TOP NEWS

DK Shivakumar: ದಶಕಗಳ ಠಿಕಾಣಿಗೆ ಬ್ರೇಕ್: ಗಣಿ ಇಲಾಖೆಯ ಶೇ. 80ರಷ್ಟು ಸಿಬ್ಬಂದಿಗೆ ಎತ್ತಂಗಡಿ ಭಾಗ್ಯ, ಅಧಿಕಾರಿಗಳು ಶಾಕ್!

Karnataka Mining Department Shaken Up 80% Staff Shunted as CM Approves Mega Transfer of 160 Officers

ಬೆಂಗಳೂರು: ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ದೀರ್ಘಕಾಲದಿಂದ ಮನೆಮಾಡಿದ್ದ ಏಕಸ್ವಾಮ್ಯಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಭಾರಿ ಆಡಳಿತಾತ್ಮಕ ಚಾಟಿ ಬೀಸಿದ್ದಾರೆ. ಒಂದೇ ಸ್ಥಳದಲ್ಲಿ ವರ್ಷಗಟ್ಟಲೆ ಠಿಕಾಣಿ ಹೂಡಿದ್ದ ಇಲಾಖೆಯ ಶೇಕಡಾ 80 ರಷ್ಟು ಸಿಬ್ಬಂದಿಯನ್ನು ಎತ್ತಂಗಡಿ ಮಾಡುವ ಮೂಲಕ ಸರ್ಕಾರ ಬೃಹತ್ ಸರ್ಜರಿ ನಡೆಸಿದೆ. ಇಲಾಖೆಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಾದರಿಯಲ್ಲಿ ಒಟ್ಟು 160 ಅಧಿಕಾರಿಗಳನ್ನು ಏಕಕಾಲಕ್ಕೆ ವರ್ಗಾವಣೆ ಮಾಡಲಾಗಿದ್ದು, ಇದರಲ್ಲಿ 131 ಭೂವಿಜ್ಞಾನಿಗಳು, 23 ಹಿರಿಯ ಭೂವಿಜ್ಞಾನಿಗಳು ಹಾಗೂ 6 ಉಪನಿರ್ದೇಶಕರು ಸೇರಿದ್ದಾರೆ. ತಮ್ಮ ಸ್ವಂತ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲೇ ದಶಕಗಳಿಂದ ಠಿಕಾಣಿ ಹೂಡಿದ್ದ ಅಧಿಕಾರಿಗಳಿಗೆ ಈ ಆದೇಶ ಅಕ್ಷರಶಃ ಶಾಕ್ ನೀಡಿದೆ.

ಜನರಿಂದ ಬಂದಿದ್ದ ಸಾಲು ಸಾಲು ದೂರು

ಇಲಾಖೆಯ ಪ್ರಮುಖ ಅಧಿಕಾರಿಗಳು ದೀರ್ಘಕಾಲದಿಂದ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವುದರಿಂದ ಸ್ಥಳೀಯವಾಗಿ ಸ್ವಹಿತಾಸಕ್ತಿಗಳು ಬೆಳೆದು, ಇಲಾಖೆಯ ಘನತೆಗೆ ಕುಂದು ಬರುತ್ತಿದೆ ಎಂಬ ಸಾರ್ವಜನಿಕ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದ ಪ್ರಭಾವವನ್ನು ಸಂಪೂರ್ಣವಾಗಿ ಮುರಿಯಲು, ಸಾಂಖ್ಯಿಕ ಅಕ್ರಮಗಳಿಗೆ ಬ್ರೇಕ್ ಹಾಕಲು ಹಾಗೂ ಪಾರದರ್ಶಕ ಆಡಳಿತವನ್ನು ತರಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ನಿಯೋಜಿತ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸರ್ಕಾರ ಕಟ್ಟುನಿಟ್ಟಾಗಿ ಆದೇಶಿಸಿದೆ.

ಅಧಿಕಾರಿಗಳಿಗೆ ಸಿಎಂ ಶಾಕ್

ರಾಜ್ಯದಲ್ಲಿ ತಲೆನೋವಾಗಿ ಪರಿಣಮಿಸಿರುವ ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮುಖ್ಯಮಂತ್ರಿಗಳ ನೇರ ಸೂಚನೆ ಮೇರೆಗೆ ಈ ಆಡಳಿತಾತ್ಮಕ ಬದಲಾವಣೆ ತರಲಾಗಿದೆ. ಇತ್ತೀಚೆಗೆ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳ ಸುದೀರ್ಘ ವಾಸ್ತವ್ಯದ ಕುರಿತು ಸಿಎಂ ಗಮನಕ್ಕೆ ತಂದಿದ್ದರು. ವಿಷಯದ ಗಂಭೀರತೆಯನ್ನು ಅರಿತು ತಕ್ಷಣವೇ ಕಡತ ಮಂಡಿಸಲು ಸೂಚಿಸಿದ್ದ ಸಿಎಂ, ಈಗ ಅದಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಸ್ಥಳೀಯ ರಾಜಕೀಯ ಪ್ರಭಾವ ಹಾಗೂ ಗಣಿ ಮಾಫಿಯಾಕ್ಕೆ ಬ್ರೇಕ್ ಹಾಕಿ, ಸರ್ಕಾರದ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅತ್ಯಂತ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಇದನ್ನೂ ಓದಿ:  ನಿಮ್ಮ ಮತ- ನಿಮ್ಮ ಬದುಕು: ಇದಕ್ಕೆ ನಮ್ಮ ಸರ್ಕಾರ ಗ್ಯಾರಂಟಿ: ಸಿಎಂ

Leave a Reply

Your email address will not be published. Required fields are marked *