TOP NEWS

Health: ಮಕ್ಕಳಲ್ಲಿ ಹೆಚ್ಚುತ್ತಿದೆ ಕರುಳಿನ ಉರಿಯೂತದ ಕಾಯಿಲೆ: ಬೆಂಗಳೂರಿನ ವೈದ್ಯರಿಂದ ಆತಂಕಕಾರಿ ಮಾಹಿತಿ!

Bengaluru Sees Alarmable Rise in Childhood Inflammatory Bowel Disease Doctors Warn Parents health

ಬೆಂಗಳೂರು: ಒಮ್ಮೆ ಭಾರತದಲ್ಲಿ ಅತ್ಯಂತ ಅಪರೂಪ ಎನ್ನಲಾಗಿದ್ದ ಮಕ್ಕಳ ಕರುಳಿನ ಉರಿಯೂತದ ಕಾಯಿಲೆ (Inflammatory Bowel Disease – IBD) ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ (Health) ಹೆಚ್ಚಾಗಿ ಕಂಡುಬರುತ್ತಿದೆ. ಕಳೆದ ಒಂದು ದಶಕದಿಂದ ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ ಎಂದು ರಾಜಧಾನಿಯ ತಜ್ಞ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ರೋಗದ ಕುರಿತು ಜನರಲ್ಲಿ ಹೆಚ್ಚುತ್ತಿರುವ ಅರಿವು, ಆಧುನಿಕ ತಪಾಸಣಾ ವ್ಯವಸ್ಥೆ ಹಾಗೂ ನೈಜ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಐದು ವರ್ಷಗಳಲ್ಲಿ ಹೆಚ್ಚಿದ ಕಾಯಿಲೆ

ಬೆಂಗಳೂರಿನ ಸ್ಮೈಲ್ಸ್ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯಲ್ಲಿ ಕಳೆದ ಆರೇ ತಿಂಗಳಲ್ಲಿ ಮಕ್ಕಳ ಐಬಿಡಿ ಪ್ರಕರಣಗಳಲ್ಲಿ ಶೇಕಡಾ 12 ರಷ್ಟು ಏರಿಕೆ ದಾಖಲಾಗಿದೆ. ಕಳೆದ ಐದು ವರ್ಷಗಳಲ್ಲಿ ಇಲ್ಲಿ ಸುಮಾರು 886 ಮಕ್ಕಳಿಗೆ ಈ ಕಾಯಿಲೆ ಇರುವುದು ದೃಢಪಟ್ಟಿದೆ. ಈ ಕುರಿತು ಮಾತನಾಡಿರುವ ಸಂಸ್ಥೆಯ ಸಂಸ್ಥಾಪಕ ಡಾ. ಸಿ.ಎಂ. ಪರಮೇಶ್ವರ, ಮಕ್ಕಳು ಅತಿಯಾಗಿ ಸಂಸ್ಕರಿಸಿದ ಆಹಾರ, ಸಕ್ಕರೆಯುಕ್ತ ಪಾನೀಯಗಳು ಹಾಗೂ ಪ್ಯಾಕ್ ಮಾಡಿದ ತಿಂಡಿಗಳನ್ನು ಸೇವಿಸುವುದು ಮತ್ತು ದೈಹಿಕ ಶ್ರಮ ಕಡಿಮೆಯಾಗಿ ಜೀರ್ಣಾಂಗವ್ಯೂಹದಲ್ಲಿನ ಬ್ಯಾಕ್ಟೀರಿಯಾಗಳ ಸಮತೋಲನ ಏರುಪೇರಾಗುತ್ತಿರುವುದು ಈ ಸಮಸ್ಯೆಗೆ ಕಾರಣ ಎಂದಿದ್ದಾರೆ. ರೇನ್ಬೋ ಮಕ್ಕಳ ಆಸ್ಪತ್ರೆಯ ಮಕ್ಕಳ ಜೀರ್ಣಾಂಗ ತಜ್ಞೆ ಡಾ. ಲಾವಣ್ಯ ಆರ್.ಪಿ. ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ಈ ಕಾಯಿಲೆ ಗಣನೀಯವಾಗಿ ಹೆಚ್ಚಿದ್ದು, ಇದೀಗ 6 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿಯೂ ‘ವೆರಿ-ಅರ್ಲಿ-ಆನ್ಸೆಟ್ ಐಬಿಡಿ’ ಕಾಣಿಸಿಕೊಳ್ಳುತ್ತಿದೆ ಎಂದಿದ್ದಾರೆ. ವೇಗದ ನಗರೀಕರಣ, ಬದಲಾದ ಜೀವನಶೈಲಿ ಹಾಗೂ ಮಾಲಿನ್ಯ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಸಾಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ಡಾ. ಶಿವಕುಮಾರ್ ಸಾಂಬರ್ಗಿ ಅವರ ಪ್ರಕಾರ, ನಗರ ಪ್ರದೇಶದ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಅವರು ವಾರಕ್ಕೆ ಕನಿಷ್ಠ 3 ರಿಂದ 4 ಶಂಕಿತ ಪ್ರಕರಣಗಳನ್ನು ನೋಡುತ್ತಿದ್ದಾರೆ. ಒಟ್ಟಾರೆ ಐಬಿಡಿ ಸಂತ್ರಸ್ತರ ಪೈಕಿ ಶೇಕಡಾ 25 ರಷ್ಟು ಜನರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

ಪೋಷಕರಿಗೆ ವೈದ್ಯರ ಎಚ್ಚರಿಕೆ

ಮಕ್ಕಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಹೊಟ್ಟೆನೋವು, ಕಾರಣವಿಲ್ಲದೆ ಕಾಡುವ ಭೇದಿ, ಮಲದಲ್ಲಿ ರಕ್ತ ಬೀಳುವುದು, ತೂಕ ಮತ್ತು ಹಸಿವು ಕಡಿಮೆಯಾಗುವುದು ಹಾಗೂ ನಿರೀಕ್ಷಿತ ಎತ್ತರ ಬೆಳೆಯದಿರುವುದನ್ನು ಪೋಷಕರು ಸಾಮಾನ್ಯ ಹೊಟ್ಟೆಯ ಸೋಂಕು ಎಂದು ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಇದೇ ವೇಳೆ, ಶಾಲಾ ಪರಿಸರದಲ್ಲಿ ಜಂಕ್ ಫುಡ್ ಮಾರಾಟಕ್ಕೆ ಕಡಿವಾಣ ಹಾಕಿ, ಮಕ್ಕಳಲ್ಲಿ ಪೌಷ್ಟಿಕ ಆಹಾರ ಹಾಗೂ ದೈಹಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ತಜ್ಞರು ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ಫ್ಯಾಟಿ ಲಿವರ್‌ಗೆ ನಡಿಗೆಯೇ ಮದ್ದು: ಯಕೃತ್ತಿನ ಆರೋಗ್ಯ ವೃದ್ಧಿಗೆ ವೈದ್ಯರ ಮಹತ್ವದ ಸಲಹೆ!

Leave a Reply

Your email address will not be published. Required fields are marked *