ವಿಜಯನಗರ: ನಮ್ಮ ದೇಶದಲ್ಲಿ ಪ್ರಭುಗಳ ಕಾಲ ಮುಗಿದು ಪ್ರಜಾಪ್ರಭುತ್ವ ಬಂದಿದೆ, ನನ್ನನ್ನು ‘ನಾಡಿನ ದೊರೆ’ ಎಂದು ಕರೆಯುವ ಬದಲು ‘ಪ್ರಜಾಸೇವಕ’ ಎಂದು ಕರೆದರೆ ನನಗೆ ಅತ್ಯಂತ ಹೆಚ್ಚು ಸಂತೋಷವಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ನೂತನ ‘ಪ್ರಜಾಸೇವಾ ಇಲಾಖೆ’ಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ”ಜನಸೇವೆಯೇ ಜನಾರ್ದನ ಸೇವೆ” ಎಂದು ನಂಬಿದವನು ನಾನು ಎಂದರು.
ರಾಜ್ಯದ ಜನತೆ 136 ಶಾಸಕರನ್ನು ಗೆಲ್ಲಿಸಿಕೊಡುವ ಮೂಲಕ ಇಡೀ ದೇಶಕ್ಕೇ ಮಾದರಿಯಾಗುವಂತಹ ಹೊಸ ದಾರಿಯಲ್ಲಿ ಸಾಗಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳ ಬಳಿ ಅಲೆಯುವ ಕಾಲ ಈಗ ಮುಗಿದಿದೆ. ಸರ್ಕಾರದ ಆಡಳಿತವೇ ನೇರವಾಗಿ ಜನರ ಮನೆಬಾಗಿಲಿಗೆ ತಲುಪಬೇಕು ಎನ್ನುವ ಪವಿತ್ರ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.
ವಿಧಾನಸೌಧ, ಡಿಸಿ ಕಚೇರಿ ಅಥವಾ ತಾಲೂಕು ಕಚೇರಿಗಳಲ್ಲಿ ಕುಳಿತು ಜನರಿಂದ ದೂರವಿದ್ದು ಆಡಳಿತ ನಡೆಸುವುದು ಸರಿಯಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸಚಿವರು, ಶಾಸಕರು ಅಥವಾ ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ನೇರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಇದು ಕೇವಲ ಒಂದು ಸರ್ಕಾರಿ ಇಲಾಖೆಯಾಗದೆ, ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಜನಪರ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ ಎಂದು ಅವರು ಭರವಸೆ ನೀಡಿದರು.
ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ
ಜನಸಾಮಾನ್ಯರು ಶಾಸಕರು, ಮಂತ್ರಿಗಳು ಅಥವಾ ತಾಲೂಕು ಅಧಿಕಾರಿಗಳನ್ನು ಹುಡುಕಿಕೊಂಡು ಬರುವುದು ತಪ್ಪಬೇಕು. ಅಧಿಕಾರಿಗಳೇ ನೇರವಾಗಿ ಜನರ ಬಳಿಗೆ ತೆರಳಿ ಅವರ ಕುಂದುಕೊರತೆಗಳನ್ನು ಆಲಿಸಿ ಬಗೆಹರಿಸಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಇಲಾಖೆಯನ್ನು ಸೃಜಿಸಲಾಗಿದ್ದು, ಈ ಅಭಿಯಾನದ ಮೂಲಕ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂದು ಮನವಿ ಮಾಡಿದರು.
ಯಾವುದೇ ರಾಜಕೀಯ, ಧರ್ಮ-ಜಾತಿ ಇಲ್ಲದೆ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿಯೂ ಈ ಪ್ರಜಾಸೇವಾ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ. ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರದಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಮಧ್ಯದಲ್ಲಿದ್ದು ಕೆಲಸ ಮಾಡಬೇಕು ಎಂದು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವರು ತಾಲೂಕು, ಹೋಬಳಿ ಮಟ್ಟದಲ್ಲಿ ಹಾಗೂ ಶಾಸಕರು ಪಂಚಾಯಿತಿ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ.
