ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅವರು ತಮ್ಮ ವೈಯಕ್ತಿಕ ಜೀವನದ ಅತ್ಯಂತ ಕಠಿಣ ಮತ್ತು ಕರಾಳ ದಿನಗಳ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದು, ಇಂಟರ್ನೆಟ್ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಹಳೆಯ ಪ್ರೇಮ ಜೀವನದ ಕಹಿ ನೆನಪುಗಳನ್ನು ಹಂಚಿಕೊಂಡಿರುವ ಅವರು, ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದೆ ಸತತ ಎರಡು ವರ್ಷಗಳ ಕಾಲ ತಾವು ಅನುಭವಿಸಿದ ಮಾನಸಿಕ ಮತ್ತು ನಾರ್ಸಿಸಿಸ್ಟಿಕ್ ಕಿರುಕುಳದ (Narcissistic Abuse) ಬಗ್ಗೆ ಆಘಾತಕಾರಿ ಸಂಗತಿಗಳನ್ನು ಹೊರಹಾಕಿದ್ದಾರೆ.
ಪ್ರೇಮಿಯ ನಡವಳಿಕೆ ‘ಅನ್ನಿಯನ್’ ಚಿತ್ರದ ತರ ಇತ್ತು:
ಧನ್ಯಾ ವರ್ಮಾ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ 30 ವರ್ಷದ ನಟಿ ಅನುಪಮಾ, ತಮ್ಮ ಹಳೆಯ ಸಂಬಂಧ ತಮಗೆ ನೀಡಿದ ತೀವ್ರ ಆಘಾತದ ಬಗ್ಗೆ ವಿವರಿಸಿದ್ದಾರೆ. ನಾರ್ಸಿಸಿಸ್ಟಿಕ್ ಕಿರುಕುಳ ಎಂದರೆ ಏನು ಎಂಬುದನ್ನು ಜನರಿಗೆ ಅರ್ಥ ಮಾಡಿಸಲು ಅವರು ನಟ ವಿಕ್ರಮ್ ನಟನೆಯ ಪ್ರಸಿದ್ಧ ‘ಅನ್ನಿಯನ್’ (ಅಪರಿಚಿತ) ಚಿತ್ರದ ಪಾತ್ರಗಳನ್ನು ಉದಾಹರಣೆಯಾಗಿ ನೀಡಿದ್ದಾರೆ. “ಒಂದು ದಿನ ಆತ ರೋಮೋ ತರ ಇರುತ್ತಿದ್ದ. ಇಂತಹ ವ್ಯಕ್ತಿ ನನ್ನ ಬದುಕಿಗೆ ಸಿಗಲು ನಾನು ಎಷ್ಟು ಅದೃಷ್ಟವಂತೆ, ಇದು ನಿಜವೇ ಅಥವಾ ಕನಸೇ ಎನ್ನುವಂತೆ ಪ್ರೀತಿ ತೋರಿಸುತ್ತಿದ್ದ. ಆದರೆ ಮರುದಿನವೇ ಆತ ಕ್ರೂರ ಅನ್ನಿಯನ್ ತರ ಬದಲಾಗುತ್ತಿದ್ದ” ಎಂದು ಅನುಪಮಾ ಹೇಳಿದ್ದಾರೆ. ತಮಗೆ ಚೂರಿಯಿಂದ ಇರಿದು ಕೊಂದರೂ ಆ ವ್ಯಕ್ತಿ ಯಾವುದೇ ಪ್ರತಿಕ್ರಿಯೆ ನೀಡದಷ್ಟು ಕ್ರೂರವಾಗಿ ನಡೆದುಕೊಳ್ಳುತ್ತಿದ್ದ ಮತ್ತು ಆ ನಂತರ ಮತ್ತೆ ಬಂದು ಅತ್ತು, ಕಾಲಿಗೆ ಬಿದ್ದು ಕ್ಷಮೆ ಕೇಳಿ ಪ್ರೀತಿಯ ನಾಟಕವಾಡುತ್ತಿದ್ದ ಎಂದು ಅವರು ವಿವರಿಸಿದ್ದಾರೆ. ಈ ನಿರಂತರ ಬದಲಾಗುವ ನಡವಳಿಕೆಯಿಂದಾಗಿ ತಾವು ಆತನ ಮುಂದೆ ಏನು ಮಾತನಾಡಬೇಕು ಎಂಬುದನ್ನು ಮೊದಲೇ ರಿಹರ್ಸಲ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇತ್ತು ಎಂದು ಅಳಲು ತೋಡಿಕೊಂಡಿದ್ದಾರೆ.
