ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರೈತರು ಮತ್ತು ಇಂಧನ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಹಲವು ಮಹತ್ವದ ಯೋಜನೆಗಳಿಗೆ ಅಸ್ತು ಎಂದಿದೆ. ಕೃಷಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (MSP) ಏರಿಸುವ ಮೂಲಕ ಕೇಂದ್ರ ಸರ್ಕಾರವು ರೈತ ಸಮುದಾಯಕ್ಕೆ ಬಂಪರ್ ಕೊಡುಗೆ ನೀಡಿದೆ.
ರೈತರಿಗೆ ಬೆಂಬಲ ಬೆಲೆಯ ಬಲ ಸರ್ಕಾರವು ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 2,441 ರೂಪಾಯಿಗಳಿಗೆ ಹೆಚ್ಚಿಸಿದೆ. ಅದೇ ರೀತಿ, ಗ್ರೇಡ್-ಎ ಗುಣಮಟ್ಟದ ಭತ್ತಕ್ಕೆ 2,461 ರೂಪಾಯಿಗಳ ದರ ನಿಗದಿಪಡಿಸಲಾಗಿದೆ. ರೈತರು ತಾವು ಮಾಡುವ ವೆಚ್ಚದ ಮೇಲೆ ಕನಿಷ್ಠ ಶೇ. 50ರಷ್ಟು ಲಾಭ ಪಡೆಯಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಒಟ್ಟು 2.60 ಲಕ್ಷ ಕೋಟಿ ರೂಪಾಯಿಗಳನ್ನು ಸರ್ಕಾರ ವ್ಯಯಿಸಲಿದೆ. ಈ ಕ್ರಮವು ದೇಶದ ಕೋಟ್ಯಂತರ ಅನ್ನದಾತರಿಗೆ ನೆರವಾಗಲಿದೆ.
ಇಂಧನ ಕ್ಷೇತ್ರದಲ್ಲಿ ಹೊಸ ಕ್ರಾಂತಿ ದೇಶದ ಇಂಧನ ಭದ್ರತೆಯನ್ನು ಹೆಚ್ಚಿಸಲು 37,500 ಕೋಟಿ ರೂಪಾಯಿ ವೆಚ್ಚದ ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಿಂದಾಗಿ ವಿದೇಶಗಳಿಂದ ಎಲ್‌ಎನ್‌ಜಿ ಆಮದು ಮಾಡಿಕೊಳ್ಳುವುದು ಕಡಿಮೆಯಾಗಲಿದ್ದು, ಭಾರತವು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಹೆಜ್ಜೆ ಇಡಲಿದೆ. ಭಾರತದ ಬಳಿ ಮುಂಬರುವ 400 ವರ್ಷಗಳಿಗೆ ಆಗುವಷ್ಟು ಕಲ್ಲಿದ್ದಲು ನಿಕ್ಷೇಪವಿದ್ದು, ಈ ಕ್ಷೇತ್ರದಲ್ಲಿ ಸುಮಾರು 3 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಗೆ ಸರ್ಕಾರ ಗುರಿ ಹಾಕಿಕೊಂಡಿದೆ.
ಮೂಲಸೌಕರ್ಯಕ್ಕೆ ಆದ್ಯತೆ ಕೃಷಿ ಮತ್ತು ಇಂಧನದ ಜೊತೆಗೆ ಮೂಲಸೌಕರ್ಯ ವೃದ್ಧಿಗೂ ಸಂಪುಟ ಸಭೆ ಒತ್ತು ನೀಡಿದೆ. ಈ ಭಾಗವಾಗಿ ನಾಗ್ಪುರ ವಿಮಾನ ನಿಲ್ದಾಣವನ್ನು ಅತ್ಯಾಧುನಿಕಗೊಳಿಸುವ ಪ್ರಸ್ತಾವನೆಗೆ ಸರ್ಕಾರ ಸಮ್ಮತಿ ಸೂಚಿಸಿದೆ. ಒಟ್ಟಾರೆಯಾಗಿ, ಇಂದಿನ ಸಭೆಯು ಕೃಷಿ ಲಾಭದಾಯಕವಾಗಿಸುವ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸುವ ದೃಷ್ಟಿಯಿಂದ ಐತಿಹಾಸಿಕ ಎನಿಸಿಕೊಂಡಿದೆ.
ಇದನ್ನೂ ಓದಿ: ಮಹತ್ವದ ಘೋಷಣೆ ಮಾಡಿದ ಏರ್ ಇಂಡಿಯಾ, ಪ್ರಯಾಣಿಕರಿಗೆ ಶಾಕ್