ಶಾಸಕರು ಉಪಸ್ಥಿತರಿಲ್ಲದಿದ್ದರೆ ಅಧಿಕಾರಿಗಳೇ ಖುದ್ದಾಗಿ ಪಂಚಾಯಿತಿ ಕೇಂದ್ರಗಳಿಗೆ ತೆರಳಿ, ಸಣ್ಣ ಸಭೆಗಳನ್ನು ನಡೆಸಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಬೇಕು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ, ತಾವು ಕೂಡ್ಲಿಗಿಯಲ್ಲಿರುವ ಗಾಂಧೀಜಿಯವರ ಚಿತಾಭಸ್ಮ ಇಟ್ಟಿರುವ ಪವಿತ್ರ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿರುವುದಾಗಿ ತಿಳಿಸಿದ ಅವರು, ನಿನ್ನೆ ಬಸವಣ್ಣನವರ ಐಕ್ಯಸ್ಥಳಕ್ಕೆ ಭೇಟಿ ನೀಡಿದ್ದನ್ನು ಹಾಗೂ ಬರಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿದ್ದನ್ನು ಸ್ಮರಿಸಿದರು. “ಹೆಲಿಕಾಪ್ಟರ್ ಪ್ರವಾಸದ ಕುರಿತು ಬರುವ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಟೀಕೆಗಳು ಸಾಯುತ್ತವೆ, ಆದರೆ ನಾವು ಮಾಡಿದ ಕೆಲಸಗಳು ಎಂದು ಉಳಿಯುತ್ತವೆ”. ಜನರ ಹತ್ತಿರಕ್ಕೆ ಆಡಳಿತವನ್ನು ಒಯ್ಯುವುದೇ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದರು.
ಜನರ ಮುಖದಲ್ಲಿ ನಗು ಕಾಣುವುದೇ ಸರ್ಕಾರದ ಯಶಸ್ಸು
ಸಾರ್ವಜನಿಕರ ಅರ್ಜಿಗಳಿಗೆ ಕೇವಲ ಸ್ವೀಕೃತಿ ನೀಡುವುದು ಮುಖ್ಯವಲ್ಲ; ಅವರಿಗೆ ಸೂಕ್ತ ಪರಿಹಾರ ತಲುಪಿದಾಗ ಮಾತ್ರ ಯೋಜನೆಯ ನೈಜ ಯಶಸ್ಸು ಸಾಧ್ಯ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಜಯನಗರದ ಪವಿತ್ರ ಭೂಮಿಯಲ್ಲಿ ಈ ಜನಪರ ಯೋಜನೆಗೆ ಚಾಲನೆ ನೀಡಲಾಗಿದೆ. ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ. ತಿಂಗಳಿಗೆ ಎರಡು ದಿನ ಅಧಿಕಾರಿಗಳು ಸ್ಥಳಕ್ಕೇ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
ಪಿಂಚಣಿ, ಭೂಮಿ ವ್ಯಾಜ್ಯ, ಸರ್ಕಾರದ ಸೌಲಭ್ಯಗಳು, ಖಾತೆ ಬದಲಾವಣೆ, ಗ್ಯಾರಂಟಿ ಯೋಜನೆಗಳು ಹಾಗೂ ಮನೆ-ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸಪರಿವಾರ ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು. ಬಡವರು ಹಾಗೂ ಶೋಷಿತರಿಗೆ ತಹಶೀಲ್ದಾರ್, ಎಸಿ ಅಥವಾ ಡಿಸಿ ಮಟ್ಟದ ವ್ಯಾಜ್ಯಗಳಲ್ಲಿ ಹೋರಾಡಲು ಉಚಿತವಾಗಿ ವಕೀಲರ ಸೇವೆ ಒದಗಿಸಿ ಕಾನೂನು ನೆರವು ನೀಡಲಾಗುವುದು. ಅರ್ಜಿ ತಿರಸ್ಕೃತಗೊಂಡರೆ ಅದಕ್ಕೆ ಕಾರಣವನ್ನು ಸ್ಪಷ್ಟಪಡಿಸಲಾಗುವುದು. ಅರ್ಜಿದಾರರಿಗೆ ಸಂಪೂರ್ಣ ಪರಿಹಾರ ಸಿಗುವವರೆಗೂ ಸರ್ಕಾರ ಅವರ ಬೆನ್ನಿಗೆ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಸಮಾಜದ ಪ್ರತಿಯೊಂದು ವರ್ಗಕ್ಕೂ ಅಂಬೇಡ್ಕರ್ ಅವರ ಚಿಂತನೆಯಂತೆ ಸಮಾನ ಗೌರವ ಸಿಗಬೇಕು ಎಂಬುದು ಸರ್ಕಾರದ ಆಶಯ. ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ವಿರೋಧ ಪಕ್ಷಗಳಿಗೆ ಅದನ್ನು ಕಾರ್ಯರೂಪಕ್ಕೆ ತಂದು ತೋರಿಸಿದ್ದೇವೆ. ಪ್ರಜಾಸೇವಾ ಯೋಜನೆಯೂ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕರಿಗೆ ‘Tr’ ಗೌರವ