ಸಿನಿಮಾ ಹಾಗೂ ಉಡುಪಿನ ಮೇಲೂ ಇತ್ತು ನಿಯಂತ್ರಣ:
ಈ ನಿಯಂತ್ರಣವು ಆರಂಭದಲ್ಲೇ ಕಾಣಿಸಿಕೊಳ್ಳಲಿಲ್ಲ, ಬದಲಿಗೆ ಸಂಬಂಧ ಗಂಭೀರವಾಗಿ ಕುಟುಂಬದವರೆಲ್ಲ ಮಾತನಾಡಿದ ನಂತರ ನಿಧಾನವಾಗಿ ಶುರುವಾಯಿತು ಎಂದು ಅನುಪಮಾ ತಿಳಿಸಿದ್ದಾರೆ. ತಾವು ಆತನ ಕುಟುಂಬದೊಂದಿಗೆ ಮತ್ತು ಆತ ತಮ್ಮ ಕುಟುಂಬದೊಂದಿಗೆ ಸಮಯ ಕಳೆದಿದ್ದರಿಂದ ಇವನ ಜೊತೆಯೇ ಜೀವನ ಸಾಗಿಸಬೇಕು ಎಂದು ಮಾನಸಿಕವಾಗಿ ಫಿಕ್ಸ್ ಆಗಿದ್ದಾಗ ಈ ಕಂಟ್ರೋಲ್ ಮಿತಿಮೀರಿತು ಎಂದಿದ್ದಾರೆ. ಇದೇ ಕಾರಣಕ್ಕೆ ತಮ್ಮ ವೃತ್ತಿಜೀವನದ ಸೂಪರ್ ಹಿಟ್ ಚಿತ್ರವಾದ ‘ಡ್ರ್ಯಾಗನ್’ ಸಿನಿಮಾದ ಪ್ರಚಾರಕ್ಕೇ ತಾವು ಹೋಗಿರಲಿಲ್ಲ ಮತ್ತು ಹಲವು ದೊಡ್ಡ ಪ್ರಾಜೆಕ್ಟ್ಗಳನ್ನು ಕೈಬಿಡಬೇಕಾಯಿತು ಎಂದು ಅವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಜೀನ್ಸ್ ಮತ್ತು ಟಾಪ್ ಧರಿಸುತ್ತಿದ್ದ ತಾವು ಆತನ ಇಷ್ಟದಂತೆ ಸಾಂಪ್ರದಾಯಿಕವಾಗಿ ಉಡುಪು ಧರಿಸಲು ಆರಂಭಿಸಿದ್ದಾಗಿ ಮತ್ತು ಹೊರಗಡೆ ಹೋಗುವ ಮುನ್ನ ತಮ್ಮ ಉಡುಪಿನ ಫೋಟೋವನ್ನು ಆತನಿಗೆ ಕಳುಹಿಸಿ ಒಪ್ಪಿಗೆ ಪಡೆಯಬೇಕಿತ್ತು ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮುನ್ನವೂ ಆತನ ಅನುಮತಿ ಬೇಕಿತ್ತು ಎಂದು ಅನುಪಮಾ ತಮ್ಮ ಮೇಲಿದ್ದ ನಿರ್ಬಂಧಗಳನ್ನು ಬಿಚ್ಚಿಟ್ಟಿದ್ದಾರೆ.
ಧ್ರುವ್ ವಿಕ್ರಮ್ ಜೊತೆಗಿನ ಲಿಂಕ್-ಅಪ್ ಚರ್ಚೆ:
ಅನುಪಮಾ ಅವರ ಈ ಆಘಾತಕಾರಿ ಹೇಳಿಕೆಗಳ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನಟ ಧ್ರುವ್ ವಿಕ್ರಮ್ ಹೆಸರು ಮತ್ತೆ ಮುಂಚೂಣಿಗೆ ಬಂದಿದೆ. ‘ಬೈಸನ್ ಕಾಲಮಾಡನ್’ ಚಿತ್ರದ ಶೂಟಿಂಗ್ ವೇಳೆ ಇವರಿಬ್ಬರ ಡೇಟಿಂಗ್ ವದಂತಿಗಳು ಭಾರಿ ಸದ್ದು ಮಾಡಿದ್ದವು. ಅಷ್ಟೇ ಅಲ್ಲದೆ, ಇಬ್ಬರ ಜಂಟಿ ಸ್ಪಾಟಿಫೈ ಪ್ಲೇಲಿಸ್ಟ್ನ ಡಿಸ್ಪ್ಲೇ ಪಿಕ್ಚರ್ನಲ್ಲಿ ಇಬ್ಬರು ಚುಂಬಿಸುತ್ತಿರುವ ಫೋಟೋ ವೈರಲ್ ಆಗಿತ್ತು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಧ್ರುವ್ ಅವರನ್ನು ಅನುಪಮಾ ತಮ್ಮ ‘ರಾತ್ರಿ 2 ಗಂಟೆಯ ಕಾಲ್’ ಎಂದು ಕರೆದಿದ್ದರು. ವಿಶೇಷವೆಂದರೆ ಅನುಪಮಾ ತಮ್ಮ ಮಾಜಿ ಪ್ರೇಮಿಯನ್ನು ‘ಅನ್ನಿಯನ್’ ಚಿತ್ರದ ಪಾತ್ರಕ್ಕೆ ಹೋಲಿಸಿದ್ದು, ಆ ಚಿತ್ರದ ನಾಯಕ ಚಿಯಾನ್ ವಿಕ್ರಮ್ ಅವರ ಪುತ್ರನೇ ಈ ಧ್ರುವ್ ವಿಕ್ರಮ್ ಆಗಿರುವುದರಿಂದ ನೆಟ್ಟಿಗರು ಇವರಿಬ್ಬರ ಬ್ರೇಕಪ್ ಬಗ್ಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಚರ್ಚಿಸುತ್ತಿದ್ದಾರೆ. ಆದರೆ ಈ ವದಂತಿಗಳ ಬಗ್ಗೆ ಇಬ್ಬರೂ ನಟರು ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಇದನ್ನೂ ಓದಿ: ಕೆಬಿಸಿ 18ರಲ್ಲೂ ಮೊಳಗಿತು ಕನ್ನಡಿಗ ಯಶ್ ಹೆಸರು: ಅಮಿತಾಭ್ ಬಚ್ಚನ್ ಕೇಳಿದ ಆ 20 ಸಾವಿರದ ಪ್ರಶ್ನೆಗೆ ನೆಟ್ಟಿಗರು ಫಿದಾ!
