿ, ಅನ್ನದಾನ ಹಾಗೂ ಮೌನ ಆಶೀರ್ವಾದಗಳ ಮೂಲಕ ಮಾನವಕುಲದ ಸೇವೆಗೆ ಅಂಕಿತಗೊಳ್ಳುತ್ತಾನೆ. ಆತನೇ ಮುಂದೆ ‘ಹನುಮಾನ್ ಅಂಶ’ ಎಂದೇ ಹೆಸರಾದ ನೀಮ್ ಕರೋಲಿ ಬಾಬಾ ಆಗಿ ಬದಲಾಗುವ ಕಥೆಯನ್ನು ಈ ಸಿನಿಮಾ ಮನಮುಟ್ಟುವಂತೆ ವಿವರಿಸುತ್ತದೆ.

ಸೆಟ್‌ನಲ್ಲಿ ಬಯಸಿದ್ದೇ ಸಾತ್ವಿಕ ವಾತಾವರಣ: ಪ್ರೇಮಾನಂದ ಜೀ ಮಹಾರಾಜ್ ಸೂಚನೆ!

ಇತ್ತೀಚೆಗೆ ‘ಆಜ್ ತಕ್’ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ವಿಶಾಲ್ ಚತುರ್ವೇದಿ ಸಿನಿಮಾದ ಚಿತ್ರೀಕರಣದ ವೇಳೆಯ ಕೆಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕರು ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ ಜೀ ಮಹಾರಾಜ್ ಅವರನ್ನು ಭೇಟಿಯಾದಾಗ, ನೀಮ್ ಕರೋಲಿ ಬಾಬಾ ಅವರ ಪಾತ್ರ ಮಾಡುವ ನಟನು ಕಟ್ಟುನಿಟ್ಟಾದ ಸಾತ್ವಿಕ ನಿಯಮಗಳನ್ನು ಪಾಲಿಸಬೇಕು ಮತ್ತು ಸಂಪೂರ್ಣ ಸಸ್ಯಾಹಾರಿಯಾಗಿರಬೇಕು ಎಂದು ಅವರು ಸಲಹೆ ನೀಡಿದ್ದರು. ಅಂತೆಯೇ ಈ ಸಿನಿಮಾದಲ್ಲಿ ಶೋಭಿನವ್ ಸತ್ಯ ಅವರು ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರೀಕರಣದ ಸ್ಥಳದಲ್ಲಿ ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿತ್ತು. “ಸೆಟ್‌ನಲ್ಲಿ ಯಾರೂ ಕೆಟ್ಟ ಪದಗಳನ್ನು ಬಳಸಿ ಬಯ್ಯುವಂತಿರಲಿಲ್ಲ. ಜಗಳ ಅಥವಾ ವಾದ-ವಿವಾದಗಳಿಗೆ ಅವಕಾಶವಿರಲಿಲ್ಲ. ಕೇವಲ ಸಸ್ಯಾಹಾರಿ ಆಹಾರಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಪ್ರತಿದಿನ ಹನುಮಾನ್ ಚಾಲೀಸಾ ಪಠಣೆಯೊಂದಿಗೆ ಶೂಟಿಂಗ್ ಆರಂಭಿಸಿ, ಸಂಜೆ ಹನುಮಾನ್ ಚಾಲೀಸಾದಿಂದಲೇ ಮುಕ್ತಾಯಗೊಳಿಸುತ್ತಿದ್ದೆವು. ಶೂಟಿಂಗ್ ವೇಳೆ ಏನಾದರೂ ಸಮಸ್ಯೆ ಎದುರಾದಾಗಲೂ ನಾವೆಲ್ಲರೂ ಒಟ್ಟಾಗಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದೆವು” ಎಂದು ವಿಶಾಲ್ ಚತುರ್ವೇದಿ ತಿಳಿಸಿದ್ದಾರೆ.

ಇದನ್ನೂ ಓದಿ: ಸೆಲೆಬ್ರಿಟಿಗಳ ಸೆಲೆಕ್ಷನ್ ಸೀಕ್ರೆಟ್ ಬಿಚ್ಚಿಟ್ಟ ಕಿಚ್ಚ: ಬಿಗ್ ಬಾಸ್ 13 ಪ್ರೆಸ್‌ಮೀಟ್‌ನಲ್ಲಿ ಸುದೀಪ್ ಖಡಕ್ ಕ್ಲಾರಿಟಿ!

Leave a Reply

Your email address will not be published. Required fields are marked *