ದೇಶದ ಅಭಿವೃದ್ಧಿಗೆ ಸೈನಿಕ, ಕಾರ್ಮಿಕ ಹಾಗೂ ಕೃಷಿಕರಷ್ಟೇ ಶಿಕ್ಷಕರ ಕೊಡುಗೆಯೂ ಪ್ರಮುಖವಾಗಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಶಿಕ್ಷಕರ ಹೆಸರಿನ ಮುಂದೆ ‘Tr’ (Teacher) ಎಂದು ಸೇರಿಸಿ ಗೌರವಿಸುವ ಸಂಪ್ರದಾಯವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಸ್ಮರಿಸಿದ ಅವರು, “ರಾಜ್ಯದಲ್ಲಿ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. ಜನ್ಮ ನೀಡಿದ ತಾಯಿ ಮತ್ತು ಅಕ್ಷರ ಕಲಿಸಿದ ಶಿಕ್ಷಕರಿಬ್ಬರೂ ನಮಗೆ ದೇವರು ಇದ್ದಂತೆ. ವೈದ್ಯರು, ಎಂಜಿನಿಯರ್ಗಳಿಗೆ ಸಿಗುವಂತೆ ಶಿಕ್ಷಕರಿಗೂ ಗೌರವ ನೀಡಲು, ಅವರ ಹೆಸರಿನ ಮುಂದೆ ‘ಟೀಚರ್’ ಎಂಬ ಬಿರುದು ಬಳಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಆದ್ಯತೆ:
ಸಮಾಜವನ್ನು ಬದಲಾಯಿಸುವ ಶಕ್ತಿ ಶಿಕ್ಷಣ ಕ್ಷೇತ್ರಕ್ಕಿದೆ. ಸರ್ಕಾರಿ ಹಾಗೂ ಗ್ರಾಮೀಣ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಡ ಮಕ್ಕಳಿಗೆ ಪ್ರೋತ್ಸಾಹ ನೀಡಲು ಶೇ 15ರಷ್ಟು ಗ್ರಾಮೀಣ ಮೀಸಲಾತಿಯೊಂದಿಗೆ, ಹೆಚ್ಚುವರಿಯಾಗಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಶೇ 7.5ರಷ್ಟು ಆಂತರಿಕ ಮೀಸಲಾತಿ ನೀಡಲು ಸರ್ಕಾರ ಯೋಜಿಸುತ್ತಿದೆ ಎಂದರು.
ಮನೆ ಬಾಗಿಲಿಗೆ ಇ-ಖಾತೆ ದಾಖಲೆ
ಪ್ರತಿಯೊಬ್ಬರ ಆಸ್ತಿಗೆ ಸೂಕ್ತ ಭದ್ರತೆ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಸರ್ಕಾರದ ಆರನೇ ಗ್ಯಾರಂಟಿ ‘ಭೂಮಿ ಗ್ಯಾರಂಟಿ’ ಯೋಜನೆಯಡಿ ತಾಲೂಕಿನಲ್ಲಿ ಈಗಾಗಲೇ 25,276 ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಆಸ್ತಿಗಳ ಅಳತೆ ಮಾಡಿ, ಮಾಲೀಕರ ಭಾವಚಿತ್ರದೊಂದಿಗೆ ಇ-ಖಾತೆ ದಾಖಲೆಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ ಎಂಬ ಧ್ಯೇಯವಾಕ್ಯದೊಂದಿಗೆ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಬಡವರು ಮತ್ತು ಶಕ್ತಿ ಇಲ್ಲದವರಿಗೆ ನೆರವಾಗಲು ಉಚಿತ ಸರ್ಕಾರಿ ವಕೀಲರ ಸೌಲಭ್ಯ ಸೇರಿದಂತೆ ಕಾನೂನು ನೆರವು ನೀಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇದೇ ವೇಳೆ ಹಳ್ಳಿಗಳಲ್ಲಿ ಸಾಂಸ್ಕೃತಿಕ, ಕ್ರೀಡಾ ಹಾಗೂ ನಾಯಕತ್ವದ ಪ್ರತಿಭೆಗಳನ್ನು ಹೊರತರುವ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸುವ ಉದ್ದೇಶದಿಂದ ‘ಭಾರತ್ ಜೋಡೋ ಯುವಕ ಸಂಘ’ಗಳನ್ನು ಪ್ರಾರಂಭಿಸಲಾಗುತ್ತಿದೆ.
