ಬೆಂಗಳೂರು: ಕಲಬುರಗಿಯಲ್ಲಿ ನಡೆದಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿಯನ್ನು ಉಲ್ಲೇಖಿಸಿ, “ಅವರು ಭಾರತೀಯರೋ ಅಥವಾ ಪಾಕಿಸ್ತಾನಿಯೋ?” ಎಂದು ಪ್ರಶ್ನಿಸಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರ ಹೇಳಿಕೆ ವಿರುದ್ಧ ಹೈಕೋರ್ಟ್ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಹೇಳಿಕೆಗಳನ್ನು ನೀಡಿದವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ ಹಾಗೂ ಯಾವುದೇ ಕಾರಣಕ್ಕೂ ಇದನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ (High Court) ಅತ್ಯಂತ ಕಟುವಾಗಿ ಹೇಳಿದೆ.
ಹುದ್ದೆಯಲ್ಲಿದ್ದುಕೊಂಡು ಈ ರೀತಿ ಮಾತನಾಡಿರುವುದು ಸರಿಯಲ್ಲ
ಹಿರಿಯ ಐಎಎಸ್ ಅಧಿಕಾರಿ ಫೌಜಿಯಾ ತರನ್ನುಮ್ ಅವರ ವಿರುದ್ಧ ಬಿಜೆಪಿ ನಾಯಕ ಎನ್. ರವಿಕುಮಾರ್ ನೀಡಿದ್ದಾರೆನ್ನಲಾದ ವಿವಾದಾತ್ಮಕ ಮತ್ತು ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದ ರದ್ದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ನಡೆಸಿತು. ವಿಚಾರಣೆ ವೇಳೆ ಜನಪ್ರತಿನಿಧಿಯೊಬ್ಬರು ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಈ ರೀತಿ ಮಾತನಾಡಿರುವುದಕ್ಕೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಧರ್ಮವನ್ನು ಎಳೆದು ತರುವುದು ಸರಿಯಲ್ಲ
ವಿಚಾರಣೆ ಸಂದರ್ಭದಲ್ಲಿ ಅತ್ಯಂತ ಗಂಭೀರವಾಗಿ ವಿಷಯ ಪ್ರಸ್ತಾಪಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, “ಐಎಎಸ್ ಅಧಿಕಾರಿ ಫೌಜಿಯಾ ತರನ್ನುಮ್ ಅವರು ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಅವರನ್ನು ಗುರಿಯಾಗಿಸಿಕೊಂಡು ಈ ರೀತಿಯ ಹೇಳಿಕೆ ನೀಡಿರುವುದನ್ನು ಯಾವುದೇ ರೀತಿಯಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಾಗ ಅವರ ಧರ್ಮವನ್ನು ಎಳೆದು ತರುವುದು ಸರಿಯಲ್ಲ. ಕಳೆದ ವಿಚಾರಣೆಯ ವೇಳೆಯೂ ನ್ಯಾಯಾಲಯವು ಈ ಬಗ್ಗೆ ತೀಕ್ಷ್ಣವಾಗಿ ಸ್ಪಷ್ಟಪಡಿಸಿತ್ತು” ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಧಾಟಿಯಲ್ಲಿ ನೆನಪಿಸಿದರು.
ಪ್ರತಿಭಟನೆಯ ಹೆಸರಿನಲ್ಲಿ ಒಬ್ಬ ಸರ್ಕಾರಿ ಉನ್ನತಾಧಿಕಾರಿಯ ದೇಶಭಕ್ತಿಯನ್ನೇ ಪ್ರಶ್ನಿಸುವುದು ಮತ್ತು ಕೋಮು ಆಧಾರದ ಮೇಲೆ ನಿಂದಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆ ಎಂದ ನ್ಯಾಯಪೀಠ, ಈ ಪ್ರಕರಣದಲ್ಲಿ ಸೂಕ್ತ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು. ಎರಡೂ ಕಡೆಯ ಸುದೀರ್ಘ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯ ಮುಂದಿನ ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿ ಆದೇಶಿಸಿತು.
ಇದನ್ನೂ ಓದಿ: ಕಾಂಗ್ರೆಸ್ ಜಾಹೀರಾತು ವಿರುದ್ಧ ಬಿಜೆಪಿ ಮಾನನಷ್ಟ ಮೊಕದ್ದಮೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್!
