TOP NEWS

Crime: ಮದುವೆ ಮಂಟಪ ಏರಬೇಕಿದ್ದ ಯುವತಿ ತಂದೆ-ತಾಯಿಯೊಂದಿಗೆ ಆತ್ಮಹತ್ಯೆ

crime bride to be and her family takes life due to harassment

ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಮದುವೆಯ ಸಂಭ್ರಮ ಸಡಗರದಲ್ಲಿದ್ದ ಮನೆಯೊಂದು ಒಂದೇ ಕ್ಷಣದಲ್ಲಿ (Crime) ಸ್ಮಶಾನ (Self Harmimg) ಸದೃಶವಾಗಿದೆ. ಸ್ಥಳೀಯ ಯುವಕನೊಬ್ಬ ನೀಡಿದ ಅತಿಯಾದ ಮಾನಸಿಕ ಕಿರುಕುಳ ತಾಳಲಾರದೆ ಯುವತಿ ಹಾಗೂ ಆಕೆಯ ಹೆತ್ತವರು ಒಟ್ಟಿಗೆ ವಿಷ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಜರುಗಿದೆ. ಶಿವಣ್ಣ, ಅವರ ಪತ್ನಿ ನಾಗರತ್ನ ಹಾಗೂ ಮಗಳು ರಕ್ಷಿತಾ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಜೂನ್ 24 ರಂದು ರಕ್ಷಿತಾ ಅವರ ವಿವಾಹ ನಿಶ್ಚಯವಾಗಿತ್ತು. ಇನ್ನೇನು ಎರಡು ದಿನಗಳಲ್ಲಿ ಮಗಳ ಮದುವೆ ಮುಗಿಸಿ ಬೀಳ್ಕೊಡಬೇಕಿದ್ದ ಪೋಷಕರು, ಮಗಳೊಂದಿಗೇ ಹೆಣವಾಗಿ ಬಿದ್ದಿರುವುದನ್ನು ಕಂಡು ಇಡೀ ಗ್ರಾಮ ಕಣ್ಣೀರಿಡುತ್ತಿದೆ.

ಯುವತಿಗೆ ಕಿರುಕುಳ ನೀಡುತ್ತಿದ್ದ ಊರಿನ ವ್ಯಕ್ತಿ

ಗ್ರಾಮದ ಉಲ್ಲಾಸ್ ಗೌಡ ಎಂಬಾತನೇ ಈ ಮೂವರ ಸಾವಿಗೆ ಪ್ರಮುಖ ಕಾರಣ ಎಂದು ಆರೋಪಿಸಲಾಗಿದೆ. ರಕ್ಷಿತಾ ಈ ಹಿಂದೆ ತನಗೆ ಕಳುಹಿಸಿದ್ದ ಹಳೇ ಸಂದೇಶಗಳು ಮತ್ತು ಕೆಲವು ಖಾಸಗಿ ಫೋಟೋಗಳನ್ನು ದುರುಪಯೋಗಪಡಿಸಿಕೊಂಡಿದ್ದ ಈತ, ಮದುವೆ ನಿಶ್ಚಯವಾದ ದಿನದಿಂದಲೂ ಆಕೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಅಷ್ಟಕ್ಕೇ ನಿಲ್ಲದೆ, ರಕ್ಷಿತಾಳ ಕೈ ಹಿಡಿಯಬೇಕಿದ್ದ ಭಾವಿ ಪತಿಗೂ ಆ ಫೋಟೋಗಳನ್ನು ರವಾನಿಸಿ ಮದುವೆ ಮುರಿಯಲು ಸಂಚು ಹೂಡಿದ್ದ. ಇದರಿಂದ ಇಡೀ ಕುಟುಂಬದ ಮಾನ ಸಾರ್ವಜನಿಕವಾಗಿ ಹರಾಜಾಗಿದ್ದು, ತೀವ್ರ ಅವಮಾನ ಹಾಗೂ ನರಕಯಾತನೆ ಅನುಭವಿಸಿದ ಶಿವಣ್ಣ ಅವರ ಕುಟುಂಬ ಕೊನೆಯ ನಿರ್ಧಾರ ಕೈಗೊಂಡಿದೆ. ಸಾವಿಗೂ ಮುನ್ನ ರಕ್ಷಿತಾ ಬರೆದಿಟ್ಟಿರುವ ಡೆತ್‌ನೋಟ್ ಸಿಕ್ಕಿದ್ದು, ಅದರಲ್ಲಿ ಉಲ್ಲಾಸ್ ಗೌಡನ ಕಿರುಕುಳದ ಬಗ್ಗೆ ಉಲ್ಲೇಖಿಸಲಾಗಿದೆ. ಸದ್ಯ ವರುಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

