ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ನಡೆದ ಇರಾನ್ ಸಂಘರ್ಷದ ಬಳಿಕ ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಭಾರತೀಯ ನಿರ್ಮಿತ ಶಸ್ತ್ರಾಸ್ತ್ರಗಳಿಗೆ ಅಭೂತಪೂರ್ವ ಬೇಡಿಕೆ ಬಂದಿದೆ. ತನ್ನ ದೇಶದ ಭದ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಭಾರತದ ಅತ್ಯಂತ ಶಕ್ತಿಶಾಲಿ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯಾದ ‘ಬ್ರಹ್ಮೋಸ್’ ( BrahMos) ಹಾಗೂ ಅತ್ಯಾಧುನಿಕ ವಾಯು ರಕ್ಷಣಾ ನಿಯಂತ್ರಣ ವ್ಯವಸ್ಥೆಯಾದ ‘ಆಕಾಶತೀರ್’ ಅನ್ನು ಖರೀದಿಸಲು ಮುಂದಾಗಿದೆ. ಈ ದೊಡ್ಡ ಮಟ್ಟದ ರಕ್ಷಣಾ ಒಪ್ಪಂದದ ಕುರಿತು ಭಾರತ ಮತ್ತು ಯುಎಇ ನಡುವೆ ಆರಂಭಿಕ ಹಂತದ ಮಾತುಕತೆಗಳು ಚುರುಕಾಗಿ ಸಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವೆ ನಡೆದ ಇತ್ತೀಚಿನ ಯುದ್ಧದ ವೇಳೆ ಎದುರಾದ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳ ತೀವ್ರತೆಯನ್ನು ಕಂಡು ಯುಎಇ ಎಚ್ಚೆತ್ತುಕೊಂಡಿದೆ. ತನ್ನ ಪ್ರಮುಖ ತೈಲ ರಫ್ತು ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯ ರಕ್ಷಣೆಗೆ ಮಾಸ್ಟರ್ ಪ್ಲಾನ್ ರೂಪಿಸಿರುವ ಅಬುಧಾಬಿ, ಕೇವಲ ಪಾಶ್ಚಿಮಾತ್ಯ ದೇಶಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ನಿರ್ಧರಿಸಿದೆ. ಅಮೆರಿಕದ ಆಪ್ತ ಮಿತ್ರನಾಗಿರುವ ಭಾರತದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಳ್ಳುವುದರಿಂದ ರಾಜತಾಂತ್ರಿಕ ಬಾಂಧವ್ಯಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂಬುದು ಯುಎಇ ಲೆಕ್ಕಾಚಾರವಾಗಿದೆ. ಇದೇ ಉದ್ದೇಶದಿಂದ ಯುಎಇ ವರ್ಷದ ಆರಂಭದಲ್ಲಷ್ಟೇ ದಕ್ಷಿಣ ಕೊರಿಯಾ ಜೊತೆ 35 ಬಿಲಿಯನ್ ಡಾಲರ್ ಮೊತ್ತದ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿತ್ತು.
ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್, ಸದ್ಯ ಜಗತ್ತಿನ ಅತ್ಯಂತ ವೇಗದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದ್ದು, ನೆಲ, ಜಲ ಹಾಗೂ ಆಕಾಶ ಮೂರೂ ಮಾರ್ಗಗಳಿಂದಲೂ ಶತ್ರುಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಇದರ ರಫ್ತು ಸಾಮರ್ಥ್ಯ 290 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ರಷ್ಯಾದ ಸಹಭಾಗಿತ್ವ ಇರುವುದರಿಂದ ಮಾಸ್ಕೋದ ಅನುಮತಿ ಅತ್ಯಗತ್ಯವಾಗಿದೆ. ಆದರೆ, ಭಾರತ ಮತ್ತು ರಷ್ಯಾ ಜೊತೆ ಯುಎಇ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಈ ಪ್ರಕ್ರಿಯೆ ಸುಲಭವಾಗಲಿದೆ. ಮತ್ತೊಂದೆಡೆ, ಭಾರತೀಯ ಸೇನೆಯ ಸಹಯೋಗದೊಂದಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಅಭಿವೃದ್ಧಿಪಡಿಸಿರುವ ‘ಆಕಾಶತೀರ್’ ಸಂಪೂರ್ಣ ಸ್ವಯಂಚಾಲಿತ ವಾಯು ರಕ್ಷಣಾ ಕಮಾಂಡ್ ವ್ಯವಸ್ಥೆಯಾಗಿದೆ. ಇದು ಶತ್ರುಗಳ ವೈಮಾನಿಕ ದಾಳಿಯನ್ನು ತಕ್ಷಣವೇ ಪತ್ತೆಹಚ್ಚಿ ಕ್ಷಿಪಣಿ ನಿಯಂತ್ರಣವನ್ನು ಚುರುಕುಗೊಳಿಸುತ್ತದೆ. ವಿಶೇಷವೆಂದರೆ, ಯುಎಇ ಸದ್ಯ ಹೊಂದಿರುವ ಅಮೆರಿಕದ ಪ್ರಭಾವಿ ಪೇಟ್ರಿಯಾಟ್ ಮತ್ತು ಥಾಡ್ ರಕ್ಷಣಾ ವ್ಯವಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವ ಅಪೂರ್ವ ಸಾಮರ್ಥ್ಯ ಆಕಾಶತೀರ್ಗಿದೆ.
ರಾಕೆಟ್ ವೇಗದಲ್ಲಿ ಬೆಳೆದ ಭಾರತದ ರಕ್ಷಣಾ ರಫ್ತು: > ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಮತ್ತು ಸ್ವಾವಲಂಬನೆ ಯೋಜನೆಗಳ ಯಶಸ್ಸಿನಿಂದಾಗಿ ಭಾರತದ ರಕ್ಷಣಾ ರಫ್ತು ಐತಿಹಾಸಿಕ ದಾಖಲೆ ಬರೆದಿದೆ. 2013-14ರ ಸಾಲಿನಲ್ಲಿ ಕೇವಲ 68 ಕೋಟಿ ರೂಪಾಯಿಗಳಷ್ಟಿದ್ದ ಭಾರತದ ಶಸ್ತ್ರಾಸ್ತ್ರ ರಫ್ತು, ಈ 2026ರ ಮಾರ್ಚ್ ಅಂತ್ಯದ ವೇಳೆಗೆ ಬರೋಬ್ಬರಿ 37,868 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ‘ಆಪರೇಷನ್ ಸಿಂಧೂರ್’ ವೇಳೆ ಭಾರತ ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ಪ್ರಾಯೋಗಿಕವಾಗಿ ಯುದ್ಧದ ಪರಿಸ್ಥಿತಿಯಲ್ಲಿ ಯಶಸ್ವಿಯಾಗಿ ಬಳಸಿತ್ತು. ಇದು ಜಾಗತಿಕ ಮಟ್ಟದಲ್ಲಿ ಭಾರತದ ತಂತ್ರಜ್ಞಾನದ ಮೇಲಿನ ವಿಶ್ವಾಸವನ್ನು ದುಪ್ಪಟ್ಟು ಮಾಡಿದೆ.
ಈಗಾಗಲೇ ಫಿಲಿಪೈನ್ಸ್ ದೇಶವು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಿದ್ದು, ವಿಯೆಟ್ನಾಂ ಮತ್ತು ಇಂಡೋನೇಷ್ಯಾ ದೇಶಗಳು ಕೂಡ ರಫ್ತು ಒಪ್ಪಂದಗಳಿಗೆ ಮುದ್ರೆ ಒತ್ತಿವೆ. ಇವರ ಬೆನ್ನಲ್ಲೇ ಥೈಲ್ಯಾಂಡ್, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಚಿಲಿ ದೇಶಗಳು ಭಾರತದ ರಕ್ಷಣಾ ಸಾಮಗ್ರಿಗಳನ್ನು ಕೊಳ್ಳಲು ಸಾಲಿನಲ್ಲಿ ನಿಂತಿವೆ. ಜಗತ್ತಿನಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ರಫ್ತುದಾರ ದೇಶವಾಗಿ ಹೊರಹೊಮ್ಮುತ್ತಿರುವುದು ದೇಶದ ಹೆಮ್ಮೆಯನ್ನು ಹೆಚ್ಚಿಸಿದೆ. ಮುಂಬರುವ ದಿನಗಳಲ್ಲಿ ಭಾರತ ಮತ್ತು ಯುಎಇ ನಡುವಿನ ಈ ಬಹುಕೋಟಿ ಡೀಲ್ ಅಧಿಕೃತಗೊಂಡರೆ, ಅದು ಜಾಗತಿಕ ರಕ್ಷಣಾ ಇತಿಹಾಸದಲ್ಲೇ ಹೊಸ ಮೈಲಿಗಲ್ಲಾಗಲಿದೆ.
