ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ( Actor Darshan) ತೂಗುದೀಪ ಅವರಿಗೆ ನ್ಯಾಯಾಲಯಗಳಲ್ಲಿ ಸರಣಿ ಹಿನ್ನಡೆಗಳಾಗುತ್ತಿದ್ದು, ಅವರ ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ವಿಚಾರಣೆ ವೇಳೆ ಕೋರ್ಟ್‌ಗೆ ಭೌತಿಕವಾಗಿ (ಖುದ್ದು) ಹಾಜರಾಗಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದ್ದರೆ, ಇನ್ನೊಂದೆಡೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಖುದ್ದು ಹಾಜರಾತಿ ಅರ್ಜಿ ವಜಾ: ಕೋರ್ಟ್‌ನಲ್ಲಿ ಎಸ್‌ಪಿಪಿ ಖಡಕ್ ವಾದ!
ಸಾಕ್ಷಿಗಳ ವಿಚಾರಣೆ ನಡೆಯುವ ಸಂದರ್ಭದಲ್ಲಿ ತಾವು ಭೌತಿಕವಾಗಿ ಕೋರ್ಟ್‌ನಲ್ಲಿ ಹಾಜರಿದ್ದರೆ ವಕೀಲರಿಗೆ ಸೂಕ್ತ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದು ತಿಳಿಸಿ ದರ್ಶನ್ ಪರ ವಕೀಲರು ಸಿಆರ್‌ಪಿಸಿ ಸೆಕ್ಷನ್ 273ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಮನವಿಗೆ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಕೋರ್ಟ್‌ಗೆ ದರ್ಶನ್ ಅವರನ್ನು ನೇರವಾಗಿ ಕರೆತಂದರೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಜಮಾಯಿಸುತ್ತಾರೆ. ಹಿಂದೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ವೇಳೆ ಇಡೀ ನ್ಯಾಯಾಲಯದ ಆವರಣ ಕಿಕ್ಕಿರಿದು ತುಂಬಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ನ್ಯಾಯಾಧೀಶರ ಮಾತುಗಳು ಆರೋಪಿಗಳಿಗೇ ಕೇಳಿಸದ ಸ್ಥಿತಿ ನಿರ್ಮಾಣವಾಗಿ ಇಡೀ ದಿನದ ಕಲಾಪ ವ್ಯರ್ಥವಾಗಿತ್ತು ಎಂಬುದನ್ನು ಎಸ್‌ಪಿಪಿ ನೆನಪಿಸಿದರು.
ಅಲ್ಲದೆ, ಮುಂಬರುವ ವರಮಹಾಲಕ್ಷ್ಮಿ ಹಬ್ಬ ಹಾಗೂ ಈದ್ ಮಿಲಾದ್‌ನಂತಹ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಭದ್ರತಾ ಕರ್ತವ್ಯಗಳಲ್ಲಿ ನಿರತವಾಗಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ದರ್ಶನ್ ಅವರಂತಹ ಹೈ-ಪ್ರೊಫೈಲ್ ಆರೋಪಿಯನ್ನು ಕೋರ್ಟ್‌ಗೆ ಕರೆತಂದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ವಾದ ಮಂಡಿಸಿದ್ದರು. ಎಸ್‌ಪಿಪಿ ವಾದವನ್ನು ಮಾನ್ಯ ಮಾಡಿದ ಸೆಷನ್ಸ್ ಕೋರ್ಟ್, ದರ್ಶನ್ ಅವರ ಖುದ್ದು ಹಾಜರಾತಿ ಅರ್ಜಿಯನ್ನು ವಜಾಗೊಳಿಸಿದೆ.
ಮಾಫಿ ಸಾಕ್ಷಿ ವಿಚಾರದಲ್ಲೂ ದರ್ಶನ್‌ಗೆ ಹೈಕೋರ್ಟ್ ಶಾಕ್!
ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್ ಅಪ್ರೂವರ್ (ಮಾಫಿ ಸಾಕ್ಷಿ) ಆಗಲು ಮುಂದಾಗಿದ್ದು, ಈ ಸಂಬಂಧ ಕೆಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಆಕ್ಷೇಪಣೆ ಸಲ್ಲಿಸಲು ತಮಗೆ ಅವಕಾಶ ನೀಡಬೇಕೆಂದು ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, 59ನೇ ಸಿಸಿಹೆಚ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್, ಕೆಳ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ದರ್ಶನ್ ಅವರ ಅರ್ಜಿಯನ್ನು ತಿರಸ್ಕರಿಸಿದೆ.
‘ಅಭಿಮಾನಿಗಳು ಭಯಪಡಬೇಡಿ’: ದರ್ಶನ್ ಪರ ವಕೀಲರ ಅಭಯ
ಇಷ್ಟೆಲ್ಲಾ ಸರಣಿ ಹಿನ್ನಡೆಗಳ ನಡುವೆಯೂ ದರ್ಶನ್ ಪರ ಮತ್ತೊಬ್ಬ ವಕೀಲರಾದ ಮೊಹಮ್ಮದ್ ಮುಬಾರಕ್ ಮಾಧ್ಯಮಗಳೊಂದಿಗೆ ಮಾತನಾಡಿ, “ಅಭಿಮಾನಿಗಳು ಯಾರೂ ಧೃತಿಗೆಡಬೇಕಾದ ಅಗತ್ಯವಿಲ್ಲ. ಶೀಘ್ರದಲ್ಲೇ ದರ್ಶನ್ ಅಭಿಮಾನಿಗಳಿಗೆ ಶುಭಸುದ್ದಿ ಸಿಗಲಿದೆ. ಈಗಾಗಲೇ 60ಕ್ಕೂ ಹೆಚ್ಚು ಸಾಕ್ಷಿಗಳು ಹಾಗೂ 22 ವಿಚಾರಣೆಗಳು ಪೂರ್ಣಗೊಂಡಿದ್ದು, ಹಲವು ಸಾಕ್ಷ್ಯಾಧಾರಗಳು ನಮ್ಮ ಪರವಾಗಿವೆ. ಕಾನೂನು ಹೋರಾಟದಲ್ಲಿ ನಮಗೆ ಗೆಲುವು ಸಿಗಲಿದೆ” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಪ್ರಕರಣದ 12ನೇ ಆರೋಪಿ ಲಕ್ಷ್ಮಣ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಆ.17ಕ್ಕೆ ಮುಂದೂಡಿದೆ. ಒಟ್ಟಿನಲ್ಲಿ ವಿಚಾರಣಾ ಹಂತದಲ್ಲೇ ದರ್ಶನ್‌ಗೆ ಹಿನ್ನಡೆಗಳಾಗುತ್ತಿರುವುದು ಅವರ ಬಂಧನ ಅವಧಿಯನ್ನು ಮತ್ತಷ್ಟು ವಿಸ್ತರಿಸುವಂತೆ ಮಾಡಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ‘ಶೋ ಆಫ್’ ಹೇಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯೆ
