TOP NEWS

BMRCL: ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಯಮ ಉಲ್ಲಂಘಿಸಿದರೆ ಬೀಳಲಿದೆ ಶೇ. 400 ರಷ್ಟು ಭಾರಿ ದಂಡ!

Attention Namma Metro Passengers Fines Hiked by 400 for Rule Violations

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ! ಮೆಟ್ರೋ ನಿಲ್ದಾಣಗಳು ಹಾಗೂ ರೈಲುಗಳ ಆವರಣದಲ್ಲಿ ಭದ್ರತೆಯನ್ನು ಬಲಪಡಿಸಲು ಮತ್ತು ಶಿಸ್ತು ಕಾಪಾಡಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮಹತ್ವದ ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಲು ದಂಡದ ಪ್ರಮಾಣವನ್ನು ಏಕಾಏಕಿ ಶೇಕಡಾ 400 ರಷ್ಟು ಹೆಚ್ಚಿಸಲಾಗಿದ್ದು, ಈ ನೂತನ ನಿಯಮಗಳು ಭಾನುವಾರದಿಂದಲೇ ಅನುಷ್ಠಾನಕ್ಕೆ ಬಂದಿವೆ. ಮೆಟ್ರೋ ಆಸ್ತಿಯ ರಕ್ಷಣೆ ಹಾಗೂ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೊಸ ಆದೇಶದ ಪ್ರಕಾರ, ಅತ್ಯಂತ ಅಪಾಯಕಾರಿ ಅಪರಾಧ ಎಂದು ಪರಿಗಣಿಸಲಾಗಿರುವ ಮೆಟ್ರೋ ಹಳಿ (Track) ಪ್ರವೇಶಿಸುವ ಪ್ರವೃತ್ತಿಗೆ ಬ್ರೇಕ್ ಹಾಕಲು ಕಠಿಣ ಕ್ರಮ ಜರುಗಿಸಲಾಗಿದೆ. ಈ ಮುಂಚೆ ಇದ್ದ ದಂಡದ ಮೊತ್ತವನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದ್ದು, ನಿಯಮ ಮೀರಿ ಟ್ರ್ಯಾಕ್ ಒಳಗಿಳಿದರೆ ಬರೋಬ್ಬರಿ 20,000 ರೂಪಾಯಿ ದಂಡ ತೆರಬೇಕಾಗುತ್ತದೆ.

ಮೆಟ್ರೋ ಟ್ರ್ಯಾಕ್ ಪ್ರವೇಶ ಮಾಡಿದರೆ ವಿಧಿಸುವ ದಂಡದ ಮೊತ್ತ ಎಷ್ಟು?:

  • [ ] 10,000 ರೂಪಾಯಿ
  • [ ] 2,500 ರೂಪಾಯಿ
  • [x] 20,000 ರೂಪಾಯಿ
  • [ ] 5,000 ರೂಪಾಯಿ

ಮೊಬೈಲ್ ಕಿರಿಕಿರಿ ಹಾಗೂ ಅಸಭ್ಯ ವರ್ತನೆಗೆ ಬೀಳಲಿದೆ ಭಾರಿ ದಂಡ: ಮೆಟ್ರೋ ಆವರಣದಲ್ಲಿ ಸಾರ್ವಜನಿಕರಿಗೆ ಮುಕ್ತವಲ್ಲದ ನಿಷೇಧಿತ ಪ್ರದೇಶಗಳಿಗೆ ಅಕ್ರಮವಾಗಿ ಪ್ರವೇಶಿಸಿದರೆ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಅದೇ ರೀತಿ ದೇವಸ್ಥಾನ ಅಥವಾ ಮೆಟ್ರೋ ಆವರಣದಲ್ಲಿ ಅನುಮತಿ ಇಲ್ಲದೆ ಪ್ರತಿಭಟನೆ ಮಾಡುವುದು, ರ್ಯಾಲಿ ನಡೆಸುವುದು, ಪೋಸ್ಟರ್ ಅಂಟಿಸುವುದು ಹಾಗೂ ಮೆಟ್ರೋ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸುವ ಕೃತ್ಯಗಳಿಗೆ 10,000 ಸಾವಿರ ರೂಪಾಯಿ ದಂಡ ಫಿಕ್ಸ್ ಮಾಡಲಾಗಿದೆ. ಇನ್ನು ರೈಲಿನೊಳಗೆ ಸಹಪ್ರಯಾಣಿಕರಿಗೆ ತೊಂದರೆಯಾಗುವಂತೆ ಹೆಡ್‌ಫೋನ್ ಬಳಸದೆ ಮೊಬೈಲ್‌ನಲ್ಲಿ ಜೋರಾಗಿ ವಿಡಿಯೋ ನೋಡುವುದು, ಅಸಭ್ಯವಾಗಿ ವರ್ತಿಸುವುದು, ಮದ್ಯ ಸೇವನೆ ಹಾಗೂ ಕಾನೂನುಬಾಹಿರ ಸಾಹಿತ್ಯ ತರುವುದಕ್ಕೆ ಇದುವರೆಗೆ ಇದ್ದ 500 ರೂಪಾಯಿ ದಂಡವನ್ನು ಈಗ ಐದು ಪಟ್ಟು ಹೆಚ್ಚಿಸಿ 2,500 ರೂಪಾಯಿ ಮಾಡಲಾಗಿದೆ.

