ಲಂಡನ್: ಬ್ರಿಟನ್ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ದೇಶವು ತನ್ನ ಏಳನೇ ಪ್ರಧಾನಿಯನ್ನು ಕಾಣಲು ಸಜ್ಜಾಗಿದೆ. ಲೇಬರ್ ಪಕ್ಷದ ಸರ್ಕಾರವನ್ನು ಮುನ್ನಡೆಸುತ್ತಿದ್ದ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer ) ಅವರು ಸುಮಾರು 23 ತಿಂಗಳುಗಳ ಅಧಿಕಾರಾವಧಿಯ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಲಂಡನ್ನ 10 ಡೌನಿಂಗ್ ಸ್ಟ್ರೀಟ್ನಲ್ಲಿರುವ ತಮ್ಮ ಅಧಿಕೃತ ನಿವಾಸದ ಮುಂಭಾಗ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ರಿಟನ್ ಲೇಬರ್ ಪಕ್ಷದ ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಹೊಸ ನಾಯಕರ ಆಯ್ಕೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ತಾವು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವುದಾಗಿ ಮತ್ತು ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯಲು ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಸ್ಟಾರ್ಮರ್ ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರ ರಾಜೀನಾಮೆಗೆ ವ್ಯಾಪಕ ಒತ್ತಡ ಕೇಳಿಬರುತ್ತಿತ್ತಾದರೂ, ವಾರಾಂತ್ಯದವರೆಗೂ ತಾವು ಸವಾಲುಗಳನ್ನು ಎದುರಿಸಿ ಅಧಿಕಾರದಲ್ಲಿ ಮುಂದುವರಿಯುವುದಾಗಿ ಸ್ಟಾರ್ಮರ್ ಪಟ್ಟು ಹಿಡಿದಿದ್ದರು. ಆದರೆ ಕೊನೆಗೂ ಪಕ್ಷದ ಆಂತರಿಕ ಭಿನ್ನಮತಕ್ಕೆ ಮಣಿದು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಅಧಿಕಾರ ನಡೆಸುವಲ್ಲಿ ವಿಫಲರಾದ ಕೀರ್
ಜುಲೈ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಲೇಬರ್ ಪಕ್ಷದ ಜನಪ್ರಿಯತೆ, ಕೀರ್ ಸ್ಟಾರ್ಮರ್ ಅವರ ನಾಯಕತ್ವದಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತ ಸಾಗಿತ್ತು. ದೇಶದ ಆರ್ಥಿಕ ಪ್ರಗತಿ ಕುಂಠಿತಗೊಂಡಿದ್ದು ಮತ್ತು ಜೀವನ ವೆಚ್ಚದ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಸ್ಟಾರ್ಮರ್ ಸಂಪೂರ್ಣವಾಗಿ ವಿಫಲರಾಗಿದ್ದರು. ಇದರೊಂದಿಗೆ, ವಿವಾದಿತ ಮಾಜಿ ಸಂಸದ ಪೀಟರ್ ಮ್ಯಾಂಡೆಲ್ಸನ್ ಅವರನ್ನು ಅಮೆರಿಕದ ಬ್ರಿಟನ್ ರಾಯಭಾರಿಯಾಗಿ ನೇಮಕ ಮಾಡಿದ್ದು ಅವರ ಇಮೇಜ್ಗೆ ದೊಡ್ಡ ಪೆಟ್ಟು ನೀಡಿತ್ತು. ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಮ್ಯಾಂಡೆಲ್ಸನ್ ಸಂಪರ್ಕ ಹೊಂದಿದ್ದ ವಿಚಾರ ಬಹಿರಂಗಗೊಂಡ ತಕ್ಷಣ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಯಿತಾದರೂ, ಅಷ್ಟರಲ್ಲೇ ಲೇಬರ್ ಪಕ್ಷದ ಘನತೆಗೆ ಭಾರಿ ಧಕ್ಕೆ ಉಂಟಾಗಿತ್ತು. ಮುಂಬರುವ ದಿನಗಳಲ್ಲಿ ಉದಾರವಾದಿ ಮತದಾರರು ಗ್ರೀನ್ ಪಾರ್ಟಿ ಕಡೆಗೆ ಹಾಗೂ ವಲಸೆ ವಿರೋಧಿ ನಿಲುವು ಹೊಂದಿರುವ ನೈಗೆಲ್ ಫರಾಜ್ ನೇತೃತ್ವದ ರಿಫಾರ್ಮ್ ಯುಕೆ ಪಕ್ಷದತ್ತ ಧಾವಿಸುವ ಆತಂಕ ಲೇಬರ್ ಪಕ್ಷದ ಸಂಸದರನ್ನು ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಾಯಕತ್ವ ಬದಲಾವಣೆ ಅನಿವಾರ್ಯ ಎಂದು ಸಂಸದರು ಒತ್ತಡ ಹೇರಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಬ್ರಿಟನ್ನ ವಲಸೆ ನೀತಿ ಮತ್ತು ನವೀಕರಿಸಬಹುದಾದ ಇಂಧನ ನಿರ್ವಹಣೆಯ ವೈಫಲ್ಯವೇ ಸ್ಟಾರ್ಮರ್ ಅವರ ನಿರ್ಗಮನಕ್ಕೆ ಕಾರಣವಾಗಲಿದೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದರು. ಹಲವು ಟೀಕೆಗಳ ನಡುವೆಯೂ, ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ಗೆ ಯುರೋಪಿಯನ್ ರಾಷ್ಟ್ರಗಳ ಬೆಂಬಲ ಕ್ರೋಢೀಕರಿಸುವಲ್ಲಿ ಸ್ಟಾರ್ಮರ್ ಪ್ರಮುಖ ಪಾತ್ರ ವಹಿಸಿದ್ದರು.
