ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ‘ಮಿತವ್ಯಯ’ದ ಕರೆಯನ್ನು ಯುವತಿಯೊಬ್ಬಳು ತನಗೆ ಬೇಕಾದಂತೆ ಬಳಸಿಕೊಂಡಿರುವ ರೀತಿ ಈಗ ಇಂಟರ್ನೆಟ್‌ನಲ್ಲಿ ಭಾರಿ ನಗು ಹರಿಸುತ್ತಿದೆ. ದೇಶಕ್ಕಾಗಿ ಇಂಧನ ಉಳಿಸಿ ಎಂದು ಪ್ರಧಾನಿ ಹೇಳಿದ್ದನ್ನೇ ಅಸ್ತ್ರವಾಗಿಸಿಕೊಂಡ ಸುಪ್ರಿಯಾ ಎಂಬ ಉದ್ಯೋಗಿ, ತನಗೆ 2027ರವರೆಗೆ ‘ವರ್ಕ್ ಫ್ರಮ್ ಹೋಮ್’ ಬೇಕೆಂದು ಕಂಪನಿಗೆ ಇಮೇಲ್ ಮಾಡಿದ್ದಾಳೆ.
ದೇಶಪ್ರೇಮದ ಹೆಸರಲ್ಲಿ ‘ಮನೆಗೆಲಸ’ದ ಬೇಡಿಕೆ
ಪಶ್ಚಿಮ ಏಷ್ಯಾದ ಯುದ್ಧದ ಭೀತಿಯಿಂದಾಗಿ ಪೆಟ್ರೋಲ್ ಉಳಿಸಲು ಪ್ರಧಾನಿ ಮೋದಿ ಜನತೆಗೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ (ಅಥವಾ ತಮಾಷೆಯಾಗಿ) ತೆಗೆದುಕೊಂಡ ಸುಪ್ರಿಯಾ, ತನ್ನ ಕಂಪನಿಯ ಎಚ್‌ಆರ್ (HR) ವಿಭಾಗಕ್ಕೆ ಇಮೇಲ್ ಬರೆದಿದ್ದಾಳೆ. “ದೇಶದ ಇಂಧನ ಉಳಿಸುವಂತೆ ಪ್ರಧಾನಿಗಳು ಕರೆ ನೀಡಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು, ದೇಶದ ಹಿತದೃಷ್ಟಿಯಿಂದ ನಾನು ಮುಂದಿನ ಒಂದು ವರ್ಷ ಅಂದರೆ ಮೇ 2027ರವರೆಗೆ ಮನೆಯಿಂದಲೇ ಕೆಲಸ ಮಾಡುತ್ತೇನೆ. ಇದು ನನ್ನ ದೇಶಕ್ಕೆ ನಾನು ಸಲ್ಲಿಸುವ ಅಳಿಲು ಸೇವೆ” ಎಂದು ಆಕೆ ಬರೆದುಕೊಂಡಿದ್ದಾಳೆ. ಈ ಇಮೇಲ್ ಸ್ಕ್ರೀನ್‌ಶಾಟ್ ಅನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.
I’ve done my part for the nation… your turn now 🙌🏻 pic.twitter.com/dYpqBtM4Ke
— SUPRIYA (@Supriyashrivxst) May 11, 2026
ಎಚ್‌ಆರ್ ಮಂದಿಗೆ ನೆಟ್ಟಿಗರ ‘ಸಲಹೆ’
ಸುಪ್ರಿಯಾಳ ಈ ಅತಿಬುದ್ಧಿವಂತಿಕೆಯನ್ನು ಕಂಡ ನೆಟ್ಟಿಗರು ಕಾಲೆಳೆಯಲು ಶುರು ಮಾಡಿದ್ದಾರೆ. ಎಚ್‌ಆರ್ ಇದಕ್ಕೆ ಯಾವ ರೀತಿ ತಿರುಗೇಟು ನೀಡಬಹುದು ಎಂದು ಜನರು ಊಹಿಸಿರುವ ಕಾಮೆಂಟ್‌ಗಳು ಹೀಗಿವೆ:
- “ಡಿಯರ್ ಸುಪ್ರಿಯಾ, ನಿಮ್ಮ ದೇಶಪ್ರೇಮ ಕಂಡು ನಮಗೆ ಹೆಮ್ಮೆಯಾಗಿದೆ. ನಿಮ್ಮ ದೇಶಪ್ರೇಮಕ್ಕೆ ಗೌರವ ನೀಡಿ ನಾವು ನಿಮ್ಮನ್ನು ಸಂಬಳದ ಕಿರಿಕಿರಿಯಿಂದಲೂ ಶಾಶ್ವತವಾಗಿ ಮುಕ್ತಗೊಳಿಸುತ್ತಿದ್ದೇವೆ” ಎಂದು ಎಚ್‌ಆರ್ ಹೇಳಬಹುದು ಎಂದು ಒಬ್ಬರು ಕಿಚಾಯಿಸಿದ್ದಾರೆ.
- “ಜಾಗ್ರತೆ ಸುಪ್ರಿಯಾ, ವರ್ಕ್ ಫ್ರಮ್ ಹೋಮ್ ಕೇಳಲು ಹೋಗಿ ಕೆಲಸವೇ ಇಲ್ಲದೆ ಮನೆಯಲ್ಲೇ (Home without work) ಇರಬೇಕಾದೀತು” ಎಂದು ಇನ್ನೊಬ್ಬರು ಎಚ್ಚರಿಸಿದ್ದಾರೆ.
- “ಇಷ್ಟೆಲ್ಲಾ ದೇಶಪ್ರೇಮ ಇರುವಾಗ ಸಂಬಳವನ್ನು ಕೂಡ ಮೋದಿ ಅವರ ಬಳಿಯೇ ಕೇಳಿ ಪಡೆಯಿರಿ” ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.
ತಮಾಷೆಯ ನಡುವೆ ಗಂಭೀರ ಚರ್ಚೆ
ಒಂದೆಡೆ ಇದು ಕೇವಲ ಹಾಸ್ಯದ ಸಂಗತಿಯಾಗಿ ಕಂಡರೂ, ಮತ್ತೊಂದೆಡೆ ನಗರಗಳಲ್ಲಿನ ಟ್ರಾಫಿಕ್ ಸಮಸ್ಯೆ ಮತ್ತು ಇಂಧನದ ಬೆಲೆ ಏರಿಕೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಆಫೀಸ್‌ಗೆ ಹೋಗಿ ಬರಲು ಹರಸಾಹಸ ಪಡುತ್ತಿರುವ ಉದ್ಯೋಗಿಗಳು, ಸುಪ್ರಿಯಾಳ ಈ ‘ಐಡಿಯಾ’ವನ್ನೇನೋ ಮೆಚ್ಚಿಕೊಂಡಿದ್ದಾರೆ, ಆದರೆ ಆಕೆಯ ಕೆಲಸ ಉಳಿಯುತ್ತದೆಯೇ ಎಂಬ ಕುತೂಹಲ ಮಾತ್ರ ಎಲ್ಲರಲ್ಲಿದೆ!
