TOP NEWS

Udayanidhi Stalin: ಉದಯನಿಧಿ ಸ್ಟಾಲಿನ್ ಬಂಧನ ವಿವಾದ: ವಿಪಕ್ಷ ನಾಯಕನಿಗೆ ‘ಸ್ಟೇಷನ್ ಬೈಲ್’ ನೀಡಲು ಹೈಕೋರ್ಟ್ ಆದೇಶ

Trisha Remark Case Madras High Court Orders Station Bail for Udhayanidhi Stalin

ಚೆನ್ನೈ: ನಟಿ ತ್ರಿಷಾ ಕುರಿತು ಸಾರ್ವಜನಿಕ ಸಭೆಯಲ್ಲಿ ಆಕ್ಷೇಪಾರ್ಹ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udayanidhi Stalin) ಅವರಿಗೆ ಮದ್ರಾಸ್ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಉದಯನಿಧಿ ಅವರನ್ನು ತಕ್ಷಣವೇ ಪೊಲೀಸ್ ಠಾಣೆ ಜಾಮೀನಿನ (ಸ್ಟೇಷನ್ ಬೈಲ್) ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಮಂಗಳವಾರ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿದೆ.

ಏನಿದು ಪ್ರಕರಣ?

ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ವಿರುದ್ಧ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ನೀಡಿದ್ದ ಹೇಳಿಕೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಸಿಎಂ ವಿಜಯ್ ಮತ್ತು ನಟಿ ತ್ರಿಷಾ ನಡುವಿನ ಸ್ನೇಹವನ್ನು ಪರೋಕ್ಷವಾಗಿ ನಿಂದಿಸುವ ರೀತಿಯಲ್ಲಿ ಉದಯನಿಧಿ ಮಾತನಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹೇಳಿಕೆಗೆ ರಾಜ್ಯದ ವಿವಿಧ ರಾಜಕೀಯ ಪಕ್ಷಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಈ ಕುರಿತು ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌ಗೆ ತಮಿಳುನಾಡು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಮಾಹಿತಿ ನೀಡಿ, ತಂಜಾವೂರು ಪೊಲೀಸರು ಉದಯನಿಧಿ ಅವರನ್ನು ಬಂಧಿಸಿ ತಂಜಾವೂರಿಗೆ ಕರೆದೊಯ್ದಿದ್ದಾರೆ ಎಂದು ತಿಳಿಸಿದರು. ಆದರೆ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಉದ್ದೇಶ ಪೊಲೀಸರಿಗಿಲ್ಲ, ಕೇವಲ ವಿಚಾರಣೆ ನಡೆಸಿ ಠಾಣೆಯಲ್ಲೇ ಜಾಮೀನು ನೀಡಿ ಬಿಡುಗಡೆ ಮಾಡಲಾಗುವುದು ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು. ಸರ್ಕಾರದ ಈ ಸ್ಪಷ್ಟನೆಯ ಬೆನ್ನಲ್ಲೇ ಹೈಕೋರ್ಟ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತು.

ನನ್ನ ಬಂಧಿಸಿದ್ದು ಒಂದು ಜೋಕ್

ಚೆನ್ನೈ: ತಮಿಳುನಾಡಿನ ರಾಜಕೀಯ ರಂಗದಲ್ಲಿ ಮಂಗಳವಾರ ಮುಂಜಾನೆ ದಿಢೀರ್ ಹೈಡ್ರಾಮಾ ನಡೆದಿದ್ದು, ಚಲನಚಿತ್ರ ನಟಿ ತ್ರಿಷಾ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಅವರ ಮನೆಯಲ್ಲೇ ಬಂಧಿಸಿದ್ದಾರೆ. ಪೊಲೀಸ್ ವಾಹನ ಹತ್ತುವಾಗ ಅತ್ಯಂತ ಹಗುರವಾಗಿ ನಗುತ್ತಲೇ ಪ್ರತಿಕ್ರಿಯಿಸಿದ ಉದಯನಿಧಿ, “ನನ್ನನ್ನು ಅರೆಸ್ಟ್ ಮಾಡಿರೋದು ಒಂದು ದೊಡ್ಡ ಜೋಕ್” ಎಂದು ಚೇಷ್ಟೆ ಮಾಡಿದ್ದಲ್ಲದೆ, ಈ ಪ್ರಕರಣವನ್ನು ನ್ಯಾಯಾಲಯದಲ್ಲಿಯೇ ಕಾನೂನಾತ್ಮಕವಾಗಿ ಎದುರಿಸುವುದಾಗಿ ಸವಾಲು ಹಾಕಿದ್ದಾರೆ.