ಮೃತರ ಕುಟುಂಬದ ಹಿರಿಯ ಜೀವ, ರಕ್ಷಿತಾಳ ಅಜ್ಜಿ ಚಿನ್ನಮ್ಮ ಅವರು ಮಾಧ್ಯಮಗಳ ಎದುರು ಆಕ್ರಂದನ ಮುಗಿಲು ಮುಟ್ಟುವಂತೆ ಕಣ್ಣೀರು ಹಾಕಿದ್ದಾರೆ. “ನನ್ನ ಅಳಿಯನಿಗೆ ಪರಿಚಯವಿದ್ದ ಟ್ರ್ಯಾಕ್ಟರ್ ಡ್ರೈವರ್ ಉಲ್ಲಾಸ್ ಗೌಡ, ನಮ್ಮ ಮನೆಗೆ ಬಂದು ಹೋಗುತ್ತಿದ್ದ. ನನ್ನ ಮೊಮ್ಮಗಳ ಬದುಕು ಹಾಳು ಮಾಡಲೆಂದೇ ಈ ರೀತಿ ಸಂಚು ಮಾಡಿದ್ದಾನೆ. ಹಸೆಮಣೆ ಏರಬೇಕಿದ್ದ ಮಗು ತಂದೆ-ತಾಯಿಯೊಂದಿಗೆ ಮಸಣ ಸೇರಿದೆ. ಆ ನರಾಧಮನಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಕಿಡಿಕಾರಿದ್ದಾರೆ.

ಆರೋಪಿ ಬಂಧನಕ್ಕೆ ಗ್ರಾಮಸ್ಥರ ಆಗ್ರಹ

ಮತ್ತೊಂದೆಡೆ, ಈ ಘಟನೆಯಿಂದ ರೊಚ್ಚಿಗೆದ್ದಿರುವ ಕೆಂಪಯ್ಯನಹುಂಡಿ ಗ್ರಾಮಸ್ಥರು ಹಾಗೂ ಸಂಬಂಧಿಕರು ಹೆಣಗಳನ್ನು ಸಾಗಿಸಲು ಬಂದ ಆ್ಯಂಬುಲೆನ್ಸ್ ತಡೆದು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಮುಖ್ಯ ಆರೋಪಿ ಉಲ್ಲಾಸ್ ಗೌಡನನ್ನು ತಕ್ಷಣವೇ ಕಣ್ಣೆದುರು ತಂದು ಬಂಧಿಸಬೇಕು, ಅಲ್ಲಿಯವರೆಗೆ ಶವ ಸಂಸ್ಕಾರಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ತಳ್ಳಾಟ-ನೂಕಾಟ ನಡೆದಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರ ತೀವ್ರ ಪ್ರತಿರೋಧದ ನಡುವೆಯೂ ಪೊಲೀಸರು ಶವಗಳನ್ನು ವಾಹನಕ್ಕೆ ತುಂಬಿದಾಗ ಆಕ್ರೋಶಿತ ಸಾರ್ವಜನಿಕರು ಆ್ಯಂಬುಲೆನ್ಸ್‌ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಸಿ.ಟಿ. ಕುಮಾರ್ ಅವರು ಸಾರ್ವಜನಿಕರನ್ನು ಸಮಾಧಾನಪಡಿಸಲು ಯತ್ನಿಸಿದರಾದರೂ, ಗ್ರಾಮಸ್ಥರು ಮಾತ್ರ ಆರೋಪಿಯ ಬಂಧನಕ್ಕೆ ಪಟ್ಟು ಹಿಡಿದು ಕುಳಿತಿದ್ದಾರೆ.

ಇದನ್ನೂ ಓದಿ: ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಚಾಲಕ ದುರ್ಮರಣ, ನಾಲ್ವರು ಶಿಕ್ಷಣಾಧಿಕಾರಿಗಳ ಸ್ಥಿತಿ ಗಂಭೀರ

Leave a Reply

Your email address will not be published. Required fields are marked *