TOP NEWS

Art of Living: ಆರ್ಟ್ ಆಫ್ ಲಿವಿಂಗ್‌ಗೆ ರಾಜ್ಯ ಸರ್ಕಾರ ಬಿಗ್ ಶಾಕ್: ನೂರಾರು ಎಕರೆ ಭೂ ಒತ್ತುವರಿ ಆರೋಪದ ತನಿಖೆಗೆ ಹಿರಿಯ ಐಎಎಸ್ ಅಧಿಕಾರಿ ನೇತೃತ್ವದ ಎಸ್‌ಐಟಿ ರಚನೆ!

Art of Living Welcomes Governments SIT Probe into Alleged Encroachment of Government Land

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದ ಕಗ್ಗಲಿಪುರ ವ್ಯಾಪ್ತಿಯಲ್ಲಿ ‘ದಿ ಆರ್ಟ್ ಆಫ್ ಲಿವಿಂಗ್’ (Art of Living) ಆಶ್ರಮ ಹಾಗೂ ಅದರ ಅಂಗಸಂಸ್ಥೆಗಳು ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಕಾನೂನುಬಾಹಿರವಾಗಿ ಅತಿಕ್ರಮಣ ಮಾಡಿಕೊಂಡಿರುವ ಗಂಭೀರ ದೂರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ಆಳ-ಅಗಲವನ್ನು ಕೆದಕಲು ರಾಜ್ಯ ಸರ್ಕಾರವು ಹಿರಿಯ ಐಎಎಸ್ ಅಧಿಕಾರಿ ನೇತೃತ್ವದಲ್ಲಿ 11 ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಆದೇಶಿಸಿದೆ. ಕಂದಾಯ ಇಲಾಖೆಯು ಈ ಕುರಿತು ಜುಲೈ 17 ರಂದು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಕೇವಲ ಮೂರು ತಿಂಗಳ ಗಡುವಿನೊಳಗೆ ಸಂಪೂರ್ಣ ತನಿಖೆ ನಡೆಸಿ ಸಮಗ್ರ ವರದಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಪ್ರಾದೇಶಿಕ ಆಯುಕ್ತರ ವರದಿಯನ್ನು ಆಧರಿಸಿ ಸರ್ಕಾರ ಈ ತನಿಖೆಗೆ ಮುಂದಾಗಿದೆ.

ಗುತ್ತಿಗೆ ನಿಯಮಗಳ ಸ್ಪಷ್ಟ ಉಲ್ಲಂಘನೆ

1981ರಲ್ಲಿ ಅಸ್ತಿತ್ವಕ್ಕೆ ಬಂದ ಶ್ರೀ ಶ್ರೀ ರವಿಶಂಕರ್ ಅವರ ‘ದಿ ಆರ್ಟ್ ಆಫ್ ಲಿವಿಂಗ್’ ಟ್ರಸ್ಟ್ ಮತ್ತು ಅದರ ಅಡಿಯಲ್ಲಿ ಬರುವ ವೇದವಿಜ್ಞಾನ ಮಹಾ ವಿದ್ಯಾಪೀಠ, ಸುಮೇರು ರಿಯಾಲ್ಟಿ ಸೇರಿದಂತೆ ವಿವಿಧ ಅಂಗಸಂಸ್ಥೆಗಳು ಕಗ್ಗಲಿಪುರ, ಬಿ.ಎಂ. ಕಾವಲ್, ಅಗ್ರ ಹಾಗೂ ಉತ್ತರಿ ಗ್ರಾಮಗಳ ಸರ್ವೇ ನಂಬರ್ 46ರ ಸುತ್ತಮುತ್ತಲಿನ ನೂರಾರು ಎಕರೆ ಸರ್ಕಾರಿ ಆಸ್ತಿಯನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಒತ್ತುವರಿ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. 1985ರಲ್ಲಿ ಸಂಸ್ಥೆಗೆ ವಾರ್ಷಿಕ ಕೇವಲ 500 ರೂಪಾಯಿ ದರದಲ್ಲಿ 41 ಎಕರೆ ಗೋಮಾಳ ಜಮೀನನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಈ ಲೀಸ್ ಅವಧಿಯು 2015ರಲ್ಲೇ ಮುಗಿದಿದ್ದರೂ, ಭೂಮಿಯನ್ನು ಸರ್ಕಾರದ ವಶಕ್ಕೆ ನೀಡದೆ ಅಲ್ಲಿ ದೊಡ್ಡ ದೊಡ್ಡ ಶಾಶ್ವತ ಕಟ್ಟಡಗಳನ್ನು ತಲೆಎತ್ತಿ ನಿಲ್ಲಿಸಿರುವುದು ಗುತ್ತಿಗೆ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.