ಘಟನೆಯ ಸಂಪೂರ್ಣ ವಿವರ ತಂಜಾವೂರಿನಲ್ಲಿ ಕಾವೇರಿ ನೀರಾವರಿ ಸಮಸ್ಯೆಗೆ ಸಂಬಂಧಿಸಿದಂತೆ ನಡೆದ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಉದಯನಿಧಿ ಭಾಗವಹಿಸಿದ್ದರು. ಈ ವೇಳೆ ಅವರು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಸರ್ಕಾರದ ವೈಫಲ್ಯಗಳನ್ನು ಕಟುವಾಗಿ ಟೀಕಿಸುತ್ತಿದ್ದಾಗ, ಸಭಿಕರ ಸಾಲಿನಿಂದ ಕೆಲವರು ನಟಿ ತ್ರಿಷಾ ಅವರ ಹೆಸರನ್ನು ಕೂಗಿದ್ದರು. ಅದಕ್ಕೆ ಪ್ರತಿಯಾಗಿ ಉದಯನಿಧಿ ನೀಡಿದ ಕೆಲ ದ್ವಂದ್ವಾರ್ಥದ ಮಾತುಗಳು ನಟಿಯನ್ನು ನಿಂದಿಸುವಂತಿದ್ದವು ಎಂಬ ಆರೋಪ ಕೇಳಿಬಂದಿದೆ. ಈ ಭಾಷಣದ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.

ರಾಜಕೀಯ ಕೆಸರೆರಚಾಟ ಮತ್ತು ಆಕ್ರೋಶ ಉದಯನಿಧಿ ಅವರ ಈ ನಿಲುವಿಗೆ ಆಡಳಿತಾರೂಢ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಹಾಗೂ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯೊಬ್ಬರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿರುವ ಟಿವಿಕೆ ನಾಯಕರು, ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. “ಇದು ಯಾವುದೇ ರಾಜಕೀಯ ದ್ವೇಷದ ಬಂಧನವಲ್ಲ, ಬದಲಿಗೆ ಮಹಿಳೆಗೆ ಮಾಡಿದ ಅಪಮಾನಕ್ಕೆ ಸಿಕ್ಕ ಶಿಕ್ಷೆ” ಎಂದು ಟಿವಿಕೆ ಸ್ಪಷ್ಟಪಡಿಸಿದೆ.

ಮತ್ತೊಂದೆಡೆ, ಉದಯನಿಧಿ ಬೆಂಬಲಕ್ಕೆ ನಿಂತಿರುವ ಡಿಎಂಕೆ ನಾಯಕರು, “ಅವರು ಯಾವುದೇ ನಟಿಯ ಹೆಸರನ್ನು ಉಲ್ಲೇಖಿಸಿಲ್ಲ, ಕೇವಲ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಿದ್ದಾರೆ. ಸರ್ಕಾರವು ಸಣ್ಣ ವಿಷಯವನ್ನು ದೊಡ್ಡದು ಮಾಡಿ ರಾಜಕೀಯ ಹೂ ಸಂಚು ನಡೆಸುತ್ತಿದೆ” ಎಂದು ಖಂಡಿಸಿದ್ದಾರೆ. ವಿಪಕ್ಷ ನಾಯಕನ ಬಂಧನದ ಬೆನ್ನಲ್ಲೇ ತಮಿಳುನಾಡಿನಾದ್ಯಂತ ಡಿಎಂಕೆ ಕಾರ್ಯಕರ್ತರು ರಸ್ತೆಗಿಳಿದಿದ್ದು, ಹಲವೆಡೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಮೋದಿ ಸರ್ಕಾರದ ಎಥನಾಲ್ ನೀತಿ ವಿರುದ್ಧ ಆಪ್ ಸಮರ: ಸಂತ್ರಸ್ತ ವಾಹನ ಮಾಲೀಕರೊಂದಿಗೆ ಪ್ರಧಾನಿ ಕಚೇರಿಗೆ ಮುತ್ತಿಗೆ

Leave a Reply

Your email address will not be published. Required fields are marked *