ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ತಿರುವು ಸಿಕ್ಕಿದೆ. ಪ್ರಕರಣದ 14ನೇ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು (Approver) ಸಲ್ಲಿಸಿದ್ದ ಅರ್ಜಿಯನ್ನು (Big News) ನ್ಯಾಯಾಲಯ ಪುರಸ್ಕರಿಸಿದ್ದು, ಇದರಿಂದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಭಾರಿ ಹಿನ್ನಡೆಯಾಗಿದೆ.
ಆರೋಪಿಗಳ ಆಕ್ಷೇಪಣೆ ಅರ್ಜಿ ಕೋರ್ಟ್ ವಜಾ!
ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ವಿರೋಧಿಸಿ ದರ್ಶನ್ ಹಾಗೂ ಇತರ ಸಹ ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಆಕ್ಷೇಪಣೆಯನ್ನು ಬೆಂಗಳೂರಿನ 59ನೇ ಸೆಷನ್ಸ್ ಕೋರ್ಟ್ ಸಂಪೂರ್ಣವಾಗಿ ತಿರಸ್ಕರಿಸಿದೆ. ಕಾನೂನಿನ ಪ್ರಕಾರ ಮತ್ತೊಬ್ಬ ಆರೋಪಿ ಮಾಫಿ ಸಾಕ್ಷಿಯಾಗುವುದಕ್ಕೆ ಸಹ-ಆರೋಪಿಗಳು ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ವಿಚಾರಣೆ ವೇಳೆ ದರ್ಶನ್ ಸೇರಿದಂತೆ ಪ್ರಮುಖ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದರು.
ಅರ್ಜಿಯಲ್ಲಿ ಕರಾಳ ಸತ್ಯ ಬಿಚ್ಚಿಟ್ಟ ಪ್ರದೋಶ್!
ಸಾಕ್ಷಿಯಾಗಲು ಕೋರ್ಟ್ಗೆ ನೀಡಿದ ಅರ್ಜಿಯಲ್ಲಿ ಪ್ರದೋಶ್, ಆ ದಿವಸ ನಡೆದ ಭೀಕರ ಕೃತ್ಯದ ಸಂಪೂರ್ಣ ವಿವರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ.
- ಅಮಾನವೀಯ ಹಲ್ಲೆ: ರೇಣುಕಾಸ್ವಾಮಿಯ ಕೈ-ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಲಾಠಿ ಮತ್ತು ಪೈಪ್ಗಳಿಂದ ಬೆನ್ನು ಹಾಗೂ ತಲೆಗೆ ತೀವ್ರವಾಗಿ ಹೊಡೆಯಲಾಯಿತು. ಆತ ಯಾತನೆಯಿಂದ ಕುಡಿಯಲು ನೀರು ಕೇಳಿದರೂ ನೀಡದೆ ಅಮಾನವೀಯವಾಗಿ ಹಿಂಸಿಸಲಾಯಿತು.
- ಸಿಗರೇಟ್ನಿಂದ ಸುಟ್ಟ ದರ್ಶನ್: ಹಲ್ಲೆ ನಡೆಸುವ ವೇಳೆ ನಟ ದರ್ಶನ್ ರೇಣುಕಾಸ್ವಾಮಿಯ ದೇಹದ ಸೂಕ್ಷ್ಮ ಭಾಗಗಳಿಗೆ ಉರಿಯುವ ಸಿಗರೇಟ್ನಿಂದ ಸುಟ್ಟು ತೀವ್ರ ಯಾತನೆ ನೀಡಿದರು ಎಂದು ಪ್ರದೋಶ್ ಉಲ್ಲೇಖಿಸಿದ್ದಾನೆ.
- ದರ್ಶನ್ ಆತ್ಮಹತ್ಯೆ ಬೆದರಿಕೆ: ತಾನು ಹಲ್ಲೆಯನ್ನು ತಡೆಯಲು ಯತ್ನಿಸಿದರೂ ಗ್ಯಾಂಗ್ ತನ್ನ ಮಾತು ಕೇಳಲಿಲ್ಲ. ರೇಣುಕಾಸ್ವಾಮಿ ಅಸುನೀಡಿದ ಬಳಿಕ, ನಟ ದರ್ಶನ್ “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಬೆದರಿಸಿ, ಕೊಲೆಯ ನಿಂದನೆಯನ್ನು ತನ್ನ ಮೇಲೆ ಎಳೆದುಕೊಳ್ಳುವಂತೆ ಸೂಚಿಸಿದ್ದರು ಎಂದು ಪ್ರದೋಶ್ ಅರ್ಜಿಯಲ್ಲಿ ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.
ಪ್ರದೋಶ್ ನೀಡುತ್ತಿರುವ ಈ ಮಹತ್ವದ ಸಾಕ್ಷ್ಯವು ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ನಟ ದರ್ಶನ್ ಸೇರಿದಂತೆ ಇಡೀ ಗ್ಯಾಂಗ್ಗೆ ಕಾನೂನಾತ್ಮಕವಾಗಿ ದೊಡ್ಡ ಕಂಠಕವಾಗಿ ಪರಿಣಮಿಸಿದೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ರಸ್ತೆ ಅಪಘಾತ: ಖಾಸಗಿ ಬಸ್ ಉರುಳಿ ಬಿದ್ದು 8 ಮಂದಿ ದುರ್ಮರಣ, 10 ಜನರಿಗೆ ಗಂಭೀರ ಗಾಯ!