ಈ ವಿಷಯವಾಗಿ ವಿಧಾನಸೌಧದಲ್ಲಿ ಮಾಹಿತಿ ನೀಡಿರುವ ಕಂದಾಯ ಸಚಿವ ಜಿ. ಪರಮೇಶ್ವರ್, ಸಂಸ್ಥೆಯ ನಿಯಂತ್ರಣದಲ್ಲಿರುವ ಒಟ್ಟು 270 ಎಕರೆ ಜಮೀನಿನ ಪೈಕಿ ಸುಮಾರು 150 ಎಕರೆಯಷ್ಟು ಭೂಮಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಸಮುದಾಯಕ್ಕೆ ಸೇರಿದ್ದಾಗಿದೆ ಎಂದು ದಲಿತ ಸಂಘಟನೆಗಳು ಗಂಭೀರ ಆರೋಪ ಮಾಡಿವೆ ಎಂದಿದ್ದಾರೆ. ಈ ಹಿಂದೆ ಹೈಕೋರ್ಟ್ ಆದೇಶದಂತೆ 2025ರ ಅಕ್ಟೋಬರ್‌ನಲ್ಲಿ ನಡೆದಿದ್ದ ಜಂಟಿ ಸರ್ವೇಯಲ್ಲೂ ಸಹ, ಮಂಜೂರಾದ ಉದ್ದೇಶ ಬಿಟ್ಟು ಬೇರೆ ಕಾರ್ಯಗಳಿಗೆ ಭೂಮಿ ಬಳಕೆಯಾಗಿರುವುದು ಮತ್ತು ನಿಯಮ ಉಲ್ಲಂಘನೆಯಾಗಿರುವುದು ಪತ್ತೆಯಾಗಿತ್ತು. ಈ ವರ್ಷದ ಮಾರ್ಚ್ ತಿಂಗಳಲ್ಲಿ ಹೈಕೋರ್ಟ್ ಶ್ರೀ ಶ್ರೀ ರವಿಶಂಕರ್ ಅವರ ವಿರುದ್ಧದ ವೈಯಕ್ತಿಕ ಎಫ್‌ಐಆರ್ ಅನ್ನು ರದ್ದುಗೊಳಿಸಿದ್ದರೂ, ಪ್ರಸ್ತುತ ಸರ್ಕಾರವು ವ್ಯಕ್ತಿಗತ ಆರೋಪಗಳಿಗಿಂತ ಹೆಚ್ಚಾಗಿ ಸರ್ಕಾರಿ ಆಸ್ತಿ, ರಾಜಕಾಲುವೆ, ಕೆರೆ ಹಾಗೂ ನೈಸರ್ಗಿಕ ಜಲಮೂಲಗಳ ಅತಿಕ್ರಮಣದ ತನಿಖೆಗಾಗಿ ಕಂದಾಯ ಕಾಯ್ದೆಯಡಿ ಈ ವಿಶೇಷ ತಂಡವನ್ನು ಅಖಾಡಕ್ಕಿಳಿಸಿದೆ.

