TOP NEWS

Crime: ಟಾಲಿವುಡ್‌ನಲ್ಲಿ ಶೋಕ ಸಾಗರ: ಭೀಕರ ಅಪಘಾತಕ್ಕೆ ಬಲಿಯಾದ ನಟ ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್!

Crime tollywood actor bharath and cinematographer sai trilok lost life

ಹೈದರಾಬಾದ್: ತೆಲುಗು ಚಿತ್ರರಂಗದ ಭರವಸೆಯ ನಟ, ಖ್ಯಾತ ಯೂಟ್ಯೂಬರ್ ಭರತ್ ಕಾಂತ್ ಹಾಗೂ ಸಿನಿಮಾಟೋಗ್ರಾಫರ್ ಸಾಯಿ ತ್ರಿಲೋಕ್ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ (Crime) ಅಪಘಾತದಲ್ಲಿ ಬಲಿಯಾಗಿದ್ದಾರೆ. ಯೌವನದ ಹೊಸ್ತಿಲಲ್ಲಿದ್ದ ಈ ಇಬ್ಬರೂ ಪ್ರತಿಭೆಗಳು ಕೇವಲ 31ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಸಿನಿಮಾ ಪ್ರೇಮಿಗಳಲ್ಲಿ ತೀವ್ರ ನೋವುಂಟು ಮಾಡಿದೆ.

ನಿಯಂತ್ರಣ ತಪ್ಪಿ ಕಂಟೈನರ್‌ಗೆ ಡಿಕ್ಕಿ ಹೊಡೆದ ಕಾರು

ನೆಹರು ಔಟರ್ ರಿಂಗ್ ರೋಡ್‌ನಲ್ಲಿ ಈ ಭೀಕರ ಘಟನೆ ನಡೆದಿದೆ. ಎಕ್ಸಿಟ್ ನಂಬರ್ 12ರ ಸಮೀಪ ಭರತ್ ಕಾಂತ್ ಚಲಾಯಿಸುತ್ತಿದ್ದ ಕಾರು ವೇಗವಾಗಿ ಹೋಗಿ ಕಂಟೈನರ್ ಲಾರಿಯ ಹಿಂಭಾಗಕ್ಕೆ ಅಪ್ಪಳಿಸಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಂಭೀರ ಪೆಟ್ಟು ಬಿದ್ದ ಕಾರಣ ಭರತ್ ಮತ್ತು ತ್ರಿಲೋಕ್ ಇಬ್ಬರೂ ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆದಿಬಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಪ್ರತಿಭಾನ್ವಿತ ನಟನಿಗೆ ಒಲಿದಿದ್ದ ಜನಪ್ರಿಯತೆ

ಭರತ್ ಕಾಂತ್ ಕೇವಲ ಬೆಳ್ಳಿತೆರೆಯಲ್ಲಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ದೊಡ್ಡ ಅಭಿಮಾನಿ ಬಳಗ ಹೊಂದಿದ್ದರು. ನೃತ್ಯ ಮತ್ತು ಕ್ರಿಯಾತ್ಮಕ ವಿಡಿಯೋಗಳ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಮನೆಮಾತಾಗಿದ್ದರು. ‘ಗ್ರಾಮಂ’ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದ ಇವರು, ಇತ್ತೀಚೆಗಷ್ಟೇ ತೆರೆಕಂಡ ‘ಟೆನೆಂಟ್’ ಸಿನಿಮಾದಲ್ಲೂ ಗಮನಾರ್ಹ ಪಾತ್ರ ಮಾಡಿದ್ದರು. ಚಿತ್ರರಂಗದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದ ಬೆನ್ನಲ್ಲೇ ಈ ಸಾವು ಸಂಭವಿಸಿರುವುದು ವಿಧಿಯಾಟವೇ ಸರಿ.

ಭರತ್ ಸಾವಿನ ಸುದ್ದಿ ಕೇಳಿ ಅವರ ಆತ್ಮೀಯ ಸ್ನೇಹಿತೆ, ಬಿಗ್ ಬಾಸ್ ಖ್ಯಾತಿಯ ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿದ್ದಾರೆ. “ನನ್ನ ಅತ್ಯಾಪ್ತ ಗೆಳೆಯ, ನನ್ನ ಕುಟುಂಬದ ಸದಸ್ಯನಂತಿದ್ದ ಭರತ್ ಇಲ್ಲವಾಗಿದ್ದಾನೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಕಂಬನಿ ಮಿಡಿದಿದ್ದಾರೆ. ನಟಿ ಚಾಂದಿನಿ ಕೌರ್ ಕೂಡ ಆಘಾತ ವ್ಯಕ್ತಪಡಿಸಿದ್ದು, ಇಡೀ ಚಿತ್ರರಂಗ ಇಬ್ಬರು ಯುವ ಪ್ರತಿಭೆಗಳನ್ನು ಕಳೆದುಕೊಂಡು ಮೌನಕ್ಕೆ ಶರಣಾಗಿದೆ.

ಅಪಘಾತದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಅತೀ ವೇಗವೇ ಈ ಅವಘಡಕ್ಕೆ ಕಾರಣ ಇರಬಹುದೆಂದು ಶಂಕಿಸಲಾಗಿದೆ.

ಇದನ್ನೂ ಓದಿ: ಸಿಎಂ ವಿಜಯ್‌ಗೆ ಡ್ರೈವಿಂಗ್ ಕಿಕ್ ಕೊಡೋದು ತ್ರಿಶಾ ಅಭಿನಯದ ಆ ಹಾಡಂತೆ! ಹಳೆಯ ವಿಡಿಯೋ ಈಗ ಫುಲ್ ವೈರಲ್

Leave a Reply

Your email address will not be published. Required fields are marked *