ಮುಂದಿನ ಪ್ರಧಾನಿ ಯಾರು?
ಪ್ರಸ್ತುತ ಕೀರ್ ಸ್ಟಾರ್ಮರ್ ಅವರ ಉತ್ತರಾಧಿಕಾರಿ ಯಾರು ಎಂಬುದು ಇನ್ನು ಅಧಿಕೃತವಾಗಿ ನಿರ್ಧಾರವಾಗಿಲ್ಲವಾದರೂ, ಇತ್ತೀಚೆಗೆ ವಿಶೇಷ ಉಪಚುನಾವಣೆಯಲ್ಲಿ ಸಂಸತ್ ಸ್ಥಾನ ಗೆದ್ದಿರುವ ಆಂಡಿ ಬರ್ನ್ಹ್ಯಾಮ್ ಹೆಸರು ಮುಂಚೂಣಿಯಲ್ಲಿದೆ. ತಮ್ಮ 15ನೇ ವಯಸ್ಸಿನಲ್ಲೇ ಲೇಬರ್ ಪಕ್ಷ ಸೇರಿದ್ದ ಇವರು, 2017 ರಿಂದ ಗ್ರೇಟರ್ ಮ್ಯಾಂಚೆಸ್ಟರ್ನ ಮೇಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬರ್ನ್ಹ್ಯಾಮ್, ಮೊದಲಿನಿಂದಲೂ ಸ್ಟಾರ್ಮರ್ ಅವರ ನಾಯಕತ್ವಕ್ಕೆ ಸವಾಲೊಡ್ಡುತ್ತಾ ಬಂದಿದ್ದಾರೆ. ಇವರ ಜೊತೆಗೆ ಮಾಜಿ ಆರೋಗ್ಯ ಕಾರ್ಯದರ್ಶಿ ವೆಸ್ ಸ್ಟ್ರೀಟಿಂಗ್ ಕೂಡ ಪ್ರಧಾನಿ ರೇಸ್ನಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಬ್ರಿಟನ್ ಇತಿಹಾಸದಲ್ಲಿ ಐತಿಹಾಸಿಕ ‘ಬ್ರೆಕ್ಸಿಟ್’ ಜನಾಭಿಪ್ರಾಯ ಸಂಗ್ರಹದ ಹತ್ತನೇ ವರ್ಷದ ವಾರ್ಷಿಕೋತ್ಸವದ ಮುನ್ನಾದಿನವೇ ಈ ರಾಜೀನಾಮೆ ಪ್ರಕಟವಾಗಿರುವುದು ವಿಶೇಷವಾಗಿದೆ. ಕಳೆದ ಒಂದು ದಶಕದಲ್ಲಿ ಅವಧಿಗೂ ಮುನ್ನವೇ ಅಧಿಕಾರ ಕಳೆದುಕೊಂಡ ಬ್ರಿಟನ್ನ ಆರನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಸ್ಟಾರ್ಮರ್ ಪಾತ್ರರಾಗಿದ್ದಾರೆ. ಇವರಿಗಿಂತ ಮುಂಚೆ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಕೇವಲ ಒಂದೂವರೆ ತಿಂಗಳು ಮಾತ್ರ ಅಧಿಕಾರದಲ್ಲಿದ್ದರೆ, ಭಾರತೀಯ ಮೂಲದ ರಿಷಿ ಸುನಕ್ 20 ತಿಂಗಳು ಪ್ರಧಾನಿಯಾಗಿದ್ದರು. ಅವರ ಮುನ್ನ ಬೋರಿಸ್ ಜಾನ್ಸನ್, ಥೆರೇಸಾ ಮೇ ಹಾಗೂ ಬ್ರೆಕ್ಸಿಟ್ ಜನಾಭಿಪ್ರಾಯಕ್ಕೆ ನಾಂದಿ ಹಾಡಿದ್ದ ಡೇವಿಡ್ ಕ್ಯಾಮೆರಾನ್ ಕೂಡ ಅವಧಿಗೆ ಮುನ್ನವೇ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದರು.
