ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪರಿಚಿತರಾಗಿ, ಅಡವಿಟ್ಟಿರುವ ಒಡವೆಗಳನ್ನು ಬಿಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕುತ್ತಿದ್ದ ಕಿರುತೆರೆ ನಟಿ (Crime) ವನಿತಾಳನ್ನು ಕೊನೆಗೂ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಈಕೆಯ ನಯವಂಚಕ ಮಾತುಗಳಿಗೆ ಮರುಳಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಸಂತ್ರಸ್ತ ಯುವಕ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಅಡವಿಟ್ಟ ಒಡವೆಯ ಕಟ್ಟುಕಥೆ ಹೇಳಿ ಸ್ನೇಹದ ಬಲೆ! ಬಂಧಿತ ನಟಿಯ ವಂಚನೆಯ ತಂತ್ರ ಬಹಳ ವ್ಯವಸ್ಥಿತವಾಗಿರುತ್ತಿತ್ತು. ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ಗಳಲ್ಲಿ ತಾನೊಬ್ಬ ಸೀರಿಯಲ್ ನಟಿ ಎಂದು ಬಿಂಬಿಸಿಕೊಂಡು ಆರ್ಥಿಕವಾಗಿ ಸದೃಢರಾಗಿರುವ ಯುವಕರನ್ನು ಟಾರ್ಗೆಟ್ ಮಾಡುತ್ತಿದ್ದಳು. ದಿನಾಲೂ ಚಾಟಿಂಗ್ ನಡೆಸಿ ಗಾಢವಾದ ನಂಬಿಕೆ ಹುಟ್ಟಿಸುತ್ತಿದ್ದಳು. ಒಮ್ಮೆ ಸಂಪೂರ್ಣ ವಿಶ್ವಾಸ ಗಳಿಸಿದ ನಂತರ, “ನನ್ನ ಕೋಟ್ಯಂತರ ಬೆಲೆಯ ಚಿನ್ನಾಭರಣಗಳನ್ನು ಅಡವಿಟ್ಟಿದ್ದೇನೆ, ತುರ್ತಾಗಿ ಹಣ ಕೊಟ್ಟರೆ ಎರಡೇ ದಿನದಲ್ಲಿ ಮರಳಿಸುತ್ತೇನೆ” ಎಂದು ಕಣ್ಣೀರಿಟ್ಟು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು.
ಸಾಕ್ಷ್ಯ ಸಿಗದಂತೆ ನಗದು ರೂಪದಲ್ಲೇ ವ್ಯವಹಾರ! ಯಾವುದೇ ರೀತಿಯ ಡಿಜಿಟಲ್ ಪುರಾವೆ ಅಥವಾ ಆನ್ಲೈನ್ ಬ್ಯಾಂಕಿಂಗ್ ದಾಖಲೆಗಳು ಸಿಗಬಾರದು ಎಂಬ ಕಾರಣಕ್ಕೆ ಈಕೆ ತೀರಾ ಜಾಗರೂಕತೆಯಿಂದ ಇರುತ್ತಿದ್ದಳು. ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇಲ್ಲದ ಮತ್ತು ಜನದಟ್ಟಣೆ ಕಡಿಮೆ ಇರುವ ಕತ್ತಲೆಯ ರಹಸ್ಯ ಸ್ಥಳಗಳಲ್ಲೇ ಡೀಲಿಂಗ್ ಕುದುರಿಸುತ್ತಿದ್ದಳು. ದೂರುದಾರರನ್ನು ಅಲ್ಲಿಗೇ ಬರಮಾಡಿಕೊಂಡು ಕೇವಲ ನಗದು ರೂಪದಲ್ಲೇ ಹಣ ಪಡೆದು ಎಸ್ಕೇಪ್ ಆಗುತ್ತಿದ್ದಳು. ಒಮ್ಮೆ ನಗದು ಕೈ ಸೇರಿದ ಮೇಲೆ ಫೋನ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ ಮತ್ತು ಸಂದೇಶ ಕಳುಹಿಸಿದರೆ ಬ್ಲಾಕ್ ಮಾಡಿ ನಾಪತ್ತೆಯಾಗುತ್ತಿದ್ದಳು.
ಮಹಾಲಕ್ಷ್ಮಿ ಲೇಔಟ್ ಸೇರಿ ಮೂರು ಠಾಣೆಗಳಲ್ಲಿ ಪ್ರಕರಣ ದಾಖಲು ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಯುವಕನೊಬ್ಬ ಈಕೆಯ ಸುಳ್ಳುಗಳನ್ನು ನಂಬಿ ಬರೋಬ್ಬರಿ ಒಂದು ಲಕ್ಷ ರೂಪಾಯಿ ಕಳೆದುಕೊಂಡು ಮೋಸ ಹೋಗಿದ್ದ. ತನಗೆ ವಂಚನೆಯಾಗಿರುವುದು ಖಚಿತವಾಗುತ್ತಿದ್ದಂತೆ ಆತ ಠಾಣೆಯ ಮೆಟ್ಟಿಲೇರಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಈಕೆಯ ವಿರುದ್ಧ ಬೆಂಗಳೂರಿನ ಜ್ಞಾನಭಾರತಿ ಹಾಗೂ ಗೋವಿಂದರಾಜನಗರ ಪೊಲೀಸ್ ಠಾಣೆಗಳಲ್ಲೂ ಇದೇ ರೀತಿಯ ವಂಚನೆಯ ದೂರುಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಕಂಬಿ ಎಣಿಸುತ್ತಿರುವ ಈ ಕಿಲಾಡಿ ನಟಿ, ಸಾಮಾಜಿಕ ಜಾಲತಾಣಗಳ ಮೂಲಕ ಇನ್ನು ಎಷ್ಟು ಜನರನ್ನು ಹನಿಟ್ರ್ಯಾಪ್ ಮಾಡಿ ವಂಚಿಸಿದ್ದಾಳೆ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮದುವೆ ಮಂಟಪ ಏರಬೇಕಿದ್ದ ಯುವತಿ ತಂದೆ-ತಾಯಿಯೊಂದಿಗೆ ಆತ್ಮಹತ್ಯೆ
