TOP NEWS

Crime: ಕಲಬುರಗಿಯಲ್ಲಿ ಭೀಕರ ದುರಂತ: ಪತ್ನಿ ಮೇಲಿನ ಅನುಮಾನಕ್ಕೆ ಮನೆಯಲ್ಲೇ ಜಿಲೆಟಿನ್ ಬ್ಲಾಸ್ಟ್; ತಂದೆ, ಮಗಳು ಸಾವು!

Crime Kalaburagi Horror Suspicious Husband Triggers Gelatin Explosion to Kill Family Self and Daughter Killed

ಕಲಬುರಗಿ: ಪತ್ನಿಯ ನಡತೆಯ ಮೇಲೆ ಅನುಮಾನಗೊಂಡು ವ್ಯಕ್ತಿಯೊಬ್ಬ ಇಡೀ ಕುಟುಂಬವನ್ನೇ ಮುಗಿಸಲು ಹೋಗಿ, ತಾನೂ ಸೇರಿದಂತೆ ಮಗಳನ್ನು ಬಲಿಪಡೆದಿರುವ (Crime) ಭೀಕರ ಘಟನೆ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ. ಮನೆಯೊಳಗೆ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಪತ್ನಿ ಸೇರಿ ನಾಲ್ವರು ರಕ್ತದ ಮಡುವಿನಲ್ಲಿ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಏನಿದು ಘಟನೆ?

ಶಿವಲಾಲ್ ಬಲಿರಾಮ್ ರಾಠೋಡ್ (50) ಹಾಗೂ ಈತನ 15 ವರ್ಷದ ಮಗಳು ಮೀರಾ ಜಿಲೆಟಿನ್ ಬ್ಲಾಸ್ಟ್‌ನ ತೀವ್ರತೆಗೆ ಪ್ರಾಣ ಕಳೆದುಕೊಂಡ ದುರ್ದೈವಿಗಳು. ಆರೋಪಿ ಶಿವಲಾಲ್ ಸ್ಥಳೀಯ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದಲೇ ಯಾರಿಗೂ ತಿಳಿಯದಂತೆ ಜಿಲೆಟಿನ್ ಕಡ್ಡಿಗಳನ್ನು ಮನೆಗೆ ತಂದಿಟ್ಟುಕೊಂಡಿದ್ದ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಪತ್ನಿಯ ಚಾರಿತ್ರ್ಯದ ಮೇಲೆ ತೀವ್ರವಾಗಿ ಅನುಮಾನ ಪಡುತ್ತಿದ್ದ ಈತ, ಮಂಗಳವಾರ ಬೆಳಗ್ಗೆ ಕುಟುಂಬದವರೆಲ್ಲರೂ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಏಕಾಏಕಿ ಸ್ಫೋಟಕಕ್ಕೆ ಬೆಂಕಿ ಹಚ್ಚಿದ್ದಾನೆ.

4 ಜನರ ಪರಿಸ್ಥಿತಿ ಚಿಂತಾಜನಕ

ಜಿಲೆಟಿನ್ ಕಡ್ಡಿಗಳು ಭೀಕರವಾಗಿ ಸ್ಫೋಟಗೊಂಡ ರಭಸಕ್ಕೆ ಮನೆ ಜರ್ಜರಿತವಾಗಿದ್ದು, ಶಿವಲಾಲ್ ಪತ್ನಿ ಸವಿತಾ ಹಾಗೂ ಮನೆಯಲ್ಲಿದ್ದ ಪ್ರಕಾಶ್, ಸುರೇಖಾ ಮತ್ತು ವಿವೇಕ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣುಮಕ್ಕಳ ಜೀವ ತೆಗೆದ ತಂದೆ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಪ್ರತಿಷ್ಠಿತ ‘ತಾಜ್ ಹೋಟೆಲ್’ನಲ್ಲಿ ನಡೆದ ಇಬ್ಬರು ಪುಟ್ಟ ಹೆಣ್ಣುಮಕ್ಕಳ ಭೀಕರ ಕೊಲೆ ಪ್ರಕರಣದ ತನಿಖೆಯಲ್ಲಿ ಸದ್ಯ ಸರಣಿ ಸ್ಫೋಟಕ ಸತ್ಯಗಳು ಹೊರಬರುತ್ತಿವೆ. ಆರೋಪಿ ತಂದೆ ಇಮ್ರಾನ್, ತನ್ನ 5 ಹಾಗೂ 10 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಮುಗಿಸಲೆಂದೇ ಪ್ಲಾನ್ ಮಾಡಿ ಹೋಟೆಲ್‌ನ 4ನೇ ಮಹಡಿಯಲ್ಲಿ ಮುಂಚಿತವಾಗಿಯೇ ರೂಮ್ ಬುಕ್ ಮಾಡಿದ್ದ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಶೇಕ್ ಜೋಯಾ (10) ಮತ್ತು ಶೇಕ್ ಜೆಹರಾ (5) ಕೊಲೆಯಾದ ದುರ್ದೈವಿ ಮಕ್ಕಳು. ನಾಗವಾರ ಮೂಲದ ಇಮ್ರಾನ್, ಖಾಸಗಿ ಕ್ಯಾಬ್ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಮಕ್ಕಳನ್ನು ಉಸಿರುಗಟ್ಟಿಸಿ ಅಥವಾ ಮತ್ಯಾವುದೋ ಧೋರಣೆಯಿಂದ ಕೊಲೆ ಮಾಡಿದ ಬಳಿಕ, ಈತ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಇಮ್ರಾನ್‌ನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಡೆತ್‌ನೋಟ್‌ನಲ್ಲಿ ಪತ್ನಿಯ ಚಾರಿತ್ರ್ಯದ ಉಲ್ಲೇಖ: ಹತ್ಯೆ ನಡೆದ ರೂಮ್‌ನಲ್ಲಿ ಪೊಲೀಸರಿಗೆ ಆರೋಪಿ ಬರೆದಿಟ್ಟಿದ್ದ ಡೆತ್‌ನೋಟ್ ಪತ್ತೆಯಾಗಿದೆ. ತನ್ನ ಹೆಂಡತಿಯ ಅಕ್ರಮ ಸಂಬಂಧ ಹಾಗೂ ನಡತೆಯೇ ಇಡೀ ದುರಂತಕ್ಕೆ ಕಾರಣ ಎಂದು ಆತ ಅದರಲ್ಲಿ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ. ಕೌಟುಂಬಿಕ ಕಲಹ ಹಾಗೂ ಹೆಂಡತಿಯ ಮೇಲಿನ ಕೋಪಕ್ಕೆ ಅಮಾಯಕ ಮಕ್ಕಳನ್ನು ಬಲಿ ಪಡೆದಿದ್ದಾನಾ ಅಥವಾ ಇದರ ಹಿಂದೆ ಬೇರೆ ಏನಾದರೂ ನಿಖರ ಕಾರಣವಿದೆಯೇ ಎಂಬ ನಿಟ್ಟಿನಲ್ಲಿ ಏರ್‌ಪೋರ್ಟ್ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ನಟ ದರ್ಶನ್ ಗ್ಯಾಂಗ್‌ಗೆ ತಾತ್ಕಾಲಿಕ ರಿಲೀಫ್!

Leave a Reply

Your email address will not be published. Required fields are marked *