TOP NEWS

Sandalwood: ‘ಶಾಂತಿ ಕ್ರಾಂತಿ’ ರೀ-ರಿಲೀಸ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಡಿಮ್ಯಾಂಡ್: ಆದರೆ ವಾಸ್ತವ ಸ್ಥಿತಿ ಏನಿದೆ ಗೊತ್ತಾ?

sandalwood Social Media Hype vs Reality Will the Re Release of Shanti Kranti Backfire

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ (V Ravichandran) ನಿರ್ದೇಶಿಸಿ, ನಟಿಸಿದ್ದ ‘ಶಾಂತಿ ಕ್ರಾಂತಿ’ ಸಿನಿಮಾ (Shanti Kranti) 1991ರಲ್ಲೇ ತೆರೆಕಂಡಿದ್ದ ಅಪ್ಪಟ ಪ್ಯಾನ್ ಇಂಡಿಯಾ (Sandalwood) ಚಿತ್ರ. ಕೇವಲ ಭಾಷೆಗಳನ್ನು ಡಬ್ ಮಾಡದೆ, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಿಗೆ ತಕ್ಕಂತೆ ಬೇರೆ ಬೇರೆ ಸೂಪರ್ ಸ್ಟಾರ್‌ಗಳನ್ನು ಹಾಕಿ ಆ ಕಾಲದಲ್ಲೇ ಬರೋಬ್ಬರಿ 10 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನಲ್ಲಿ ಈ ಸಿನಿಮಾವನ್ನು ಶೂಟ್ ಮಾಡಲಾಗಿತ್ತು. ಸದ್ಯ ಈ ಐತಿಹಾಸಿಕ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ರೀ-ರಿಲೀಸ್ ಮಾಡಬೇಕು ಎನ್ನುವ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಆದರೆ, ಸೋಶಿಯಲ್ ಮೀಡಿಯಾ ಕ್ರೇಜ್‌ಗೂ ಮತ್ತು ಚಿತ್ರಮಂದಿರದ ವಾಸ್ತವದ ಪರಿಸ್ಥಿತಿಗೂ ಸಾಕಷ್ಟು ತಾರತಮ್ಯವಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಥಿಯೇಟರ್‌ಗೆ ಬರ್ತಾರಾ ಜನ?

ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ಗಳಲ್ಲಿ ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಮಾಡಬೇಕು ಎಂಬ ರೀಲ್ಸ್‌ ಮತ್ತು ಪೋಸ್ಟ್‌ಗಳಿಗೆ ಲಕ್ಷಾಂತರ ಲೈಕ್ಸ್ ಹಾಗೂ ವೀಕ್ಷಣೆಗಳು ಬರುತ್ತಿರುವುದು ನಿಜ. ಆದರೆ ಇಂಟರ್ನೆಟ್‌ನಲ್ಲಿ ಲೈಕ್ ಒತ್ತಿ ಸಂಭ್ರಮಿಸುವ ಫ್ಯಾನ್ಸ್ ಪೈಕಿ ಎಷ್ಟು ಜನರು ನಿಜವಾಗಿಯೂ ಹಣ ಕೊಟ್ಟು ಥಿಯೇಟರ್‌ಗೆ ಬರುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ, ಈ ಸಿನಿಮಾ ಈಗಾಗಲೇ ಯೂಟ್ಯೂಬ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಅಷ್ಟೇ ಅಲ್ಲದೆ ಟಿವಿಯಲ್ಲೂ ವಾರಕ್ಕೆ ಎರಡೆರಡು ಬಾರಿ ಪ್ರಸಾರವಾಗುತ್ತಿರುತ್ತದೆ. ಹೀಗಿರುವಾಗ ಇಂದಿನ ಕಾಲದಲ್ಲಿ ಜನ ತಮ್ಮ ಅರ್ಧ ದಿನದ ಸಮಯವನ್ನು ಮೀಸಲಿಟ್ಟು, ಟಿಕೆಟ್, ಪಾರ್ಕಿಂಗ್, ಪಾಪ್‌ಕಾರ್ನ್ ಅಂತ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿತ್ರಮಂದಿರಕ್ಕೆ ಬರುವುದು ತೀರಾ ವಿರಳ ಎನ್ನಬಹುದು.

