R Ashok: ಪ್ರಧಾನಿ ಮಾತಿಗೆ ಅಶೋಕ್‌ ಸಾಥ್‌, ಬೆಂಗಾವಲು ಪಡೆ ಕಡಿಮೆ ಮಾಡಿದ ನಾಯಕ

r ashok cuts his Escort vehicle numbers

ಬೆಂಗಳೂರು: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಮಿತವ್ಯಯದ ಕರೆಗೆ ಸ್ಪಂದಿಸಿರುವ ರಾಜ್ಯ ಬಿಜೆಪಿ ನಾಯಕರು, ಇಂಧನ ಉಳಿತಾಯದತ್ತ ಹೆಜ್ಜೆ ಇಟ್ಟಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಅವರು ತಮ್ಮ ಅಧಿಕೃತ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ವಾಹನಗಳ ಬಳಕೆ ಕಡಿತ, ಮೆಟ್ರೋ ಸಂಚಾರಕ್ಕೆ ಒತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಅಶೋಕ್, ಪ್ರಧಾನಿಯವರ ಸೂಚನೆಯನ್ನು ಪಾಲಿಸುವ ಸಲುವಾಗಿ ತಮ್ಮ ಬೆಂಗಾವಲು ವಾಹನಗಳ ಬಳಕೆಯನ್ನು ಶೇಕಡಾ 30 ರಿಂದ 40 ರಷ್ಟು ತಗ್ಗಿಸುವುದಾಗಿ ಘೋಷಿಸಿದ್ದಾರೆ. ಖಾಸಗಿ ಸಮಾರಂಭಗಳಿಗೆ ಹೋಗುವಾಗ ಅನಗತ್ಯವಾಗಿ ಹೆಚ್ಚಿನ ವಾಹನಗಳನ್ನು ಬಳಸುವುದಿಲ್ಲ ಮತ್ತು ವಾರದಲ್ಲಿ ಎರಡು ದಿನ ಸಾರ್ವಜನಿಕ ಸಾರಿಗೆಯಾದ ಮೆಟ್ರೋ ರೈಲಿನಲ್ಲಿ ಸಂಚರಿಸುವುದಾಗಿ ಅವರು ತಿಳಿಸಿದ್ದಾರೆ. ಕೇವಲ ವಾಹನಗಳಷ್ಟೇ ಅಲ್ಲದೆ, ವೈಯಕ್ತಿಕವಾಗಿಯೂ ಮಿತವ್ಯಯ ಅಳವಡಿಸಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ.

ಸರ್ಕಾರಕ್ಕೆ ಬಸ್ ಡೇ ಸಲಹೆ ಹಿಂದೆ ತಾವು ಸಾರಿಗೆ ಸಚಿವರಾಗಿದ್ದಾಗ ಯಶಸ್ವಿಯಾಗಿದ್ದ ‘ಬಸ್ ಡೇ’ ಯೋಜನೆಯನ್ನು ಈಗಿನ ಕಾಂಗ್ರೆಸ್ ಸರ್ಕಾರವೂ ಜಾರಿಗೆ ತರಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ. ಸರ್ಕಾರಿ ನೌಕರರು ವಾರಕ್ಕೆ ಒಮ್ಮೆಯಾದರೂ ಬಸ್‌ ಅಥವಾ ಮೆಟ್ರೋ ಮೂಲಕವೇ ಕಚೇರಿಗೆ ಬರಬೇಕು ಎಂಬ ನಿಯಮ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಅವರು ತಿಳಿಸಿದರು. ಜಾಗತಿಕ ಮಟ್ಟದಲ್ಲಿ ಯುದ್ಧದ ಛಾಯೆ ಇರುವುದರಿಂದ ಇಂಧನ ಸಂರಕ್ಷಣೆಗಾಗಿ ಸರ್ಕಾರಗಳು ಇಂತಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆ ಯುದ್ಧದ ಕಾರಣದಿಂದಾಗಿ ಸಮುದ್ರ ಮಾರ್ಗಗಳಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಪೆಟ್ರೋಲ್ ಹಾಗೂ ಅಡುಗೆ ಅನಿಲದ ಕೊರತೆ ಕಾಡುವ ಸಾಧ್ಯತೆ ಇದೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು ಪ್ರಧಾನಿಯವರು ನೀಡಿದ ಅಷ್ಟ ಸೂತ್ರಗಳನ್ನು ಗಂಭೀರವಾಗಿ ಪಾಲಿಸಬೇಕಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ದೇಶದ ಹಿತಕ್ಕಾಗಿ ಎಲ್ಲರೂ ಸಹಕರಿಸಬೇಕು ಎಂದು ಆಶಿಸಿರುವ ಅಶೋಕ್, ಸಮಸ್ಯೆ ಬಗೆಹರಿಯುವವರೆಗೂ ಈ ಮಿತವ್ಯಯದ ಹಾದಿಯಲ್ಲಿ ಸಾಗುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಬಸ್‌ ಪ್ರಯಾಣ ದರ ಹೆಚ್ಚಳ ಸದ್ಯಕ್ಕಿಲ್ಲ: ರಾಮಲಿಂಗಾ ರೆಡ್ಡಿ

Leave a Reply

Your email address will not be published. Required fields are marked *