ಪ್ರತಿ ಪಂಚಾಯಿತಿಯಲ್ಲೂ ಗ್ಯಾರಂಟಿ ಯೋಜನೆಗಳ ಸಮಿತಿಗಳನ್ನು ರಚಿಸಿ, ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶೀಘ್ರ 2ನೇ ಹಂತದ ಬರಪೀಡತ ತಾಲ್ಲೂಕುಗಳ ಘೋಷಣೆ
ರಾಜ್ಯದ ಬರಪೀಡಿತ ತಾಲೂಕುಗಳ ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಮತ್ತು ನಿಯಮಗಳ ಚೌಕಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ರಾಜ್ಯದಲ್ಲಿ ಬರ ಪರಿಸ್ಥಿತಿಯ ಕುರಿತು ಎರಡನೇ ಹಂತದ ವರದಿ ಲಭ್ಯವಾಗಲಿದ್ದು, ಇನ್ನು 50ಕ್ಕೂ ಹೆಚ್ಚು ತಾಲೂಕುಗಳ ಸಮೀಕ್ಷೆ ಪ್ರಗತಿಯಲ್ಲಿದೆ. ನಿಯಮಗಳ ಪ್ರಕಾರ 21 ದಿನಗಳ ಮಳೆಯ ಪ್ರಮಾಣ ಹಾಗೂ ನಿಗದಿತ ಮಾನದಂಡಗಳನ್ನು ಪರಿಶೀಲಿಸಿ, ಈ ತಿಂಗಳ ಅಂತ್ಯದ ವೇಳೆಗೆ ಅಭಾವ ಎದುರಿಸುತ್ತಿರುವ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಾರ್ಯಕ್ರಮದ ನಂತರ ವಿವಿಧ ಜಿಲ್ಲೆಗಳಲ್ಲಿ ಸಚಿವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಜಾಸೇವಾ ಅಭಿಯಾನದ ಕುರಿತು ಆನ್ ಲೈನ್ ಸಂವಾದ ನಡೆಸಿ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಅಹವಾಲು ನೀಡಲು ಆಗಮಿಸಿದ್ದ ಸಾರ್ವಜನಿಕರೊಂದಿಗೆ ಮಾತನಾಡುವ ಮೂಲಕ ಅವರಲ್ಲಿ ಅಚ್ಚರಿ ಮೂಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಯೋಜನೆಗಳಡಿ ಆಯ್ಕೆಯಾಗಿರುವ ತಾಲ್ಲೂಕಿನ ಫಲಾನುಭವಿಗಳಿಗೆ ಚೆಕ್, ದಿವ್ಯಾಂಗರಿಗೆ ವಾಹನ ವಿತರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳು ವೈದ್ಯ, ಮುಜರಾಯಿ, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರು ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರನಾಯ್ಕ್, ಬಳ್ಳಾರಿ ಲೋಕಸಭಾ ಕ್ಷೇತ್ರ ಸಂಸದ ಇ. ತುಕಾರಾಂ, ದಾವಣಗೆರೆ ಲೋಕಸಭಾ ಕ್ಷೇತ್ರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ವಿಜಯನಗರ ಕ್ಷೇತ್ರ ಶಾಸಕ ಹೆಚ್.ಆರ್. ಗವಿಯಪ್ಪ, ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮಿರಾಜ್ ನಾಯಕ್, ಹಡಗಲಿ ಶಾಸಕ ಎಲ್. ಕೃಷ್ಣನಾಯಕ್, ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ವಿಧಾನ ಪರಿಷತ್ ಶಾಸಕ ವೈ.ಎಂ. ಸತೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕುರಿ ಶಿವಮೂರ್ತಿ,ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳು: ಎಲ್.ಕೆ. ಅತೀಕ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಪ್ರಧಾನ ಕಾರ್ಯದರ್ಶಿ, ಪಂಕಜ್ ಕುಮಾರ್ ಪಾಂಡೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ಜಿ. ಜಗದೀಶ್, ಆರ್ಥಿಕ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ಡಾ. ರೇಜು ಎಂ.ಟಿ., ಅಭಿರಾಮ್ ಜಿ. ಶಂಕರ್, ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಂ, ಬಳ್ಳಾರಿ ವಲಯ,ಪೋಲಿಸ್ ಮಹಾನಿರೀಕ್ಷಕರು ಡಾ.ಹರ್ಷಾ, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿ.ಪಂ.ಸಿಇಓ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಸೇರಿದಂತೆ ಮತ್ತಿರರು ಉಪಸ್ಥಿತಿರಿದ್ದರು.
ಇದನ್ನೂ ಓದಿ: ಮಡಿಕೇರಿಯಲ್ಲಿ ಪಡಿತರ ಅಕ್ಕಿ ಕಾಳಸಂತೆ ಶಂಕೆ: 60ಕ್ಕೂ ಹೆಚ್ಚು ಮೂಟೆ ಜಪ್ತಿ, ಸಾಗಾಟ ತಡೆದ ಸಾರ್ವಜನಿಕರು!