ಮತ್ತೊಮ್ಮೆ ಲಕ್ಷಾಂತರ ರೂಪಾಯಿ ಹೂಡಿಕೆ ಅಸಾಧ್ಯ?

ಇನ್ನೊಂದೆಡೆ, ಹಳೆಯ ಸಿನಿಮಾವನ್ನು ಈಗಿನ ಕಾಲದ ಪ್ರೇಕ್ಷಕರಿಗೆ ಒಪ್ಪುವಂತೆ 4K ನೆಗೆಟಿವ್ ಕ್ಲೀನಿಂಗ್ ಮಾಡಿ, ಸೌಂಡ್ ಮಿಕ್ಸಿಂಗ್ ಸೇರಿದಂತೆ ತಾಂತ್ರಿಕವಾಗಿ ಸಿದ್ಧಪಡಿಸಿ ರೀ-ರಿಲೀಸ್ ಮಾಡಲು ಮತ್ತೊಮ್ಮೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ರೀ-ರಿಲೀಸ್ ಟ್ರೆಂಡ್ ನೋಡಿದರೆ ಹೂಡಿಕೆ ಮಾಡಿದ ಹಣ ವಾಪಸ್ ಬರುವುದು ಅನುಮಾನ ಎಂಬಂತಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ರೀ-ರಿಲೀಸ್ ಆದ ಸಿನಿಮಾಗಳಲ್ಲಿ ಶೇಕಡಾ 95ರಷ್ಟು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಥಿಯೇಟರ್ ಮುಂದೆ ಕಟೌಟ್ ಕಟ್ಟಿ ಸಂಭ್ರಮಿಸುವ ದೃಶ್ಯಗಳು ಕೇವಲ ಶೇಕಡಾ 2ರಷ್ಟು ಮಾತ್ರ ನಿಜವಿರುತ್ತದೆ. ಉಳಿದ ಶೇಕಡಾ 98ರಷ್ಟು ಪ್ರದರ್ಶನಗಳು ಹಾಗೂ ಥಿಯೇಟರ್‌ಗಳು ಖಾಲಿ ಉಳಿಯುತ್ತಿದ್ದು, ಚಿತ್ರಮಂದಿರದ ಬಾಡಿಗೆಯೂ ವಾಪಸ್ ಬರುತ್ತಿಲ್ಲ ಎನ್ನುವುದು ಕಹಿ ಸತ್ಯ.

ವಿಶೇಷವೆಂದರೆ, ಸ್ವತಃ ರವಿಚಂದ್ರನ್ ಅವರಿಗೆ ಈ ಸಿನಿಮಾ ಮಾಡುವಾಗಲೇ ಇದರ ಫಲಿತಾಂಶದ ಬಗ್ಗೆ ಎಲ್ಲೋ ಒಂದು ಕಡೆ ಅನುಮಾನವಿತ್ತು. ಆದರೂ ತಮ್ಮ ತಂದೆಯವರ ಸೂಚನೆಯ ಮೇರೆಗೆ ಹಾಗೂ ರಜನಿಕಾಂತ್, ನಾಗಾರ್ಜುನ ಅವರಂತಹ ದಕ್ಷಿಣ ಭಾರತದ ಸೂಪರ್ ಸ್ಟಾರ್‌ಗಳ ಕಾಲ್‌ಶೀಟ್ ವೃಥಾ ಆಗಬಾರದು ಎಂಬ ಒಂದೇ ಕಾರಣಕ್ಕೆ ಕಷ್ಟಪಟ್ಟು ಸಿನಿಮಾವನ್ನು ಪೂರ್ಣಗೊಳಿಸಿದ್ದರು. ಹೀಗಾಗಿ ಈಗಿನ ಸೋಶಿಯಲ್ ಮೀಡಿಯಾ ಟ್ರೆಂಡ್ ನೋಡಿ ಸಿನಿಮಾ ರೀ-ರಿಲೀಸ್ ಮಾಡಲು ಮುಂದಾದರೆ ವಿತರಕರಿಗೆ ಭಾರಿ ನಷ್ಟ ಕಾಯಂ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಮುಂಜಾನೆ ಶೋಗಳ ಅಬ್ಬರ: ಯಶ್ ಚಿತ್ರದ ರಿಲೀಸ್ ಪ್ಲಾನ್ ಇಲ್ಲಿದೆ!

Leave a Reply

Your email address will not be published. Required fields are marked *