ಹಿರಿಯ ಐಎಎಸ್ ಅಧಿಕಾರಿ ಹಾಗೂ ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಅಮ್ಲನ್ ಆದಿತ್ಯ ಬಿಸ್ವಾಸ್ ನೇತೃತ್ವದ ಈ ಎಸ್‌ಐಟಿ ತಂಡದಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್ ಗದ್ಯಾಲ್, ಜಿಲ್ಲಾಧಿಕಾರಿ ಜಯಮಾಧವ್, ತಹಸೀಲ್ದಾರ್ ಕಲೀಮುಲ್ಲಾ ಸೇರಿದಂತೆ ದಕ್ಷ ಅಧಿಕಾರಿಗಳು ಹಾಗೂ ಕಾನೂನು ತಜ್ಞರಿದ್ದಾರೆ. ಈ ಸಮಿತಿಗೆ ಸರ್ಕಾರ ವಿಸ್ತಾರವಾದ ಜವಾಬ್ದಾರಿಗಳನ್ನು ವಹಿಸಿದೆ. ಭೂ ದಾಖಲೆಗಳ ಅಸಲಿಯತ್ತು ಪರಿಶೀಲನೆ, ನಕಲಿ ದಸ್ತಾವೇಜುಗಳ ಪತ್ತೆ ಹಚ್ಚುವಿಕೆ ಮಾತ್ರವಲ್ಲದೆ, ಇಸ್ರೋ (ISRO) ನೆರವಿನೊಂದಿಗೆ ಉಪಗ್ರಹ ದತ್ತಾಂಶಗಳನ್ನು (Satellite Data) ಬಳಸಿ ಆಶ್ರಮದ ಆವರಣದಲ್ಲಿ ಆಗಿರುವ ನೈಸರ್ಗಿಕ ಹಾನಿಯನ್ನು ಅಳೆಯಲು ಸೂಚಿಸಲಾಗಿದೆ. ಅಲ್ಲದೆ, ರಾಜಕಾಲುವೆ, ಗುಡ್ಡ ಹಾಗೂ ಕೆರೆಗಳ ಒತ್ತುವರಿಯನ್ನು ಗುರುತಿಸಿ ವರದಿ ಸಿದ್ಧಪಡಿಸಬೇಕಿದೆ. ಇದೇ ವೇಳೆ, ಆರೋಪ ಎದುರಿಸುತ್ತಿರುವ ಸಂಸ್ಥೆಗೆ ಸಮನ್ಸ್ ಜಾರಿ ಮಾಡಿ ಅವರ ವಾದ ಆಲಿಸಲು ನ್ಯಾಯಸಮ್ಮತ ಅವಕಾಶವನ್ನೂ ನೀಡಲಾಗುತ್ತದೆ.

ತನಿಖಾ ಆದೇಶವನ್ನು ಸ್ವಾಗತಿಸಿದ ಸಂಸ್ಥೆ

ಸರ್ಕಾರದ ಈ ಹಠಾತ್ ತನಿಖಾ ಆದೇಶವನ್ನು ‘ದಿ ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯು ಸಕಾರಾತ್ಮಕವಾಗಿ ಸ್ವಾಗತಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಥೆಯ ವಕ್ತಾರರು, ಸರ್ಕಾರದ ಎಸ್‌ಐಟಿ ತನಿಖೆಯ ನಿರ್ಧಾರವನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ. ಈ ನಿಷ್ಪಕ್ಷಪಾತ ತನಿಖೆಯಿಂದ ಸತ್ಯ ಏನೆಂಬುದು ಇಡೀ ಜಗತ್ತಿಗೆ ತಿಳಿಯಲಿದೆ ಹಾಗೂ ಹಲವು ವರ್ಷಗಳಿಂದ ಸುಖಾಸುಮ್ಮನೆ ಎದ್ದಿರುವ ಈ ಭೂ ವಿವಾದಕ್ಕೆ ಒಂದು ನಿರ್ಣಾಯಕ ಮತ್ತು ಶಾಶ್ವತ ಪರಿಹಾರ ಸಿಗಲಿದೆ ಎಂಬ ಸಂಪೂರ್ಣ ನಂಬಿಕೆ ತಮಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:  ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಯಮ ಉಲ್ಲಂಘಿಸಿದರೆ ಬೀಳಲಿದೆ ಶೇ. 400 ರಷ್ಟು ಭಾರಿ ದಂಡ!

Leave a Reply

Your email address will not be published. Required fields are marked *