ಕೇರಳ: ಚುನಾವಣಾ ಫಲಿತಾಂಶ ಬಂದು ಹತ್ತು ದಿನ ಕಳೆದರೂ ಮುಖ್ಯಮಂತ್ರಿ ಯಾರಾಗಬೇಕು ಎಂಬ ಗೊಂದಲ ಮುಂದುವರಿದಿದ್ದು, ಈ ನಡುವೆ ವಯನಾಡ್‌ನಲ್ಲಿ (Kerala) ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಿರುದ್ಧ ಆಕ್ರೋಶದ ಪೋಸ್ಟರ್‌ಗಳು ಪ್ರತ್ಯಕ್ಷವಾಗಿವೆ. ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬೆಂಬಲಿಸಿದರೆ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಈ ಪೋಸ್ಟರ್‌ಗಳ ಮೂಲಕ ಹೈಕಮಾಂಡ್‌ಗೆ ಎಚ್ಚರಿಕೆ ನೀಡಲಾಗಿದೆ. ವಯನಾಡ್‌ನ ಜಿಲ್ಲಾ ಕಾಂಗ್ರೆಸ್ ಕಚೇರಿ ಮತ್ತು ಮುಕ್ಕಂನಲ್ಲಿರುವ ಪ್ರಿಯಾಂಕಾ ಗಾಂಧಿ ಅವರ ಸಂಸದರ ಕಚೇರಿಯ ಮುಂದೆ ಬುಧವಾರ ಬೆಳಗಿನ ಜಾವ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.
ಯಾರೆಲ್ಲಾ ಇದ್ದಾರೆ ಸಿಎಂ ರೇಸ್‌ನಲ್ಲಿ?
ಮುಖ್ಯಮಂತ್ರಿ ಆಯ್ಕೆಗಾಗಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಒಂಬತ್ತು ಪ್ರಮುಖ ನಾಯಕರಲ್ಲಿ ಆರು ಮಂದಿ ಕೆ.ಸಿ. ವೇಣುಗೋಪಾಲ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಕೆ. ಮುರಳೀಧರನ್ ಮತ್ತು ವಿ.ಎಂ. ಸುಧೀರನ್ ಅವರು ವಿ.ಡಿ. ಸತೀಶನ್ ಅವರನ್ನು ಬೆಂಬಲಿಸಿದ್ದಾರೆ. ರಮೇಶ್ ಚೆನ್ನಿತ್ತಲ ಕೂಡ ಈ ರೇಸ್‌ನಲ್ಲಿದ್ದಾರೆ. ಶಾಸಕರ ಬೆಂಬಲ ವೇಣುಗೋಪಾಲ್ ಅವರಿಗೆ ಹೆಚ್ಚಿದ್ದರೂ, ಪಕ್ಷದ ಸಾಮಾನ್ಯ ಕಾರ್ಯಕರ್ತರು ಹಾಗೂ ಮೈತ್ರಿಪಕ್ಷಗಳಾದ ಮುಸ್ಲಿಂ ಲೀಗ್ ಮತ್ತು ಕೇರಳ ಕಾಂಗ್ರೆಸ್ (ಜೋಸೆಫ್) ಒಲವು ವಿ.ಡಿ. ಸತೀಶನ್ ಅವರ ಮೇಲಿದೆ. ಸತೀಶನ್ ಕಳೆದ ಐದು ವರ್ಷಗಳಿಂದ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿರುವುದು ಅವರ ಪರವಾದ ಜನಾಭಿಪ್ರಾಯಕ್ಕೆ ಮುಖ್ಯ ಕಾರಣವಾಗಿದೆ.
ವೇಣುಗೋಪಾಲ್ ವಿರುದ್ದವೂ ಆಕ್ರೋಶ
ಪ್ರತ್ಯಕ್ಷವಾಗಿರುವ ಪೋಸ್ಟರ್‌ಗಳಲ್ಲಿ ಅತ್ಯಂತ ಕಟು ಭಾಷೆ ಬಳಸಲಾಗಿದ್ದು, “ರಾಹುಲ್ ಅವರೇ, ಕೆ.ಸಿ. ವೇಣುಗೋಪಾಲ್ ನಿಮ್ಮ ಬ್ಯಾಗ್ ಹಿಡಿಯುವವರಾಗಿರಬಹುದು, ಆದರೆ ಕೇರಳದ ಜನ ಇಂತಹ ತಪ್ಪನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೆ, “ವಯನಾಡ್ ಕೂಡ ಮುಂದಿನ ಅಮೇಠಿ ಆಗಲಿದೆ” ಎಂದು ಎಚ್ಚರಿಸುವ ಮೂಲಕ ಗಾಂಧಿ ಕುಟುಂಬಕ್ಕೆ ಸೋಲಿನ ಭೀತಿ ಒಡ್ಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬುಧವಾರ ಮುಂಜಾನೆ 3 ಗಂಟೆಯ ಸುಮಾರಿಗೆ ವ್ಯಕ್ತಿಯೊಬ್ಬ ಈ ಪೋಸ್ಟರ್‌ಗಳನ್ನು ಹಚ್ಚುತ್ತಿರುವುದು ಕಂಡುಬಂದಿದೆ. ಕಾಂಗ್ರೆಸ್ ಕಾರ್ಯಕರ್ತರು ಈ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದು, ಇದು ವಿರೋಧ ಪಕ್ಷಗಳ ಕೈವಾಡವಿರಬಹುದು ಎಂಬ ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ. ಈಗಾಗಲೇ ತ್ರಿಶೂರ್ ಜಿಲ್ಲೆಯಲ್ಲಿ ಇದೇ ರೀತಿಯ ಪೋಸ್ಟರ್ ಅಂಟಿಸಿದ್ದ ಸಿಪಿಐ(ಎಂ) ಕಾರ್ಯಕರ್ತನೊಬ್ಬ ಸಿಕ್ಕಿಬಿದ್ದಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡಿದೆ.
ಕಳೆದ ವಾರ ಪ್ರಕಟವಾದ ಫಲಿತಾಂಶದಲ್ಲಿ ಯುಡಿಎಫ್ (UDF) ಮೈತ್ರಿಕೂಟವು 140 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಆದರೆ ಹತ್ತು ದಿನ ಕಳೆದರೂ ನಾಯಕನ ಆಯ್ಕೆ ಸಾಧ್ಯವಾಗದಿರುವುದು ಕಾರ್ಯಕರ್ತರಲ್ಲಿ ಆಕ್ರೋಶ ಮೂಡಿಸಿದೆ. ರಾಜ್ಯದಾದ್ಯಂತ ವಿ.ಡಿ. ಸತೀಶನ್ ಪರವಾಗಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಳಜಗಳದಿಂದಾಗಿ ಮೈತ್ರಿಕೂಟದ ಉತ್ಸಾಹ ಕುಂದುತ್ತಿದ್ದು, ಹೈಕಮಾಂಡ್ ಇಂದು ಬುಧವಾರ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ತಮಿಳುನಾಡು ‘CMO’ ಖಾತೆಗೆ ಫಾಲೋವರ್ಸ್‌ಗಳ ಸುರಿಮಳೆ, ಎಲ್ಲಾ ವಿಜಯ್ ಎಫೆಕ್ಟ್
