ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದ ಅನ್ಶುಲ್ ಕಾಂಬೋಜ್ ಅವರಂತೆಯೇ ಕಾಣುವ (Viral News) ಪೊಲೀಸ್ ಅಧಿಕಾರಿಯನ್ನು ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ವೇಗಿ ಭೇಟಿ ಮಾಡಿದ್ದಾರೆ. ಇಬ್ಬರು ಒಂದೇ ರೀತಿ ಕಾಣುವ ವ್ಯಕ್ತಿಗಳು ಮುಖಾಮುಖಿಯಾಗುವುದು ಅಪರೂಪದ ಸಂಗತಿಯಾಗಿದ್ದು, ಸಿಎಸ್‌ಕೆ ತಂಡವು ಈ ವಿಶೇಷ ಭೇಟಿಗೆ ವೇದಿಕೆ ಕಲ್ಪಿಸಿಕೊಟ್ಟಿತ್ತು.
ನೆಟ್ಟಿಗರಲ್ಲಿ ಆಶ್ಚರ್ಯ ಹುಟ್ಟುಹಾಕಿದ್ದ ಹೋಲಿಕೆ
ಸಿಎಂ ವಿಜಯ್ ಅವರ ಪದಗ್ರಹಣದ ವೇಳೆ ವೇದಿಕೆಯ ಬಳಿ ಭದ್ರತಾ ಕಾರ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದವು. ಈ ಅಧಿಕಾರಿ ಸಿಎಸ್‌ಕೆ ತಂಡದ ಬೌಲರ್ ಅನ್ಶುಲ್ ಕಾಂಬೋಜ್ ಅವರನ್ನೇ ಹೋಲುತ್ತಿದ್ದುದರಿಂದ, ಅಭಿಮಾನಿಗಳು ಕಾಂಬೋಜ್ ಅವರೇ ಅಲ್ಲಿಗೆ ಹೋಗಿದ್ದಾರೆ ಎಂದು ಭಾವಿಸಿದ್ದರು. ಈ ಬಗ್ಗೆ ನೆಟ್ಟಿಗರು ದೊಡ್ಡ ಮಟ್ಟದಲ್ಲಿ ಚರ್ಚೆ ಆರಂಭಿಸಿದ್ದರಿಂದ, ಹಿರಿಯ ಕ್ರಿಕೆಟಿಗ ಆರ್. ಅಶ್ವಿನ್ ಕೂಡ ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು. ನಂತರ ಸಿಎಸ್‌ಕೆ ತಂಡವು ಅಧಿಕೃತವಾಗಿ ಸ್ಪಷ್ಟನೆ ನೀಡಿ, ಕಾಂಬೋಜ್ ಅವರು ಎಲ್‌ಎಸ್‌ಜಿ ವಿರುದ್ಧದ ಪಂದ್ಯಕ್ಕಾಗಿ ಕ್ರೀಡಾಂಗಣದಲ್ಲಿ ತಾಲೀಮು ನಡೆಸುತ್ತಿದ್ದಾರೆ ಎಂದು ತಿಳಿಸಿತ್ತು.
ವಿಡಿಯೋ ವೈರಲ್
ಈ ಕುರಿತು ಬಿಡುಗಡೆಯಾದ ವಿಡಿಯೋದಲ್ಲಿ ಮಾತನಾಡಿದ ಅನ್ಶುಲ್ ಕಾಂಬೋಜ್, “ನನ್ನ ಇನ್‌ಸ್ಟಾಗ್ರಾಮ್‌ಗೆ ಬಹಳಷ್ಟು ಜನ ಈ ಫೋಟೋವನ್ನು ಟ್ಯಾಗ್ ಮಾಡಿ ನಾನು ಅಲ್ಲಿ ಏನು ಮಾಡುತ್ತಿದ್ದೇನೆ ಎಂದು ಕೇಳುತ್ತಿದ್ದರು. ಅವರು ಸ್ವಲ್ಪ ಮಟ್ಟಿಗೆ ನನ್ನಂತೆಯೇ ಕಾಣುತ್ತಿರುವುದು ನಿಜ. ಆದರೆ ಅವರು ತಮ್ಮ ಪೊಲೀಸ್ ಟೋಪಿಯನ್ನು ತೆಗೆದರೆ ಮಾತ್ರ ನಾನು ಇನ್ನಷ್ಟು ಸ್ಪಷ್ಟವಾಗಿ ಹೋಲಿಕೆ ಮಾಡಲು ಸಾಧ್ಯ” ಎಂದು ನಗುತ್ತಾ ಹೇಳಿದ್ದಾರೆ. ಅಭ್ಯಾಸದ ಅವಧಿಯಲ್ಲಿ ಇಬ್ಬರೂ ಮುಖಾಮುಖಿಯಾಗಿ ಹರಟೆ ಹೊಡೆದಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.
Anshul meeting Anshul 😉#WhistlePodu pic.twitter.com/WWSxHDiGyY
— Chennai Super Kings (@ChennaiIPL) May 13, 2026
ಪ್ರಸಕ್ತ ಐಪಿಎಲ್ 2026ರಲ್ಲಿ ಅನ್ಶುಲ್ ಕಾಂಬೋಜ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈವರೆಗೆ 11 ಪಂದ್ಯಗಳನ್ನು ಆಡಿರುವ ಅವರು 19 ವಿಕೆಟ್ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆರಂಭದಲ್ಲಿ ಸತತ ಸೋಲು ಕಂಡಿದ್ದ ಚೆನ್ನೈ ತಂಡವು ಈಗ ಕಾಂಬೋಜ್ ಅವರ ಭರ್ಜರಿ ಬೌಲಿಂಗ್ ನೆರವಿನಿಂದ ಪಂದ್ಯಾವಳಿಯಲ್ಲಿ ಪ್ರಬಲವಾಗಿ ಪುಟಿದೆದ್ದಿದೆ. ಮುಂಬರುವ ಶುಕ್ರವಾರ ಅಂದರೆ ಮೇ 15 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಕಣಕ್ಕಿಳಿಯಲಿದ್ದು, ಕಾಂಬೋಜ್ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.
ಇದನ್ನೂ ಓದಿ: ತೆರಿಗೆ ಪಾವತಿಯಲ್ಲೂ ಧೋನಿ ‘ನಂಬರ್ 1’: ಜಾರ್ಖಂಡ್-ಬಿಹಾರದಲ್ಲಿ ಉದ್ಯಮಿಗಳನ್ನೇ ಹಿಂದಿಕ್ಕಿದ ಮಾಹಿ!
