ಜೈಪುರ: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ನೀಟ್ (NEET-UG) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ರಾಜಸ್ಥಾನದ ಜಮ್ವಾ ರಾಮಗಢದ ಬಿಜೆಪಿ ಕಾರ್ಯಕರ್ತ ದಿನೇಶ್ ಬಿವಾಲ್ ಮತ್ತು ಆತನ ಸಹೋದರ ಮಾಂಗಿಲಾಲ್ ಬಿವಾಲ್ ಎಂಬುವವರನ್ನು ಸಿಬಿಐ ವಶಕ್ಕೆ ಪಡೆದಿದ್ದು, ಈ ಬೆಳವಣಿಗೆಯು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.
ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡವು (SOG) ಮೊದಲು ಇವರನ್ನು ವಶಕ್ಕೆ ಪಡೆದಿತ್ತು, ನಂತರ ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತಿರುವ ಸಿಬಿಐಗೆ ಇವರನ್ನು ಹಸ್ತಾಂತರಿಸಲಾಗಿದೆ. ತನಿಖಾ ಸಂಸ್ಥೆಗಳ ಮಾಹಿತಿ ಪ್ರಕಾರ, ಈ ಸಹೋದರರು ಸಿಕಾರ್ ಮೂಲದ ಕನ್ಸಲ್ಟೆನ್ಸಿ ನಡೆಸುವ ರಾಕೇಶ್ ಮಾಂಡ್ವಾರಿಯಾ ಎಂಬುವವನ ಮೂಲಕ ಸುಮಾರು 30 ಲಕ್ಷ ರೂಪಾಯಿ ನೀಡಿ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಖರೀದಿಸಿದ್ದರು ಎನ್ನಲಾಗಿದೆ. ಆರಂಭದಲ್ಲಿ ತಮ್ಮ ಕುಟುಂಬದ ಮಕ್ಕಳಿಗಾಗಿಯೇ ಈ ಪತ್ರಿಕೆಯನ್ನು ಪಡೆದಿದ್ದ ಇವರು, ನಂತರ ಆ ಹಣವನ್ನು ವಾಪಸ್ ಪಡೆಯುವ ಹಾಗೂ ಲಾಭ ಮಾಡುವ ಉದ್ದೇಶದಿಂದ ಇತರ ವಿದ್ಯಾರ್ಥಿಗಳಿಗೂ ಪತ್ರಿಕೆಯನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದೇ ಕುಟುಂಬದ ಇತರ ಸದಸ್ಯರು ಈಗಾಗಲೇ ವೈದ್ಯಕೀಯ ಸೀಟು ಪಡೆದಿರುವ ಬಗ್ಗೆಯೂ ಸಿಬಿಐ ಈಗ ಹದ್ದಿನ ಕಣ್ಣಿಟ್ಟಿದೆ.
ದಿನೇಶ್ ಬಿವಾಲ್ ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಜಮ್ವಾ ರಾಮಗಢ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ನಾಯಕರ ಭೇಟಿಯ ಸಂದರ್ಭದಲ್ಲೂ ಅವರು ಮುಂಚೂಣಿಯಲ್ಲಿದ್ದರು ಎನ್ನಲಾಗಿದೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್, ರಾಜಸ್ಥಾನದ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರೊಂದಿಗೆ ದಿನೇಶ್ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಪರೀಕ್ಷಾ ಅಕ್ರಮದ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದು ಕಾಂಗ್ರೆಸ್ ನೇರ ಆರೋಪ ಮಾಡಿದೆ.
ಈ ಜಾಲವು ಕೇವಲ ರಾಜಸ್ಥಾನಕ್ಕೆ ಸೀಮಿತವಾಗದೆ ಹಲವು ರಾಜ್ಯಗಳಿಗೆ ಹಬ್ಬಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಪರೀಕ್ಷೆ ನಡೆಯುವ ಒಂದು ತಿಂಗಳ ಮುಂಚೆಯೇ ಈ ತಂಡಕ್ಕೆ ಪ್ರಶ್ನೆ ಪತ್ರಿಕೆಯ ಮಾಹಿತಿ ಇತ್ತು ಎಂಬ ಸ್ಫೋಟಕ ಸತ್ಯ ಹೊರಬಿದ್ದಿದೆ. ಈ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈಗಾಗಲೇ 2026ರ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ. ಮುಂದಿನ ದಿನಗಳಲ್ಲಿ ಈ ಹಗರಣದಲ್ಲಿ ಇನ್ನೂ ಹಲವು ಪ್ರಭಾವಿಗಳ ಹೆಸರು ಹೊರಬರುವ ಸಾಧ್ಯತೆಯಿದೆ.
ಇದನ್ನೂ ಓದಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣ ಎಂದ ಬಿಕೆ ಹರಿಪ್ರಸಾದ್
