TOP NEWS

Health Tips: ಅಪ್ಪಿ-ತಪ್ಪಿ ಈ ವಸ್ತುಗಳನ್ನ ಶೇರ್‌ ಮಾಡಿಕೊಳ್ಳಬೇಡಿ, ಆರೋಗ್ಯ ಸಮಸ್ಯೆ ಫಿಕ್ಸ್

Health Tips never ever share these items with anybody

ದಂಪತಿಗಳು ಅಥವಾ ಒಂದೇ ಮನೆಯಲ್ಲಿ ವಾಸಿಸುವವರು ಪರಸ್ಪರ ಪ್ರೀತಿ-ವಿಶ್ವಾಸದಿಂದ ಎಲ್ಲವನ್ನೂ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಆರೋಗ್ಯದ ದೃಷ್ಟಿಯಿಂದ ಕೆಲವು ವೈಯಕ್ತಿಕ (Health Tips) ವಸ್ತುಗಳನ್ನು ಹಂಚಿಕೊಳ್ಳುವುದು ಅತಿ ದೊಡ್ಡ ತಪ್ಪು ಎನ್ನುತ್ತಾರೆ ತಜ್ಞರು. ಅತಿಯಾದ ಅನ್ಯೋನ್ಯತೆ ಇದ್ದರೂ ಸಹ ಕೆಲವು ಸ್ವಚ್ಛತೆಗೆ ಸಂಬಂಧಿಸಿದ ವಸ್ತುಗಳನ್ನು ಬೇರೆಯವರೊಂದಿಗೆ ಬಳಸುವುದರಿಂದ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್‌ಗಳು ಒಬ್ಬರಿಂದ ಒಬ್ಬರಿಗೆ ಹರಡಿ ಚರ್ಮದ ಕಾಯಿಲೆಗಳು ಹಾಗೂ ಗಂಭೀರ ಸೋಂಕುಗಳಿಗೆ ದಾರಿ ಮಾಡಿಕೊಡುತ್ತವೆ.

ಒಂದೇ ಬಾಚಣಿಗೆ ಬಳಕೆ ಮಾಡಬಾರದು

ಮನೆಮಂದಿಯೆಲ್ಲಾ ಒಂದೇ ಬಾಚಣಿಗೆಯನ್ನು ಬಳಸುವುದು ಬಹುತೇಕ ಮನೆಗಳಲ್ಲಿ ಕಂಡುಬರುವ ಅಭ್ಯಾಸ. ಆದರೆ ಇದು ಅಷ್ಟೇ ಅಪಾಯಕಾರಿ. ಒಬ್ಬರ ತಲೆಯಲ್ಲಿರುವ ಹೊಟ್ಟು, ಪೇನು ಅಥವಾ ಫಂಗಲ್ ಸೋಂಕು ಬಾಚಣಿಗೆಯ ಮೂಲಕ ಸುಲಭವಾಗಿ ಮತ್ತೊಬ್ಬರಿಗೆ ಹರಡುತ್ತದೆ. ಬಾಚಣಿಗೆಯ ಹಲ್ಲುಗಳ ಮಧ್ಯೆ ಚರ್ಮದ ಮೃತ ಕೋಶಗಳು ಮತ್ತು ಎಣ್ಣೆ ಅಂಶ ಸಂಗ್ರಹವಾಗುವುದರಿಂದ ಅಲ್ಲಿ ಕಣ್ಣಿಗೆ ಕಾಣದ ಕ್ರಿಮಿಗಳು ಬೆಳೆಯುತ್ತವೆ. ಇದರಿಂದ ಕೂದಲು ಉದುರುವುದು ಹಾಗೂ ತಲೆಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರತ್ಯೇಕ ಬಾಚಣಿಗೆ ಹೊಂದುವುದು ಉತ್ತಮ.

ಅಂತೆಯೇ ಸ್ನಾನದ ನಂತರ ಬಳಸುವ ಟವಲ್ ಕೂಡ ಎಂದಿಗೂ ಹಂಚಿಕೊಳ್ಳಬಾರದ ವಸ್ತುಗಳ ಪಟ್ಟಿಯಲ್ಲಿದೆ. ಟವಲ್ ಯಾವಾಗಲೂ ತೇವವಾಗಿರುವುದರಿಂದ ಅಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ವೃದ್ಧಿಸುತ್ತವೆ. ಮನೆಯಲ್ಲಿ ಯಾರಿಗಾದರೂ ಚರ್ಮದ ಅಲರ್ಜಿ ಅಥವಾ ಕಣ್ಣಿನ ಸೋಂಕು ಇದ್ದರೆ, ಅದೇ ಟವಲ್ ಬಳಸುವ ಇತರರಿಗೂ ಆ ಸಮಸ್ಯೆ ಹರಡುತ್ತದೆ. ಬಳಸಿದ ಟವಲ್‌ಗಳನ್ನು ಪ್ರತಿದಿನ ಸರಿಯಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ.