ಟಿಕೆಟ್ ಅಕ್ರಮಗಳಿಗೆ ಶೇ.400 ರಷ್ಟು ದಂಡ ಹೆಚ್ಚಳ: ಟಿಕೆಟ್ ದರ ವಂಚನೆ ಹಾಗೂ ದುರುಪಯೋಗಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಕಠಿಣ ಎಚ್ಚರಿಕೆ ನೀಡಿದೆ. ನಕಲಿ ಟಿಕೆಟ್ ಬಳಸಿ ಪ್ರಯಾಣಿಸುವುದು, ಟಿಕೆಟ್‌ನಲ್ಲಿ ತಿದ್ದುಪಡಿ ಮಾಡುವುದು ಅಥವಾ ಇತರರಿಗೆ ವರ್ಗಾಯಿಸುವ ತಪ್ಪುಗಳಿಗೆ ಗರಿಷ್ಠ 20,000 ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ. ಇನ್ನು ನಕಲಿ ಟಿಕೆಟ್ ಮೂಲಕ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದರೆ 5,000 ರೂಪಾಯಿ ಹಾಗೂ ಟಿಕೆಟ್‌ಗೆ ಸಂಬಂಧಿಸಿದ ಇತರೆ ಗಂಭೀರ ಅಪರಾಧಗಳಿಗೆ ಗರಿಷ್ಠ 25,000 ರೂಪಾಯಿವರೆಗೂ ದಂಡ ವಿಧಿಸಲು ಹೊಸ ನಿಯಮಾವಳಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಮೇಲ್ಮನವಿಗೆ ಸಿಗಲಿದೆ 30 ದಿನಗಳ ಕಾಲಾವಕಾಶ: ಹೊಸ ನಿಯಮಾವಳಿಗಳ ಪ್ರಕಾರ, ಬಿಎಂಆರ್‌ಸಿಎಲ್ ದೀರ್ಘಾವಧಿಯ ಕಾನೂನು ಪ್ರಕ್ರಿಯೆ ಅಥವಾ ನ್ಯಾಯಾಲಯದ ಅಲೆದಾಟವನ್ನು ತಪ್ಪಿಸಲು ಮಹತ್ವದ ಆಡಳಿತಾತ್ಮಕ ಬದಲಾವಣೆ ತಂದಿದೆ. ನಿಯಮ ಉಲ್ಲಂಘನೆ ಪತ್ತೆಯಾದ ತಕ್ಷಣವೇ ಸ್ಥಳದಲ್ಲೇ ತನಿಖೆ ನಡೆಸಿ ದಂಡ ವಿಧಿಸುವ ವಿಶೇಷ ಅಧಿಕಾರವನ್ನು ಸ್ಟೇಷನ್ ಅಧಿಕಾರಿಗಳಿಗೆ ನೀಡಲಾಗಿದೆ. ಒಂದು ವೇಳೆ ಅಧಿಕಾರಿಗಳು ತಪ್ಪಾಗಿ ಅಥವಾ ಅನ್ಯಾಯವಾಗಿ ದಂಡ ವಿಧಿಸಿದ್ದಾರೆ ಎಂದು ಪ್ರಯಾಣಿಕರಿಗೆ ಅನಿಸಿದರೆ, ಅದನ್ನು ಪ್ರಶ್ನಿಸಿ ಉನ್ನತಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅರ್ಜಿಗಳನ್ನು ಪರಿಶೀಲಿಸುವ ಉನ್ನತ ಮಟ್ಟದ ಸಮಿತಿಯು 60 ದಿನಗಳ ಒಳಗಾಗಿ ಸೂಕ್ತ ಪರಿಹಾರ ಒದಗಿಸಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದಶಕಗಳ ಠಿಕಾಣಿಗೆ ಬ್ರೇಕ್: ಗಣಿ ಇಲಾಖೆಯ ಶೇ. 80ರಷ್ಟು ಸಿಬ್ಬಂದಿಗೆ ಎತ್ತಂಗಡಿ ಭಾಗ್ಯ, ಅಧಿಕಾರಿಗಳು ಶಾಕ್!

Leave a Reply

Your email address will not be published. Required fields are marked *