ಇನ್ನು ಮುಖ ಹಾಗೂ ಮೈಗೆ ಹಚ್ಚುವ ಸೋಪಿನ ವಿಷಯದಲ್ಲೂ ಎಚ್ಚರವಿರಲಿ. ಒಂದೇ ಸೋಪನ್ನು ಎಲ್ಲರೂ ಬಳಸಿದಾಗ ಒಬ್ಬರ ಚರ್ಮದ ಮೇಲಿರುವ ಕ್ರಿಮಿಗಳು ಸೋಪಿನ ಮೇಲೆ ಅಂಟಿಕೊಂಡು ಮತ್ತೊಬ್ಬರ ದೇಹವನ್ನು ಸೇರುತ್ತವೆ. ಅದರಲ್ಲೂ ಚರ್ಮದ ಮೇಲೆ ಗಾಯ ಅಥವಾ ಇನ್ಫೆಕ್ಷನ್ ಇದ್ದರೆ ಅದು ಬೇರೆಯವರಿಗೂ ತಗುಲುವ ಸಾಧ್ಯತೆ ಇರುತ್ತದೆ. ಸೋಪಿನ ಬದಲು ಲಿಕ್ವಿಡ್ ಸೋಪ್ ಅಥವಾ ಬಾಡಿ ವಾಶ್ ಬಳಸುವುದು ಹೆಚ್ಚು ಸುರಕ್ಷಿತ. ಹಾಗೆಯೇ ರೇಜರ್ ಅಥವಾ ಕ್ಷೌರದ ಬ್ಲೇಡ್‌ಗಳನ್ನು ಹಂಚಿಕೊಳ್ಳುವುದು ಅತ್ಯಂತ ಅಪಾಯಕಾರಿ. ಶೇವಿಂಗ್ ಮಾಡುವಾಗ ಚರ್ಮದ ಮೇಲೆ ಸಣ್ಣ ಗಾಯಗಳಾಗಿ ರಕ್ತ ತಗುಲಿರಬಹುದು. ಇದರಿಂದ ಹೆಪಟೈಟಿಸ್‌ನಂತಹ ಗಂಭೀರ ವೈರಸ್‌ಗಳು ಹರಡುವ ಭೀತಿ ಇರುತ್ತದೆ.

ದೇಹದ ದುರ್ವಾಸನೆ ತಡೆಯಲು ಬಳಸುವ ರೋಲ್-ಆನ್ ಡಿಯೋದರಂಟ್‌ಗಳನ್ನು ಕೂಡ ಇತರರಿಗೆ ನೀಡಬೇಡಿ. ಚಂಕದ ಭಾಗದಲ್ಲಿ ಬೆವರಿನಿಂದಾಗಿ ಬ್ಯಾಕ್ಟೀರಿಯಾಗಳು ಹೆಚ್ಚಿರುತ್ತವೆ, ಇವು ಒಬ್ಬರಿಂದ ಒಬ್ಬರಿಗೆ ಹರಡಿ ಚರ್ಮದ ತುರಿಕೆ ಅಥವಾ ದುರ್ವಾಸನೆಗೆ ಕಾರಣವಾಗುತ್ತವೆ. ವೈಯಕ್ತಿಕ ಸ್ವಚ್ಛತೆ ಎಂಬುದು ಸಣ್ಣ ವಿಷಯವಾಗಿ ಕಂಡರೂ, ಈ ಸಣ್ಣ ಮುನ್ನೆಚ್ಚರಿಕೆಗಳು ನಮ್ಮನ್ನು ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗಳಿಂದ ದೂರವಿಡುತ್ತವೆ.

ಇದನ್ನೂ ಓದಿ: ಸದ್ಗುರು ಅಲ್ಪ ನಿದ್ರೆಯ ಗುಟ್ಟು, ಆರೋಗ್ಯದ ಬಗ್ಗೆ ಹೆಚ್ಚಿದ ಕಾಳಜಿ

Leave a Reply

Your email address will not be published. Required fields are marked *